Saturday 17 August, 2013

ತಿರುವು


ತಿರುವು

ಸೋಜಿಗದ ತಿರುವೊಂದು ಬಾಳಿನಲಿ  ಹೊಸ ಅಲೆಯ ತಂದಿತ್ತು ,
ಖುಷಿಯ ಖಾತೆಗೆ  ಹೊಂದಾಣಿಕೆಯ ಬೀಗ ಜಡಿದ್ದಿತ್ತು . . .    

ಒಗ್ಗದೇ ಜಗ್ಗಾಡುತ್ತಿದ್ದೆ ಪ್ರತಿಯೊಂದು ದಿನ   
ಮಾರಿಯಂತೆ ಕಾಡುತ್ತಿತ್ತು ಪ್ರತಿಯೊಂದು ಕ್ಷಣ  

ನನ್ನವರ ಬಿಸಿಅಪ್ಪುಗೆಯು ದೂರವಾಗಿತ್ತು ,
ಸ್ಥೈರ್ಯದ ತಳಹದಿಯೇ ನಲುಗಾಡುತ್ತಿತ್ತು  . . . 

ಮುನಿಸಿಕೊಂಡ  ಭಾಗ್ಯನ ಕೈಗೊಂಬೆಯಾಗಿ ,
ದಿನದೂಡಿದ್ದೆ  ಹೈರಾಣದಲಿ ನಾನು  . . . 
ಕೈಚೆಲ್ಲಿ ಕೂತೆ , ಹೆಜ್ಜೆಯ ಹಿಂದಿಟ್ಟೆ . . . 
ಮರಳಿ ಗೂಡನು ಸೇರಲು ಹವಣಿಸುತ್ತಿದ್ದೆ ಅಂದು  . . . . 

ತೂರಿಬಂದಿತು ಕಿರಣವೊಂದು ನನ್ನ ಕೈಹಿಡಿಯಲು ,
ಮೂಡಿಸಲೆಂದೇ ನವ್ಯ ಹುರುಪ ,ಗುರಿ ಮಟ್ಟಿಸಲು . . . 

ದಾರಿಯೊಂದು ರೂಪುಗೊಂಡಿತು ದಿಕ್ಕೆಟ್ಟ ನಾವೆಗೆ ,

ಚೇತರಿಸಿಕೊಂಡೆ ನನ್ನವರ ಮೃದು ಅರೈಕೆಯಲಿ, 
ಮುನಿದ ಭಾಗ್ಯವೂ ಜೊತೆಯಾಯಿತು ಅಂದಿನಿಂದಲೇ  . . . 

ದಿನಗಳುರುಳಿದವು ಹೇಗೋ ತಿಳಿಯೆನು ನಾನು ,
ಈ ನಂದನವನದಲ್ಲಿ ,
ತುಂಟ ತಮ್ಮನ ಕಲರವವಿತ್ತು ,
ಶಾಂತ ತಂಗಿಯ ಪ್ರೀತಿಯೂ ಇತ್ತು . . . 
ಸ್ನೇಹದ ಮಾತೃ - ಹೃದಯವೂ  ಇತ್ತು ,
ಕಾಳಜಿಯ ಅಣ್ಣನ ನೆರಳಿತ್ತು  . . . 

ತನ್ನ ಬಾಂಧವ್ಯದ  ಬೆಸುಗೆಯಲಿ ,
ನನ್ನೆಲ್ಲಾ ನೋವ ಮರೆಯಾಗಿಸಿತ್ತು  . . . 
ಮನೆ-ಮನದಲ್ಲಿ ಒಲವ ಸಾಗರವೇ ಇತ್ತು . . . 



ಬಾಳ ನವ್ಯ ಸವಾಲೊಂದು ಕರೆಯುತಿದೆ ದೂರ ಈಗ ,
ವಿದಾಯ ಹೇಳಲೇ ಬೇಕು  ಕುಸುಮ ನಿಲಯದಿಂದ ಬಹು ಬೇಗ  ,

ಹೊಸ ತಿರುವಿನ ಅಚ್ಚರಿಗೆ ಕಾಯುತಿದೆ ಮನ 
ಹರುಷಗೊಂಡರೂ , 
ಮುಂದೆ ಸಾಗಲು ಹಿಂಜರಿಯುತಿದೆ ಮನ ,

 ಬಿಟ್ಟು ಬರಲಿ ಹೇಗೆ ,    

ಪ್ರೀತಿಯ  ದಾಹ ಇನ್ನೂ ನೀಗಿಲ್ಲ ,

ಮಾತಿನ ಗಂಟು ಇನ್ನೂ ಬಿಚ್ಚಿಲ್ಲ ,

ನೆನಪಿನ ಬುತ್ತಿಯು ಇನ್ನು ತುಂಬಿಲ್ಲ . . .

ಬಿಟ್ಟು ಬರಲು ಮನಸಿಲ್ಲ . . . 

ಮರಳಿ ಹೋಗಲು ಬಯಸುತಿದೆ ಬಂದ ದಾರಿಯಲಿ ಮತ್ತೆ ಇಂದು

ಕಾಲಚಕ್ರವ ಹಿಂದೆ ತಿರುಗಿಸಲು ಬಯಸುತಿದೆ ಮನವಿಂದು 


-ಪ್ರಜ್ಞಮಾಲಾ

ಹಣತೆ


ಹಣತೆ 

ಬೆಳಗಿಸಿರುವೆ ಒಲವ ಹಣತೆ ಎಂದಿನಿಂದ ,
ಕಾಯುತಿರುವೆ ಶ್ರದ್ಧೆಯಲಿ ಬಹು ನಿರೀಕ್ಷೆಯಿಂದ  . . . 
ಕನಸುಗಳ ಶುಭಾರಂಭವು ನಿನ್ನಿಂದ  ,
ವಿಶ್ವಾಸದ ಮುಗುಳ್ನಗೆಯು ನಿನ್ನಿಂದ ,

ಈ ಮಿಡಿತ-ತುಡಿತಗಳೂ ನಿನ್ನಿಂದ . . .
ಒಲವ ಈ ಸುಂದರ ಅನುಭಾವ,
ನಿನ್ನಿಂದ . . . 


 ಒಲವ ನನ್ನ ಪ್ರಪಂಚ ಪರಿಪೂರ್ಣ ನಿನ್ನಿಂದ ,
ನೀನೇ ಆಗಸ , ನೀನೇ ಸಾಗರ. . .
ಇದರ  ಆದಿ , ಅಂತ್ಯಗಳು ನಿನ್ನಿಂದ  . . . 
ಕೇವಲ ನಿನ್ನಿಂದ . . . 

 

ನನ್ನೆಲ್ಲಾ ಕೋಪವ ಸಹನೆಯಲಿ ಬಂಧಿಸುವ,
ಕ್ಷಣದಲೇ ನಗುವ - ಉಕ್ಕಿಸುವ 
ಮಾಯಗಾರನು ನೀನೇ  
ನನ್ನ ಅಳುವಿನ ಕಡಲ ಕಂಡವನೂ ನೀನೇ ,
ಭಾವಗಳ ಆಳ ಅರಿತವನೂ ನೀನೇ . . .  

ಬಾಳ ಪ್ರತಿ ಹಂತದಲಿ  ಸ್ಫೂರ್ತಿಯೂದವನು  ನೀನೇ ,
ಕ್ಷಣವೂ  ಸವಾಲಾಗಿ ಕಾಡುವವನೂ ನೀನೇ . . . 

ಮನಸಿನ ರಾಜ್ಯವ  ಆಳುವ ಅರಸನೂ ನೀನೇ ,
ಅರಿತಷ್ಟೂ ಆಗಂತುಕನಾಗಿ ದೂರ ಸರಿಯುವವನು ನೀನೇ  . . . 
ಒಂಟಿತನದ ಹತಾಶೆಯು,
ನಿರ್ಲಕ್ಷ್ಯದ ಕಂಪನವು , ವಿರಹದ ದುಸ್ಸ್ವಪ್ನವೂ ನೀನೇ  . . . 

ಓ ನನ್ನ ಒಲವೇ , 
 ಪ್ರೀತಿಯ ಪ್ರತಿ ಹಾಳೆಯ ಕಗ್ಗಂಟು - ನಿಘಂಟು ಎಲ್ಲವೂ ನೀನೇ . . .  

ಕುಳಿತಿಹೆನು  ನಿನ್ನ ಒಲವ ದ್ವಾರದಲಿ ನಾನು ,
ಕಂಗಳಲೇ ಹೊಸೆದಿರುವೆ ನಿನಗಾಗೆ ನನ್ನೆಲ್ಲಾ ಒಲವನು  ,

ಈ ಕಾಯುವಿಕೆಯು ನನ್ನ ಪರೀಕ್ಷೆಯೇನು ?
ಅಥವಾ 

 ಒಲವ ನಿನ್ನ ದಾರಿಯಲಿ  ನಾನು ನಿಶಿದ್ಧಳೇನು  ?
ಅಸ್ಪಷ್ಟ ನಿನ್ನ  ಭಾವದಲಿ - ನನ್ನ ಒಲವ ದಿಕ್ಕೆಡಿಸದಿರು ,

ಮೃದುವು ಈ ಮನಸು , 
ಕೋಪದಲಿ , ಮೌನದಲೇ ಚುಚ್ಚದಿರು . . . 

ಈ ವೇದನೆ ನನಗಿನ್ನೂ ಸಹ್ಯವಲ್ಲ . . . . 

ನನ್ನೀ ಒಲವು ಅಚಲ,
ಆಟಿಕೆಯೆಂದು ತಿಳಿಯದಿರು. . . 
  
ಕೊನೆಯ ನಿವೇದನೆಯು ನಿನಗೆ ,
ತೆರೆದಿಡು ಒಮ್ಮೆ ನಿನ್ನ ಮನಸನು ,
ತೋರಿಬಿಡು ನಿನ್ನ ಮನದಲಿ ನನ್ನ ಸ್ಥಾನವನು. . . 

ಅಳಿಸಿಬಿಡು ನನ್ನೆಲ್ಲಾ ಆತಂಕಗಳನು . . . 
ಮರೆಯಾಗಿಸು ನನ್ನೆಲ್ಲಾ  ಪ್ರಶ್ನೆಗಳನು 

ನಿವೇದನೆಯು ನಿನಗೆ , ಹೇಳಿಬಿಡು  ಉತ್ತರ . . .
ಮನದ ಕದವ ತೆರೆದು ,ಬೆಳದಿಂಗಳ ಪಸರಿಸುವೆಯಾ ,
ಆಸೆಯ-ಗರಿಗಳುದುರಿಸುವ  ಬಿರುಗಾಳಿಯಾಗುವೆಯಾ  . . . 
ಕಾಯುತಿರುವೆ ನಿನ್ನ ಉತ್ತರ . . . 

ಜೊತೆಯಾದರೆ ಉಸಿರಿನಲಿ ಉಸಿರಾಗುವೆ ಅನುಕ್ಷಣ ,
ಇಲ್ಲದಿರೇ 
ಗೆಳತಿಯಾಗಲಾರೆ , ಬಾಳ  ಮುಳ್ಳಾಗಲಾರೆ 
ಎಂದೂ ಇರದಂತೆ  ಅದೃಶ್ಯವಾಗುವೆ ಇದೇ ಕ್ಷಣ . . . 

ನಿವೇದನೆಯು ನಿನಗೆ , ಹೇಳಿಬಿಡು ನಿನ್ನ  ಉತ್ತರ . . . 

-ಪ್ರಜ್ಞಮಾಲಾ 

ಉಡುಗೊರೆ

ಉಡುಗೊರೆ


ಹಾಗೆ ಎಲ್ಲೋ ನಿನ್ನ ನೋಡಿದಂತೆ ,
ನಿನ್ನ ಸ್ವರವ ಕೇಳಿದಂತೆ ,
ಬಿಸಿಯುಸಿರ ನಿನ್ನ ಸ್ಪರ್ಶ ಮೈಯ ಸೋಕಿದಂತೆ
ಜಾರುತಿದೆ ಈ  ಹುಚ್ಚು ಮನಸು ನಿನ್ನೆಡೆಗೆ  ,
ಕ್ಷಣವೂ ನಿನ್ನ ನೆನಪಲ್ಲೇ  ತೇಲ ಬಯಸಿಹೆ ಅದೇಕೋ ನಾ ಕಾಣೆ  . . .

 ಆಕರ್ಷಣೆಯು ಇದಲ್ಲ ,
ಕಾಲ -ಹರಣವೂ ಅಲ್ಲ ,
ವಿಭಿನ್ನ ನಿನ್ನ ವ್ಯಕ್ತಿತ್ವ , ವೈಖರಿಯೂ ವಿಶಿಷ್ಟ . . .
ವರ್ಣಿಸಲಾರೆ ಈ ಅನುಭೂತಿಯ . . .  
ಕಂಡಿರುವೆ  ನಿನ್ನಲ್ಲಿ  ಬಾಳ ಸುಮಧುರ ಸಾಂಗತ್ಯ . . .  

ಕಾಡುತಿದೆ ಅನುಮಾನವು ನನಗೆ ,
ಮೊದಲು ಒಲವಿನ ತಲ್ಲಣವೇ ಇದು!!!  
ನವ್ಯ -ಪರ್ವಕೆ ಆದಿ ಹೇಳಿರುವೆ ನೀನು . . . 
ಅಂಕುರಿಸಿದೆ ಆಸೆಗಳು ಸಾವಿರಾರು,
ಹೊಸತು-ಹೊಸತು ಇದೆಲ್ಲವೂ ಈ ಮನಕೆ,
ನೀನೇ ಕಾರಣ ಈ ಅನನ್ಯತೆಗೆ. . . 
ಬಿಗುಮಾನದ ಗೋಡೆ ನನಗಿಲ್ಲ . . . 
ಸುಪ್ತ ಪ್ರೀತಿಯು ಇದಲ್ಲ  , 
ವಿರಹದಲಿ ನಾ ಬೇಯೋದಿಲ್ಲ ,
ಮುಚ್ಚಿಟ್ಟು  ನಿನ್ನ ಕಾಡಿಸೋದಿಲ್ಲ . . .  

ನೀನೇ ಹೇಳು ,
ಕಂಗಳಲಿ   ಬಿಚ್ಚಿಡಲೇ ಈ ಹರುಷವ ?
ಬರೆದು ಒಪ್ಪಿಸಲೇ . . .  ಕೂಗಿ ಹೇಳಲೇ ನನ್ನೀ ಮನದ ತುಮುಲವ. . . ?

ಹಕ್ಕು ನನಗೆ ನಿನ್ನ ಮೇಲೆ ,

ಬೇಕು ನನಗೆ ಸದಾ ನಿನ್ನ ಸಾಂಗತ್ಯ-ಸಾನಿಧ್ಯ . . .
ಅದುವೇ ನನಗೆ ಸೌಭಾಗ್ಯ . . .
ಕೇಳುತಿರುವೆ  ನಿನ್ನ ಒಲವ ಉಡುಗೊರೆಯ. . . 
ಕೊಡುವೆಯಾ ನಾ ಬಯಸಿದ ಕಾಣಿಕೆಯ ?

-ಪ್ರಜ್ಞಮಾಲಾ