Friday 24 June, 2016

ಒಲವ ಶೀರ್ಷಿಕೆ



ಒಲವ ಶೀರ್ಷಿಕೆ

ಮನವ ಮೋಹಿಸಿದ ಬಯಕೆಯು ನೀನು
ಅಮ್ಮನ ಮಡಿಲ ನೆಮ್ಮದಿಯು ನೀನು 
ನನ್ನೆಲ್ಲಾ ಕನಸುಗಳ ಅರಮನೆಯು ನೀನು
ನನ್ನೊಲವ ಪುಟದ ಶೀರ್ಷಿಕೆಯು ನೀನು 


ಕಂಚಿನ ಕಂಠ , ಆ ನಗುವಿಗೆ ಸೋತಿಹೆನು ನಾನು 
ನೋಡಿದಷ್ಟೂ ಸಾಲದು, ಕೇಳಿದಷ್ಟೂ ತೀರದು ,
ನನ್ನೆಲ್ಲಾ ಗೊಂದಲಗಳ -ಹುಚ್ಚಾಟಗಳ ಸಹಿಸುವ . . .
ನನ್ನೆಲ್ಲಾ ಗಾಯಗಳ ಮುಲಾಮು ನೀನು,
ಬಾಳ ಹಾದಿಯಲಿ ನಿನ್ನ ಒಡನಾಟವಿರಲು ,
ನನ್ನ "ಸಿರಿ"ಯು , "ಶ್ರೇಯಸ್ಸು" ನೀನು 


ನಿನ್ನ ಒಲವ ಆರೈಕೆಯಲಿ ದಿನವೂ ಅರಳುತಿರುವೆನು ನಾನು 

ಆಡಿದಷ್ಟೂ ಮುಗಿಯದು . . . 
ಮತ್ತೇರಿಸುವ ನಶೆಯ ಆಟವು ನೀನು 
ಮನವ ಮುದಗೊಳಿಸಿದ ಸುಂದರ ಕಲ್ಪನೆಯು ನೀನು

ಆ ನಿನ್ನ ಸಹನೆ 
ಹೇಳದೇ , ಕೇಳದೇ ಅರಿತುಬಿಡುವೆ ನನ್ನ ಅಂತರಾಳವ 
ಏನಿದು ನಿನ್ನ ಮಹಿಮೆ?
ನಿನ್ನ ಪ್ರತಿ ಗಳಿಗೆಯಲು ಜೊತೆಯಾಗುವ ಹಂಬಲವು ನನಗೆ 
ಇಂದು-ಮುಂದೆಂದೂ ನಿನ್ನ ಬಲವಾಗುವ ಹಠವು ನನಗೆ 

ಕಗ್ಗತ್ತಲೆಯ ಭೇದಿಸುವ ಕಿರಣವು ನೀನು   
ಬಾಳ ಆಗಸದಲಿ ಮೂಡಿಬಂದ ಮಳೆಬಿಲ್ಲು ನೀನು 

ಕ್ಷಣವೂ ಸ್ವರ್ಗ -ಸುಖವು ನನಗೆ 
ನನ್ನ ರಮಣ , ನಲ್ಮೆಯ ಇನಿಯ ,ಪ್ರಿಯ ಸಖನು ನೀನು 

ನನ್ನ ಸೌಭಾಗ್ಯ - ಸುಯೋಗ , 
ಕೈಗೆಟುಕಿದ ಸ್ವರ್ಗವು ನೀನು


-ಪ್ರಜ್ಞಮಾಲಾ