Tuesday 25 December, 2012

ವ್ಯಾಮೋಹ



ವ್ಯಾಮೋಹ


ಸಿಗುವವರೆಗೂ ಎಡಬಿಡದ 

ಆ ಉತ್ಸಾಹ ,ಕಳವಳ,ತವಕ ...


ಸಿಕ್ಕ ಮರುಕ್ಷಣವೇ ನುಗ್ಗಿಬಂತು ಅದೆಲ್ಲಿಂದ 

ಹಳೆಯದರ ಈ "ವ್ಯಾಮೋಹ" ...



ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸಾಗಿತು ಮನವು ಆಗ ,

ಹುಡುಕುತಿಹುದು ಕೈಬಿಟ್ಟ "ನೆನ್ನೆ"ಗಳಿಗೆ ಮತ್ತೆ ಈಗ...



ನಗಬೇಕೋ ,ಅಳಬೇಕೋ 

ಈ ಹುಚ್ಚಾಟಕೆ, ಚಂಚಲ ಮನದ ಕಪಟಕೆ, 


ತಿಳಿಯದಾಗಿದೆ ಏನೊಂದೂ ನನಗೀಗ ...


-ಪ್ರಜ್ಞಮಾಲಾ


Friday 21 December, 2012

ಒಲುಮೆ


ಒಲುಮೆ

ನಿನಗಾಗೆ ಪ್ರತಿ ಕ್ಷಣವೂ ಕಾದು ಸೋತಿರುವೆ ...
ನಿನ್ನೆಡೆಗೆ ಓಡುವ ಮನಸಿನ 
ವಿಪರೀತ ಆಟಕೆ ದಿನವೂ ಸಾಯುತಿರುವೆ ....

ಈ ಮೌನವೇಕೆ ?

ಅಂಜಿಕೆಯು ನಿನಗೇಕೆ  ?

ಬಂದುಬಿಡು
ಒಮ್ಮೆ ನನ್ನೆಡೆಗೆ ,
ತೋರಿಬಿಡು ನಿನ್ನ ಒಲುಮೆ ...


ಪ್ರತಿ ಹೆಜ್ಜೆಯಲಿ ಜೊತೆಯಾಗಿ...
ಉಸಿರುಸಿರಲೇ  ಕೂಡಿ...
 
ಕಹಿಯ ನೋವ ಕರಗಿಸಿ ,
ಸಿಹಿಯ ಘಮವ ಹರಡಿ,
ಬೆಸೆಯುವೆ ನಮ್ಮ ಬೆಸುಗೆಯ ಬಿಗಿಯಾಗಿ...
 
ಒಂದಾಗುವೆ ನಿನ್ನ ಬಾಳಲಿ  ಸಖಿಯಾಗಿ,
ನಿನ್ನ ಒಲವಾಗಿ, ಪ್ರೀತಿಯ ಕಣ್ಣಾಗಿ...
 

 

Saturday 17 November, 2012

ನೆನಪು : ಸಾಧಿಸುವ ಅನಿವಾರ್ಯ ಛಲ ಮನಸಿನಲ್ಲಿ ಮೂಡಿ, ದೂರ ಬಂದಾಯ್ತು ...ಆದರೆ, ನನ್ನವರ ಆತ್ಮೀಯ "ಬೆಸುಗೆ" ಪ್ರತಿ ಕ್ಷಣ ಅಯಸ್ಕಾಂತದಂತೆ ಸೆಳೆಯುತ್ತಿದೆ .. ಅವರ ಸಾಂಗತ್ಯ,ಸಾಮಿಪ್ಯಕ್ಕೆ ಮನ ಹಪ-ಹಪಿಸುತ್ತಿದೆ



" ನೆನಪು "



ನೆನಪುಗಳ ಲಹರಿಯು ಕದಡಿಹುದು ಮನವ  ಇಂದು 


ಭಾವನೆಗಳ ದ್ವಾರವು ಕಟ್ಟೆ ಒಡೆದಿಹುದು ಏಕೋ  ಇಂದು...

ನಗಿಸಿ ಪುಳಕಿತಗೊಳಿಸಿದರೆ ಕೆಲವಷ್ಟು  ...

ಉದ್ವೇಗಗಳ ಸುಳಿಯಲ್ಲಿ ಸೆಳೆಯುತಿಹವು ಮತ್ತಷ್ಟು ...


ಕಳೆದುಹೋದ ಕ್ಷಣಗಳ...ಕಳೆಯಲಾಗದ ಹೊತ್ತುಗಳ... ನೆನೆನೆನೆದು ,

ಚಂದಿರಗೆ ಹಾತೊರೆವ ಸಾಗರದಂತಾಗಿದೆ, 

ನನ್ನವರ ನೆನಪುಗಳಲಿ ಮನವು ಇಂದು ...


ಆಸೆ



ಆಸೆ ಎಂಬ  ಪಕ್ಷಿ ...

ಹುಡುಕಿ ಬಂದರೆ ಭಾಗ್ಯ ,
ಜೊತೆಯಾಗೆ  ಸುಯೋಗ ,
ಮಿತಿ-ಮೀರೆ  ಪ್ರಳಯಾಂತಕ
ಮರೆಯಾಗೆ ಆತನೇ  ನಿರ್ಗುಣ 
                                                

Tuesday 2 October, 2012

ಮುಕ್ತ



ಮುಕ್ತ ...?


ಬಾಳ ನವ್ಯಶಕ್ತಿ  ಸವಿದಷ್ಟು ತಣಿಯದು ಗೆಳೆಯಾ ...

ಸಹನೆಯ ಅಂಗಳದಲಿ 
ತೃಪ್ತಿ-ಸಂಯಮಗಳ ಹೂಗಳರಳಿರಲು,
ಜ್ಞಾನ- ಆತ್ಮಾಭಿಮಾನಗಳ ಹಸಿರೆಲೆ ಚಿಗುರಿರಲು ,
ಪ್ರೀತಿ-ಮಮತೆಗಳ ಸಿಹಿ ಗಾಳಿ ಬೀಸುತಿರಲು 
ಬಾಳು ಅದೆಷ್ಟು ಹಸನಲ್ಲೋ  ಮನುಜಾ ...?
ಕಷ್ಟಗಳು -ಇಳಿತಗಳು "ಶಾಶ್ವತ"ವೆಂದು ಮರುಗುವೆ  ಏಕೋ ಮರುಳಾ ...?

ಬದುಕಬೇಕು , ಬದುಕಿ ಬಾಳಬೇಕು ...
ಸೃಷ್ಟಿಯ ಮಾಯೆಗೆ ಕೈ ಮುಗಿದು, ಬೆಳಕು ಹರಡಬೇಕೋ ಗೆಳೆಯಾ ...

"ಇಷ್ಟಿರುವುದ" ಅಷ್ಟು ಮಾಡಿ,
ಇರುವೆಯ ಆನೆ ಮಾಡಿ ...
ವಾಸ್ತವಕೆ ಬೀಗ ಜಡಿದು ,
ಬಿಸಿಲ್ಗುದುರೆಯ ಬೆನ್ನೇರುವೆ ಏಕೋ ಮರುಳಾ ...?


ಕೆರಳಿ-ಉದ್ವೇಗದಲಿ ಅಧಃಪತನವಾಗುವೆ ಏಕೋ?
ತೆರೆಯ ಹಿಂದೆ ಸರಿದು , ಬಾಡಿ  ಹೋಗುವೆ ಏಕೋ?

ನೀರೂರಿ ಪೋಷಿಸಿದವರ ನೋಯಿಸುವೆ  ಏಕೋ ?
ನಿನ್ನವರನು ಅಶ್ರುಧಾರೆಯ ಕೂಪಕೆ ತಳ್ಳುವೆ ಏಕೋ?

ಭರವಸೆ-ಆಸೆಗಳ ಚೂರಾಗಿಸಿ, 
ಹಾಲ್ - ಉಣಿಸಿದ ಮಡಿಲಿಗೆ ಮುಳ್ಳಾಗಿ ,
ತೊರೆದು ಹೋಗೆ...  
"ಮುಕ್ತ"ನು ನೀನು ಅದ್ಹೇಗೋ ಗೆಳೆಯಾ ?...
     

ಬದುಕಬೇಕು , ಬದುಕಿ ಬಾಳಬೇಕು ...
ಬಾಳ ಕಹಿಯಲಿ ಬೆಂದು ,ಸಿಹಿಯ ಚೆಲುವ ಅಸ್ವಾದಿಸದೇ 
"ಹೇಡಿ"ಯಾಗಿ ಜಗವ ತೊರೆದರೆ. . . 
ಏನು ಚೆನ್ನ ಗೆಳೆಯಾ...?

-ಪ್ರಜ್ಞಮಾಲಾ

Thursday 27 September, 2012

ಪ್ರೇಮಸುಧೆ




ಇಂದು ನನಗೇನಾಗಿದೆ,

ಮನಸು ನಿನ್ನೆಡೆಗೆ ಓಡುತಿದೆ ...


ಸ್ನಿಗ್ಧ , ಸುಂದರ ನಗುವ ಕಂಡು ,
ಹೃದಯ ಕಮಲ ಅರಳಿ ನಗುತಿದೆ 

ಕಣ್ಣೋಟದ ಮಿಂಚು ಸುಳಿದು    
ಕನಸೊಂದು  ಮುತ್ತಾಗಿ ಹೊಳೆದಿದೆ ...

ನಿನ್ನ ಮೋಹ ಮಾಯೆಗೆ 

ಮನ ಪತಂಗವಾಗಿ ನಲಿದಿದೆ ...


ಇನಿತು ಚಿಂತೆ ಇರದೇ  ,
ದುಂಬಿಯಾಗಿ  ಮನ ನಿನ್ನ ಸವಿಯ ಬಯಸಿದೆ...

ಚಿರನೂತನ  ಈ  ಅನುಭಾವಕೆ,
ಮನವು  ಹಗುರವಾಗಿದೆ, ಹರುಷಗೊಂಡಿದೆ  ...

ಅಂತರಂಗದಲ್ಲಿ ನಿನ್ನ ಭಾವ ಲೀನವಾಗಿದೆ...

ಪ್ರೇಮಸುಧೆಯ ಭಾವಗೀತೆ , 
 ರಮ್ಯಗಾನವ ನಿನಗೆಂದೇ  ಉಲಿಯುತಲಿದೆ ...

ಹಿಮ ಕರಗಿದ ಬಳಿಕ


ಹಿಮ ಕರಗಿದ ಬಳಿಕ

ಹಕ್ಕಿಯ ಇಂಚರದಲ್ಲಿ, 
ನೇಸರನ ಕೆಂಪಿನಲ್ಲಿ ,  
ಹಿಮದ ತಂಪಿನಲ್ಲಿ 
ನಿನ್ನ ನೆನಪುಗಳು ನನ್ನ ಅಪ್ಪಿಹುದು ಗೆಳೆಯ 
ಬಾಳಲಿ  ಪ್ರೀತಿಯ ಮಾಧುರ್ಯವ 
ತುಂಬಿದವ ನೀನೇ  ಇನಿಯ 

ಕನಸುಗಳ ಬಳ್ಳಿ ಮುರುಟಿತು ಹೇಗೋ   
ಕಳೆದು ಹೋದೆ ನೀನು ,ಮರೆಯಾದೆ ನೀನು... 



ಒಲವ  ಜ್ವಾಲೆಯ ನಿರಂತರ ಉರಿಸಿಹೆನು ನಾನು
ಮೇಣದಂತೆ  ಕರಗುತಿಹೆನು  ನಾನು
ಪ್ರೀತಿಯ ಅಮಿತ ಹಿತವ   
ನಿನಗಾಗೆ ಕಾಯ್ದಿರಿಸಿಹೆನು  ನಾನು  

ಮನಸು ಕರಗದೆ ನಿನಗೆ ?
ನೆನಪುಗಳು ಕಾಡದೆ ನಿನಗೆ ?
ಕಂಡರೂ ಕಾಣದಂತೆ ,
ನಿರ್ಜೀವ ಕೊರಡಾಗಿಹೆ ಏಕೋ ...
ನೀ ಹೀಗೇಕೋ ?....

ಹಿಮ ಕರಗಿದ ಬಳಿಕ ...
ಕತ್ತಲು ಕವಿದ ಬಳಿಕ ..
ಕಾಲ ನಿಂತ ಬಳಿಕ ...
ತೋರುವೆ ಯಾರಿಗೆ  ಆ ಪ್ರೀತಿಯ ಹೇಳು,
ಸಮಯ ನಶಿಸಿದ ಬಳಿಕ ...?



Saturday 15 September, 2012

" ನನ್ನವನು "

" ನನ್ನವನು " 


ಪ್ರೀತಿಯ ನಿರಾಸೆಯಲಿ ಬೇಯಲಾರೆ  ಇನ್ನು ....

ಕಾಯ್ದಿರಿಸುವೆನು ಭದ್ರದಲಿ ಹೃದಯದ ಚೂರುಗಳ ನಾನು ,

ಬಂದೇ  ಬರುವನು ಅವನು 

ಚೂರುಗಳ ಇರಿತಕೆ ಇಬ್ಬನಿಯಾಗುವವನು,

ಕಹಿ-ಕದಡಿದ ಮನಕೆ ಸಿಹಿ-ಜೇನ ಲೇಪಿಸುವವನು   


ಬರುವನು ಅವನು ,

ಬಾಡಿ ಹೋದ ಬಯಕೆಗಳ  ಚೇತನವಾಗುವವನು

ನೊಂದ ಮನಕೆ ನಂಬುಗೆಯ  ಶಾಕವಾಗುವವನು


ದಿಗ್ಗೆಡಿಸುವ ಕತ್ತಲಲಿ  ಬೆಳದಿಂಗಳಾಗುವವನು

ಬಾಳ ಪಟದಲಿ ನವ್ಯ ಕನಸುಗಳ ಬಿತ್ತುವವನು  


ಬರುವನು ಅವನು  

 ಭುಗಿಲೆದ್ದ  ಎಕಾಂತಕೆ ಅಂತ್ಯ  ಹಾಡುವನು

ಪ್ರೀತಿಯ  ಪಸರಿಸಿ , ಮನವ ಬೆಳಗುವ  ಪ್ರಭೆಯಾಗುವನು   

ಕಣ್ಣೀರ  ಮುತ್ತಾಗಿಸಿ , 

ಮನವ ಖಗವಾಗಿಸಿ 

ನವೋಲ್ಲಾಸಗಳ  ಸ್ಫುರಿಸುವನು 


ಬಂದೇ  ಬರುವನು 

ನನ್ನ ಪುರುಶೋತ್ತಮನು
   
  

Tuesday 21 August, 2012

ಪ್ರೀತಿ

" ಪ್ರೀತಿ " 

ಈ ಪ್ರೀತಿಯ ಪರಿಯ 
ಹೇಗೆ ಬಿಚ್ಚಡಲಿ ಗೆಳತಿ ?
ಇದರರ್ಥವ -ನಿರಾಸೆಯ ಬಿಚ್ಚಡಿಲಿ ಹೇಗೆ ಗೆಳತಿ ? 

ಹೊಸತನದ ಸಂಭ್ರಮ ಇದು ,
ಹಳಸಿ , ನಾರುವ ಹುಚ್ಚು  ಇದು 

ನಿಲ್ಲಲಾರದ ಒರತೆಯು ಇದು,
ಚಿಮ್ಮಲಾರದ ಚಿಲುಮೆಯೂ ಇದು

ಕಂಗಳ ಸುಳಿ-ಮಿಂಚು ಇದು,
ಭೋರ್ಗರೆವ ಅಶ್ರುಧಾರೆಯೂ ಇದು 

ತಂಗಾಳಿಯ ತಂಪು ಇದು, ಮುಂಗಾರಿನ ಅಭಿಷೇಕವಿದು 
ಬರಗಾಲದ ಬರಡು ಇದು , ಪ್ರವಾಹದ ಆರ್ಭಟವೂ ಇದು  

ಎದೆಯ ಬೆಳಗುವ ನಂದಾದೀಪವಿದು,
ಧಗಧಗಿಸುವ ಕಾಡ್ಗಿಚ್ಚು  ಇದು
ಬೆಂಬಲಿಸುವ ಚೈತನ್ಯವಿದು ,
ದಿಗುಲುಗೊಳಿಸುವ ದುರ್ಬಲತೆಯೂ ಇದು 

ಕಲ್ಪನೆಯ ಲಹರಿಯಲಿ ತೇಲಿಸುವ ಅಲೆಯು  ಇದು,
ನೈಜತೆಯ  ಕೂಪಕೆ ಮುಗ್ಗರಿಸಿ ತಳ್ಳುವ ಮುಳ್ಳು ಇದು 

ಹೇಳೇ ಸಖಿ, ಈ ಪ್ರೀತಿಯ ಪರಿ-ಪರಿಯಾಗಿ ಬಿಚ್ಚಿಡಲಿ ಹೇಗೆ,
ಆಗಮನದ ಬೆನ್ನಲ್ಲೇ ನಿರ್ಗಮಿಸಿದ ಗ್ರಹಣವು ಇದು ...
ತೊಯ್ದಾಟ , ಹೊಯ್ದಾಟ , ಜಂಜಾಟಗಳ  ಕಾಟವು ಇದು ...
ಬಿಡುವೆನೆಂದರೂ ಬೆಸೆಯುವ ಮಾಯೆ ಇದು ,ಜಾಲವು ಇದು ... 

-ಪ್ರಜ್ಞಮಾಲಾ  

Thursday 9 August, 2012

ಸೋಲು

ಸೋಲು 

ಎದೆಯ ಕಣಿವೆಯಲ್ಲಿ
ಕತ್ತಲೆಯು ಕವಿದಿದೆ ...

ಬಾಳ ಆಗಸಕೆ

ಕಾರ್ಮೋಡಗಳ ಮುಸುಕಿದೆ ...

ನಂಬಿ ಸಾಗಿದ ದಾರಿಯೂ  ಇಂದು

ನನ್ನ ಮೇಲೆ ಮುನಿದಿದೆ ....


ಮನದ ಗೂಡಿನಲ್ಲಿ

ಅಗೋಚರ - ಅನಿಶ್ಚಿತ ಗಳೇ ಸುಳಿಯುತಿವೆ...

ಉಕ್ಕುತಿರುವ ಕಂಬನಿಗೆ ,

ನರಳಾಟದ ಈ  ಬೇಗುದಿಗೆ
ಅಂತ್ಯವ ಮನ ಅರಸುತಿದೆ ...
                                                                 
                                     ಆಸರೆಯ ನಿರೀಕ್ಷೆಯಲಿ ,
                              ಮನ ಇಂದೇಕೋ ಪರಿತಪಿಸುತಿದೆ ...

                                                                                                                             
 
 

ಅಪರಂಜಿ


ಅಪರಂಜಿ

ಈ ಬಾಂಧವ್ಯವ 
ಹೇಗೆ ವರ್ಣಿಸಲಿ ಗೆಳೆಯ ...
ಝೇಂಕರಿಸುತಿರುವ ಪ್ರಣಯ ನಾದವ    
ಹೇಗೆ ಬಣ್ಣಿಸಲಿ ಇನಿಯ ... 

ಒಲಿದು ಬಂದ ಕನಸು  ನೀನು ,
ಒಲವ ಸುಧೆಯ ಹರಿಸಿದವ ನೀನು ,

ನಗೆಯ ಹಂಚಿ, ಗುಣದಿ ಮಿಂಚಿ,
ಅಂತರಂಗದಾಳಕಿಳಿದ 
ಅಪರಂಜಿಯು ನೀನು... 

ನನ್ನೊಳಗೆ ನೀನಾಗಿ ,
ನಾ ನುಡಿವ ನುಡಿಯಾಗಿ ,
ಜೀವಗಳು ಒಂದಾಗಿ ,
ಬೆರೆತಿಹೆವು ನಾವು ಸೊಗಸಾಗಿ ಇಂದು 





Monday 30 July, 2012

ಕ್ಷಣಗಳಲ್ಲೇ ಕನಸಿನರಮನೆಯ ರಾಣಿಯಾಗಿಸಿದೆ  
ಬಿಡಿಸಿದೆ ಮನದ  ತುಂಬಾ ನಿನ್ನದೇ  ಛಾಯೆ...

 
ಕತ್ತಲೆಯ ಮಂಪರಿನಲ್ಲಿ ,ಗಾಢ ಮೌನದಲ್ಲಿ
ಮೂಡಿಸಿದ್ದೆ   ವಿಶ್ವಾಸದ ಬೆಸುಗೆ...

ಮೋಹ ಜಾಲದಲ್ಲಿ , ಪ್ರೇಮ  ಪಾಶದಲ್ಲಿ
ಮಧುರವೆನಿಸಿತ್ತು ಪ್ರತಿಯೊಂದು ಗಳಿಗೆ...

ಮಿಂಚಿ ಹೋಯಿತು ಕಾಲ,ಬಡಿದೆಬ್ಬಿಸಿತು ವಾಸ್ತವ ,
ಭ್ರಮೆಯ ನೀರವತೆಯು ತಲ್ಲಣಿಸಿತು  ಮನವ  ....

"ಮತ್ತದೇ ಸಂಜೆ, ಅದೇ ಏಕಾಂತ..."
 ಎಂದು  ಹಳೆಯ ರಾಗವ ಗುನುಗುತಿಹುದು ಇಂದು ಈ ಮನ....


 

Wednesday 18 July, 2012

ಒಲವ ಛಾಯೆ


ಒಲವ ಛಾಯೆ 

ಮಾತುಗಳು ಭೋರ್ಗರೆಯುತಿಹುದು ಮನದಲ್ಲಿ ,
ನೋವ ಛಾಯೆ ತುಂಬಿಹುದು  ಈ ಮೌನದಲ್ಲಿ ,
 
ದೂರ ಸರಿದರೂ ...ಮಾತು  ಮರೆತರೂ... 
ಭಾವಗಳ ತೊರೆಯೆ ,ನೆನಪುಗಳ  ಮರೆಯೆ...

ಒಲವ ಬೇಗುದಿಯಲ್ಲಿ , ಬಿಗುಮಾನದ ಗೋಡೆಯಲ್ಲಿ,
ಒಂಟಿತನವೇ  ನೀ ಕೊಟ್ಟ  ಉಡುಗೊರೆಯು ನನಗೆ ಗೆಳೆಯ...
ದಾರಿ ಕವಲೊಡೆದರೇನು   , ಕನಸುಗಳು  ಮುರಿದರೇನು   ..
"ಎಲ್ಲಾದರೂ ಇರು, ಸದಾ ಸುಖದಿಂದಿರು" ಎಂದು ಈ ಮನ 
ನಿನಗಾಗಿಯೇ  ಮಿಡಿಯುತಿಹುದು  ಗೆಳೆಯ ...

- ಪ್ರಜ್ಞಮಾಲಾ
 

Saturday 30 June, 2012

ಕನಸು


ಕನಸು
ಒಲವ  ಕನಸು ನನಸಾಗಿದ್ದರೆ, ಎಷ್ಟು ಸುಂದರವಿತ್ತೋ   ಗೆಳೆಯ ...

ನಿನ್ನ ಪ್ರೀತಿಯಲಿ ಅರಳುತ್ತಿದ್ದೆ ,
ಮಾತುಗಳ ಇಂಪನು ಸವಿಯುತ್ತಿದ್ದೆ  , 
  ನಗುಮೊಗವ ಕಂಗಳಲೇ  ಇರಿಸುತ್ತಿದ್ದೆ  ,


 ಮಾತಿನ ಮೋಡಿಯಲಿ  ನಿನ್ನ ಸೆಳೆಯುತ್ತಿದ್ದೆ ,
ಸನಿಹತೆಯ ಸಮ್ಮುದಕೆ ಬೆರಗಾಗುತ್ತಿದ್ದೆ,
ನವಿರೇಳಿಸುವ ಸ್ಪರ್ಶಕೆ  ನಲಿಯುತ್ತಿದ್ದೆ, 
ಮನದುಂಬಿ ನಿನ್ನನೇ  ಆರಾಧಿಸುತ್ತಿದ್ದೆ...  

ಮನದ ಇಂಗಿತವು, 
ಪ್ರೇಮ ನಿವೇದನೆಯು 
ಕನಸಾಗಿಯೇ  ಉಳಿಯುತ್ತಲ್ಲೋ  ಗೆಳೆಯ ! ...




Monday 25 June, 2012

ಇಷ್ಟ


ನೀ ಇಷ್ಟವೋ ಎನಗೆ , 
                              ನಿನ್ನ ಮನಸು ಬಲು ಇಷ್ಟವೋ  ಓ ಹುಡುಗ ....
 

ನಡೆವಾಗ  ಹಾಗೆಯೇ  ಕೈ-ಹಿಡಿವ  ಪರಿ ಇಷ್ಟವೋ ಎನಗೆ ..
ನನಗಾಗೆ ಅರಸುವ ಆ ಕಣ್ಣುಗಳ  ಹೊಳಪು ಇಷ್ಟವೋ  ...

ಎದೆಯ ತಾಳ ತಪ್ಪಿಸುವ ..

                              ಆ  ಕಂಚಿನ ಕಂಠ ಇಷ್ಟವೋ ಎನಗೆ ...
ಬೇಸರವ ಮರೆಸುವ ನಿನ್ನ  ಅಪ್ಪುಗೆಯು  ಇಷ್ಟವೋ  ...
 

ಕೋಪವ ಕರಗಿಸುವ ಆ ಮೌನ  ಇಷ್ಟವೋ ಎನಗೆ  ...
                              ಪಿಸುಮಾತಲೇ  ನಗಿಸುವ ಆ ಪರಿಯು ಇಷ್ಟವೋ...

ನೀ ಇಷ್ಟವೋ ಎನಗೆ
ಓ ಹುಡುಗ
                              ನಿನ್ನ ಮನಸು ಬಲು ಇಷ್ಟವೋ ...
                                                          
                                 

Saturday 23 June, 2012

ಸ್ವಚ್ಛಂಧ


ತೃಪ್ತಿಯ ಅಲೆ ಮನದಲಿ ಮೂಡಿಹುದು ಇಂದು ,
ನವ್ಯ ರಾಗವ ಮನ ಗುನುಗುತಿಹುದು  ಇಂದು,
ಕರಿ-ಮೋಡ ಸರಿದು ... ತಾರೆಗಳು ಮಿನುಗುತಿಹವು  ಇಂದು,
ನೀಲಾಕಾಶದಲಿ  ಸ್ವಚ್ಛಂಧ ಹಕ್ಕಿಯಾಗಿ ,
ಹಾರಲು  ಬಯಸಿಹುದು ಮನವಿಂದು....


 

ತಳಮಳ




ಎದೆಯ ಗೂಡಿನಲ್ಲಿ ಬೆಚ್ಚನೆ ಬಚ್ಚಿಟ್ಟಿರುವೆ
ನಿನ್ನನು ಬಹು ದಿನಗಳಿಂದ . .

ಇಂದೇಕೋ  ಅನಿಸುತಿದೆ
  ಮುರಿಯುವುದು ನನ್ನೀ ಒಲವ ಆಶ್ರಯ,
 
ತುಂಬುವುದು ಕೇವಲ ಶೂನ್ಯ. . .

ಬಿಚ್ಚಿಡಲಿ ಹೇಗೆ ನಿನ್ನೆದುರು ನನ್ನ  ಅನುರಾಗವ?
ನೋಡಲಾಗದೇ  ನನ್ನ ಕಂಗಳಲ್ಲಿ  ತುಂಬಿರುವ ನಿನ್ನ ಛಾಯೆಯ ?
ಅಥವಾ...
ಕೇಳಿಬಿಡಲೇ   ಕಾಡುವ ಈ ಕಠಿಣ   ಪ್ರಶ್ನೆಯ . . .
"ದೂರವಾಗಿ ಮರೆಯುವೆಯಾ ,

ಅಥವಾ
ಮರೆಯಲೆಂದೇ  ದೂರವಾಗುವೆಯಾ ?"
ಹೇಳಿಹೋಗು ನಿನ್ನ ಉತ್ತರ . . .
                                                                                                         

Monday 11 June, 2012

ಸಖ

"ಸಖ" 

ದೀಪವ ಬೆಳಗುವ ಜ್ಯೋತಿ ನನ್ನವನು ...
ಮಾತಿನ ರಾಗಕೆ ಮೌನದ ಲಯ ನನ್ನವನು  ...
ಮನದ ದುಗುಡವ ಮರೆಸುವ ತಂಗಾಳಿ ನನ್ನವನು ...
ಮೌನದಲೇ ಮೆರೆದು ..ಕಂಗಳಲೇ ಸೆಳೆದು,
ಮನವನಾಳುವ ಒಡೆಯ  ನನ್ನವನು  ...

ಭಾವಗಳ ಸ್ಪೂರ್ತಿ ...ಪ್ರೇಮದರಸ ನನ್ನವನು 
ಸಂತಸದ ಅಲೆಯಲಿ, ದುಃಖದ ರಭಸದಲಿ,
ನನ್ನ ಶಕ್ತಿ ...ಅನುರಕ್ತಿ ನನ್ನವನು  . . .
                                                                       

 

Sunday 10 June, 2012

" ಕಡಲು "



ಸಾಗರದ ಲೀಲಾ-ಜಾಲದಲ್ಲಿ ಅಡಗಿಹುದು ಅರ್ಥಗಳು ಹಲವು...
ಬಿಡಿಸಿದಷ್ಟು ಒಗಟುಗಳ ಹೆಣೆಯುವುದು ಕಡಲು ...
ಸಮ್ಮುದ-ಉತ್ಸಾಹಗಳ ಒಡಲು ಒಂದೆಡೆಯಾದರೆ ,
ದುಗುಡಗಳ  ಆರ್ಭಟವು ಭರತ-ಇಳಿತದಲ್ಲಿಹುದು...

ಪ್ರಕೃತಿಯ ಸಹಜತೆಯಲಿ  ಅಡಗಿಹುದು 
ರಹಸ್ಯಗಳು ಹಲವು,
ಕಂಡಷ್ಟೂ ಅಗಮ್ಯ , ತಿಳಿದಷ್ಟೂ ಅನಂತ ,
ಈ  ವನಧಿ ಸದಾ ಅನನ್ಯವು  .... 

Monday 4 June, 2012


ದೂರ ಸರಿದ್ದಿದ್ದೆ ನೀನು ನನ್ನಿಂದ . . .
ದಿನವೂ ನರಳಿಸಿದ್ದೆ ನಿನ್ನ ನೆನಪುಗಳಿಂದ...
ಭಸ್ಮವಾಗಿಸಿದ್ದೆ ನನ್ನ ಕನಸುಗಳ ನಿನ್ನ ಹಠದಿಂದ...

 
ಕಳೆಯಿತು ಕಾಲ , ಚಿಗುರೊಡೆಯಿತು  ನವ -ಪರ್ವ
ಶಿಥಿಲ ಮನಸಿಗೆ  , ನೊಂದ ಜೀವಕೆ  ಮೂಡಿತು ನವ-ಆಶಯ
ಬಿಗಿದಪ್ಪಿತು ಏಕಾಂತದ ಸಮ್ಮುದ...




ಮತ್ತೇಕೆ ಬಂದೆ ನೀ ಬಿರುಗಾಳಿಯಾಗಿ ?
ಬಿರುಕುಗಳ ಸೀಳುವ ಅಂಕುಶವಾಗಿ ?
ನೂಕುತಿರುವೆ  ಮತ್ತದೇ  ನರಕಕೆ  ಜವನಾಗಿ ? . . .

Saturday 2 June, 2012

"ಅನುರಾಗ" : ನಾವು ಪ್ರೀತಿಸುವ ಹೃದಯ ನಮ್ಮನ್ನು ಅಷ್ಟೇ ತನ್ಮಯತೆಯಿಂದ ಪ್ರೀತಿಸಿದಾಗ .... ನಮ್ಮೆಲ್ಲ ಸೂಕ್ಷ್ಮಭಾವನೆಗಳ -ನಿಗೂಢತೆಯ ರಹಸ್ಯ ಅರಿತಾಗ ಮನಸಿನಲಿ ಮೂಡುವ ಅನುರಾಗ


ನನ್ನಯ ಕಣ್ಣಿನ ಮಿನುಗು ತಾರೆಯು ನೀನು ,
ಭಾವಗಳ ವ್ಯೂಹವ ಭೇದಿಸಿದೆ ನೀನು,
ಚಂಚಲ ಮನದ "ಅಚಲ"ತೆಯು ನೀನು ,

ಹುಸಿಗೋಪದಲಿ ಅಡಗಿರುವ ಮೋಹಕತೆಯು  ನೀನು ,
ಸ್ವಾರ್ಥದ ಮರೆಯಲಿರುವ ಪ್ರೇಮವು ನೀನು ....
ಅರಿತರೂ ಮುಗ್ಧನೂ.... ಬಲು ಜಾಣ ನೀನು

ಅನು"ರಾಗ"ದ ಮಾರ್ದನಿಯು ಇದು ... ಅದೆಷ್ಟು ಮಧುರ...

ರಾಧೆಯು ನಾನಾಗೆ , ಮಾಧವ ನೀನಲ್ಲವೇನು ?

Thursday 17 May, 2012


"    ಮನಸು    ಕೋಲಾಹಲದ    ಕಡಲಾಗಿದೆ ...    "

ಕಾಲನ ಆಟಕೆ, ಭಾಗ್ಯದ ಕುತಂತ್ರಕೆ,
ಕಪಟ ನಗು ಎಲ್ಲೆಲ್ಲೂ ರಾರಾಜಿಸುತಿದೆ ....

ವಾಸ್ತವದ ಜ್ವಾಲಾಗ್ನಿ ಕನಸಿನರಮನೆಯ ಸುಡುತಿದೆ ...
ಕಣ್ಣೀರ ಸಾಂಗತ್ಯ  ನಿತ್ಯ ಸುಖ ನೀಡುತಿದೆ ...

ಆದರೂ ...
ಎದೆಯ ಗೂಡಲ್ಲೆಲ್ಲೋ ತಂಗಾಳಿಯಾಗಿ, 
ನೆನಪುಗಳು ವಿಕೃತ ಮುದ ನೀಡುತಿವೆ,

ಕ್ಷಣವೂ  ... 
ನಿಲುಕದ ಆ ಸಹ-ನಿಗೆ ಮನ ಮಿಡಿಯುತಿದೆ ...


ಈ ಬಂಧನವ... ಆ ಬೆಸುಗೆಯ ಮರೆಯಲಿ ಹೇಗೆ?..
ಸಹಜತೆಯ "ಇಂದಿನಲಿ", ನೆನ್ನೆಯ ನೆನಪುಗಳ ಅಳಿಸಲಿ ಹೇಗೆ ?..
ಭಾವಗಳ  ದ್ವಂದ್ವದಲ್ಲಿ , ಇಂದೇಕೋ ಮನಸು  ಧುಮುಗುಡುತ್ತಿದೆ...
 

Friday 11 May, 2012

ಒಲವ ಕರೆ

ಒಲವ ಕರೆ 

ದೂರ ಸರಿದರೇನು . . .ಮಾತು ಮರೆತರೇನು . . .

ಕರಗದಿರಲು ನಾನು  ಕಲ್ಲೇನು ?. . .

ಹೇಳಿಬಿಡು   ಓಮ್ಮೆ  ನಿನ್ನ ಒಲುಮೆಯ ಭಾವವ . . .

ತೋರಿಬಿಡು ಆ ಕಂಗಳಲಿ ನನ್ನ ಬಿಂಬವ . . .

 

ನನ್ನುಸಿರು  ನೀನೇ ... ಜೀವಾಳ ನೀನೇ. . .

ಪ್ರೇಮದ ಭಾವವೂ ನೀನೇ. . .

 
ಓಡಿ ಬರುವೆ ನಿನಗಾಗೇ. . .

ಬಚ್ಚಿಡು  ನನ್ನನು ಆ   ಒಲವಿನ ಗೂಡಲೇ  . . .

ಅಭಿಲಾಷೆ

ಕಾಡುತ್ತಿದ್ದ ದುಸ್ವಪ್ನವಿಂದು ತಾನಾಗೆ ಮರೆಯಾಗಿದೆ ......
ನೆನಪುಗಳ ನಂಟು ಕಳಚುತಿದೆ .....
ನಿರೀಕ್ಷೆಯ  ಕಹಿ ಬೇನೆ  ಮಾಸಿಸುತಿದೆ ...

ಬಹು ದಿನಗಳಿಂದ ಆಶಿಸಿದ ನಿರ್ಲಿಪ್ತ ಭಾವ

ಇಂದು ತಾನಾಗೆ ಒದಗಿಬಂದಿದೆ ......



ಬತ್ತಿಹೋದ  ಈ ಹೃದಯದಲಿ ,

ಅಮೃತ ವರ್ಷಿಣಿಯ ಸಿಂಚನವಾಗಿದೆ
ಸ್ನೇಹದ ಆರೈಕೆಯಲಿ , ಚಿಗುರೊಂದು ತಳಿರೊಡೆಯುತಿದೆ .....
ಹೇಳಲು ಸಾವಿರ ಮಾತಿದೆ..
ಕೇಳಲು ಪ್ರಶ್ನೆಗಳ ಸುರಿಮಳೆಯೇ ಇದೆ..

 ಹೇಳಲಿ ಹೇಗೆ, ಕೇಳಲಿ ಹೇಗೆ ?
ಬಿಗುಮಾನದ ಗೋಡೆ ಇಬ್ಬರ ನಡುವಿದೆ ....

Friday 30 March, 2012

Selected Ignorance Sometimes is A BLISS.....


ಕೋಪವೂ ಇಲ್ಲ...
ಬಿಗುಮಾನದ ಸುಳಿವೂ ಇದರಲ್ಲಿಲ್ಲ ...
ದುರಹಂಕಾರವಂತೂ ಅಲ್ಲವೇ ಅಲ್ಲ....
 

 ನೀ ನನ್ನ ಮನದಲ್ಲಿ  ಎಬ್ಬಿಸಿದ ಬಿರುಗಾಳಿಗೆ,

 ಈ ಮೌನವೇ ನನಗಾಧಾರ .......


ನನ್ನ ನಿರ್ಲಕ್ಷ್ಯವೇ ನಿನಗೆ ಉತ್ತರ...

Tuesday 27 March, 2012

ಮೊದಲ ಪ್ರೇಮ

ಮೊದಲ ಪ್ರೇಮದ ಪುಳಕ...
ಆ ರೋಮಾಂಚನ ...
ಮನದ ಲಯ ತಪ್ಪಿಸಿದ ಆ ಕಂಚಿನ ಕಂಠ ...
ಮರುಳು ಮಾಡಿದ ಆ ಮುಗುಳ್ನಗೆಯ ವದನ...
ಮರೆಯಲಾಗದು- ಎಂದೂ ಮಾಸದು ಆ ನೆನಪುಗಳ ಸಾಂಗತ್ಯ .... ...

ಒಲವು ದ್ವೇಷದ ಕಿಡಿಯ ಕಾರಿದಾಗ ........!!!


  "ಹಿತ" ವೆನಿಸಿತ್ತು ಒಮ್ಮೆ  ನಿನ್ನ ಸಾಂಗತ್ಯ,
ಅದೇ ಇಂದು  ನನ್ನನ್ನು "ಹಿಂಸಿ"ಸುತಿದೆ ....
"ಪ್ರಿಯ" ವೆನಿಸಿತ್ತು  ನಿನ್ನ ಮುಂಗೋಪ ,
ಇಂದೇಕೆ ನನ್ನ ಜರಿಯುವ ಬೆಂಕಿಯಾಗಿದೆ ?.....
"ಮುದ" ನೀಡುತ್ತಿದ್ದ  ನಿನ್ನ ಚೇಷ್ಟೆ ,
ಇಂದು ಅಂಕುಶವಾಗಿ ತಿವಿಯುತಿದೆ ....
ಆ ಕಂಗಳ "ಅನುರಕ್ತಿ" ,
ಇಂದೇಕೆ ದ್ವೇಷದ ಕಿಡಿಯ ಕಾರುತಿದೆ? ...
ಮಾತಿನ ಸುರಿಮಳೆಯಲಿ ಮುಗುಳ್ನಗುತ್ತಿದ್ದ ಆ ವದನ  ,
ಇಂದೇಕೆ ನನ್ನ ಮೌನವನು ಬಯಸುತಿದೆ ?  .....
ಸಾಮಿಪ್ಯ ಬಯಸಿದ್ದ ಆ ಒಲವ ಹೃದಯ ,
ಇಂದೇಕೆ " ಅಂತರ "ಗಳ ಬೆಳೆಸುತಿದೆ ....?

ನಿನ್ನಯ ಈ ಆಟಕೆ,
ಕಾಲನ ನಿಕಷಕೆ,
ಮನ ಮೂಕ-ವೇದನೆಗೆ ಶರಣಾಗಿದೆ ..
ಆದರೂ ಏಕೋ .....
ಮನದ ಜಾತಕ ಪಕ್ಷಿ ,ಒಲವ ವರುಣನ ನಿರೀಕ್ಷೆಯಲ್ಲಿದೆ ...

Thursday 8 March, 2012

ನಿನಗೆ ಬೇರೆ "ಹೆಸರು" ಬೇಕೇ .......... "ಸ್ತ್ರೀ " ಎಂದರೆ ಅಷ್ಟೇ ಸಾಕೆ !!!!

ಮಮತೆಯ ಮಡಿಲು ಇವಳು...
ಛೇಡಿಸುವ ತುಂಟ ನಗು, ಮಾತುಗಳ ಮೋಹಕತೆ ಇವಳು ...
ಮುಗ್ಧ ಕಂಗಳ ಹೊಳಪು, ಒಲವಿನ ಸಿರಿ ಇವಳು...
ಮನದ ಆರತಿ, ಮನೆಯ ಕೀರುತಿ ಇವಳು ...


ಕ್ಷಮಿಸೆ  ತಂಗಾಳಿ , ಮುನಿಯೆ ಗುಡುಗು ಇವಳು ...

ಶಕ್ತಿಯ ಆಗರವೂ, ಅಸಹಾಯಕ ಕಂಬನಿಯೂ ಇವಳು ...
ಹರುಷದ ಚಿಲುಮೆ, ತಾಳ್ಮೆಯ ನೀರಧಿ ಇವಳು...
"ಜನನಿ - ಸೋದರಿ - ಸಖಿ - ಸಹಗಾಮಿನಿ - ತನುಜೆ "
ಹಲವು ಪಾತ್ರಗಳ ಜೀವಾಳ ಇವಳು ....

Saturday 3 March, 2012

"ಸ್ನೇಹ " : ಸ್ನೇಹ ... ಮಾತಿನಲ್ಲಿ ಅರಳಿ, ಮೌನದಲ್ಲಿ ಬೆಳೆದು , ಮನದಲ್ಲಿ ಮನೆ ಮಾಡುವ ಅನನ್ಯ-ಅನಂತ ಬಂಧ.


 ಸ್ನೇಹಕ್ಕೆ...
ಮಾತಿನ ಸಲುಗೆ ಬೇಕಿಲ್ಲ ,
ಜಾಣತನದ ಹಿರಿಮೆ ಬೇಕಿಲ್ಲ ,
ಸಿರಿವಂತಿಕೆಯ ಬಿಗುಮಾನವೂ ಬೇಕಿಲ್ಲ ,
ಸ್ವಾರ್ಥದ ಕಿಡಿಯೂ ಬೇಕಿಲ್ಲ........


 
ಸ್ನೇಹಕ್ಕೆ .....
"ಸ್ಪಂದಿಸುವ" ನಿರ್ಮಲ ಮನಸು,
"ಮುನಿಯದ" ನಂಬಿಕೆಯ ನಂಟು,
"ಜೊತೆಯಾಗುವ " ಸಾವಿರ ನೆನಪು.....
ಸಾಕಲ್ಲವೇ !?!

Wednesday 22 February, 2012

ಬೇಕು - ಬೇಡಗಳ ದ್ವಂದ್ವದಲ್ಲೇ
ಬಿದ್ದೆ ನಾ ನಿನ್ನ ಬಲೆಗೆ ...
ಕಗ್ಗಂಟಾಗಿರುವ ನನ್ನೀ ಬದುಕಿಗೆ
ವಿಷವು ನಿನ್ನೀ ಸಲುಗೆ ...
ತೊರೆದು ಹೋಗು ಗೆಳೆಯನೇ,
ಇದುವೇ ನನ್ನ ಮನದ ಬೇಡುಗೆ ...

ಆದರೆ........


ಶಕ್ತಳೇ ನಾ ಸಹಿಸಲು ,

ಆ ವಿರಹದ ವೇದನೆ .....
ತಿಳಿಸಲಿ ಹೇಗೆ ಗೆಳೆಯ ನಿನಗೆ ,
ನನ್ನೀ ಮೂಕ  ಮನದ ರೋದನೆ..
..

Tuesday 21 February, 2012

ಒಲವ ಐಸಿರಿ


ಒಲವ ಐಸಿರಿ 
ಕಣ್-ತಣಿಸುತಿಹುದು ನಿನ್ನ 
ಮುಗ್ಧ ಮೊಗ ಸಿರಿ .....

ನಿದಿರೆಯಲೂ ಅರಳಿಹುದು ಚೆಲುವ 
ನಿನ್ನ ನಗುವಿನ ಸಿರಿ .....
ನಿನ್ನೀ ಕನಸುಗಳ ಬಾನಂಗಳದಲಿ

ನಾ ನಲಿಯುತಿರಲು...
ಇನಿಯನೇ,
ಅದುವೇ ನನ್ನ ಒಲವಿಗೆ ಐಸಿರಿ :)
-ಪ್ರಜ್ಞಮಾಲಾ 


ಪ್ರೀತಿ : "ಪ್ರೀತಿ" ನಿರ್ವಿಕಾರವೂ ಹೌದು, ಸಾಕಾರ-ಸ್ವರೂಪವೂ ಹೌದು .ಇದರ ಅರ್ಥ ಅರಿತವರೆಷ್ಟೋ .....ಅರಿಯದೆ ಕೈಚೆಲ್ಲಿದವರೆಷ್ಟೋ ...



ಪ್ರೀತಿ ...
ಮಮತೆಯ ಮಿಡಿತವೂ ಹೌದು, 
ಒಲವಿನ ತುಡಿತವೂ ಹೌದು

ಪ್ರೀತಿ ...
ಸಹನೆಯೂ ಹೌದು , ಉತ್ಸಾಹವೂ ಹೌದು,
ಮೌನವೂ ಹೌದು , ಸಂವಾದವೂ ಹೌದು .....



ಪ್ರೀತಿ ...
ನಗುವಿನ ಚಿಲುಮೆಯೂ ಹೌದು, ದುಃಖದ ಕಡಲೂ ಹೌದು,
ಭಾವಗಳ ಸಮ್ಮಿಲನವೂ ಹೌದು, ವಿರಹದ ಬೇಗುದಿಯೂ ಹೌದು...

ಪ್ರೀತಿ... 

ಮಧುರವೂ ಹೌದು , ಭೀಕರವೂ ಹೌದು,
ಕನಸುಗಳ ಸಿಹಿಯೂ ಹೌದು, ನನಸುಗಳ ಕಹಿಯೂ ಹೌದು ....

ಪ್ರೀತಿ ...

ಇದರ  ಅರ್ಥ ಅರಿತವರಾರು?
ಇದರ ನಶೆಯ ಸವಿಯದೆ ಇರದವರಾರು ?...


                                                                                   

 

Tuesday 24 January, 2012

ಮರು-ಪ್ರಶ್ನೆ



ಅಂದು ಆ ನೋಟದಲ್ಲಿ ನನ್ನ ಅಸಹಾಯಕತೆ ಕಾಣಲೇ ಇಲ್ಲವೇನು ? ...
ನಿನ್ನ ಪ್ರತಿ ಕಂಬನಿ-ಹುಸಿ ನಗೆಯಲ್ಲೂ ನನ್ನ ಹತಾಶೆ ಕೂಡಿರಲಿಲ್ಲವೇನು!!!

ದ್ವಾರದಲಿ ನೀ ಕಂಡ ಆ ಹುಸಿನೋಟ ....

ನನ್ನ ಮನದಲಿ ಎದ್ದ ಬಿರುಗಾಳಿಯ ತೋರಲಿಲ್ಲವೇನು !!!...

ಸಮಾಜದ ಆ ನಿಲುವಿಗೆ ,

ನನ್ನವರ ನಿಕ್ರಷ್ಟ ನೋಟಕೆ ...
ಪ್ರೀತಿಯ ನಿಕಷದಲಿ ಸೋತ
ನನ್ನೀ ಮನದ ರೋದನೆ ಕೇಳುತ್ತಿಲ್ಲವೇನು !!!
 


ಚೂರಾದ ಮನವನು ನಿತ್ಯ ಕಲ್ಲಾಗಿಸಿ ,
ನನಸಾಗದ ಕನಸುಗಳಲಿ ದಿನವೂ ಬೇಯುತಾ ,
ಬದುಕಿನ "ಅರ್ಥ"ಗಳಿಂದ ಓಡುತಿರುವ
ಈ ನನ್ನ ಆರ್ತನಾದ   ಅರ್ಥಹೀನವೇನು !!!

ಮಗುವಿನಂತೆ ಮುದ್ದಿಸಿ, ಗೆಳೆತಿಯಂತೆ ಆಧರಿಸಿ ,
ಕರೆಗಳಿಗೆ ಓಗೊಟ್ಟು,ಕನಸುಗಳಲಿ ಜೊತೆಯಾದ
ಆ ನಿರ್ಮಲ-ದಿನಗಳು ಸುಮಧುರವಲ್ಲವೇನು.... ???

ದ್ವಂದ್ವಗಳ ನಡುನೀರಲ್ಲಿ ತೇಲಿಬಿಟ್ಟ ನಂಟು
ಈಗ "ತಾಗ್ಯ"ವಲ್ಲವೇನು!!! .....

ವಿರಹದ ಈ ನೋವಿಗೆ ನೀನೇ ಹೇಳು " ಗೆಳೆಯ"
ಕೊನೆಯೇ ಇಲ್ಲವೇನು?......
                                                       -ಪ್ರಜ್ಞಮಾಲಾ