Saturday 25 November, 2017

ಹಿಮ ಕರಗಿದ ಬಳಿಕ


ಹಿಮ ಕರಗಿದ ಬಳಿಕ

ಹಕ್ಕಿಯ ಇಂಚರದಲ್ಲಿ, ನೇಸರನ ಕೆಂಪಿನಲ್ಲಿ ,  ಹಿಮದ ತಂಪಿನಲ್ಲಿ 
ನಿನ್ನ ನೆನಪುಗಳು ನನ್ನ ಅಪ್ಪಿಹುದು ಗೆಳೆಯ 
ಬಾಳಲಿ    ಪ್ರೀತಿಯ ಮಾಧುರ್ಯವ ತುಂಬಿದವ ನೀನೇ  ಇನಿಯ 

ಕನಸುಗಳ ಬಳ್ಳಿ ಮುರುಟಿತು ಹೇಗೋ   
ಕಳೆದು ಹೋದೆ ನೀನು  , ಮರೆತು ಮರೆಯಾದೆ   ಏಕೋ , 

ಮೇಣದಂತೆ  ಕರಗುತಿಹೆನು   ನಾನು
ಒಲವ   ಜ್ವಾಲೆಯ  ನಿರಂತರ  ಉರಿಸಿಹೆನು    ನಾನು
ಪ್ರೀತಿಯ ಅಮಿತ ಹಿತವ   
ನಿನಗಾಗೆ ಕಾಯ್ದಿರಿಸಿಹೆನು  ನಾನು  

ಮನಸು ಕರಗದೆ ನಿನಗೆ , ನೆನಪುಗಳು ಕಾಡದೆ ನಿನಗೆ
ಕಂಡರೂ ಕಾಣದಂತೆ ,
ನಿರ್ಜೀವ ಕೊರಡಾಗಿಹೆ ನೀ ಹೀಗೇಕೆ ?....

ಹಿಮ ಕರಗಿದ ಬಳಿಕ , ಕತ್ತಲು ಕವಿದ ಬಳಿಕ ..
ತೋರುವೆ ಯಾರಿಗೆ  ಆ ಪ್ರೀತಿಯ...
ಕಾಲ ನಿಂತ ಬಳಿಕ ....? 
-ಪ್ರಜ್ಞಮಾಲಾ

ನೀ ನನಗೆ ಯಾರು ?

ನೀ ನನಗೆ ಯಾರು ?

ಹೀಗೆ ಹಾದು ಹೋದ ಅಪರಿಚಿತನು ನೀನಲ್ಲ ...
ಹಾದಿ ಉದ್ದಕ್ಕೂ ಜೊತೆಗಿರುವ ನಂಟೂ ನಿನ್ನ ಜೊತೆಗಿಲ್ಲ ...


ಕಂಡ ಮರುಕ್ಷಣವೇ ,ಎದೆ ತಾಳ ತಪ್ಪಿಸಿದವ ನೀನು...
 ಕಂಡರೂ ಕುರುಡಾಗಿ , ಕನಸಿನಲೇ ಸುಳಿದಾಡುವ
"ಚಿತ್ತ-ಚೋರ" ನು  ನೀನು ....
ಕೈಗೆಟುಕದ ಹಣ್ಣಾಗಿ , ಮನಸ ಕಾಡುವ,
ಕಗ್ಗಂಟಿನ ಒಗಟು  ನೀನು ...

                                                                                  - ಪ್ರಜ್ಞಮಾಲಾ 

Friday 24 November, 2017

"ಮೋಹನ -ರಾಗ"



"ಮೋಹನ -ರಾಗ"

ಅದೆಂಥಹಾ ನಿನ್ನ ಕಳೆ,
ಎಬ್ಬಿಸಿರುವೆ ಮನದಲಿ  ಕಚಗುಳಿಯ ಅಲೆ ,
ಕಳೆದು ಹೋದೆ ನಾ ನಿನ್ನಲೇ . . . 


ಬಾಳ ಬೃಂದಾವನದ ಮೋಹನನು ನೀನು ,
ನೀ ನುಡಿಸಿದಂತೆ  ನುಡಿಯುವ ಕೊಳಲು ನಾನು . . .
ಹತ್ತಿರ ಬರಸೆಳೆದ ಮೋಹ ಮಾಯೆಯು  ನೀನು 
ಒಲವ ಹೂಬನದಲಿ ಸುಗಂಧರಾಜನು  ನೀನು  

ಸ್ನೇಹದ ಪಲ್ಲವಿಗೆ "ಪ್ರೀತಿಯ " ಶ್ರುತಿ  ಸೇರಿ  . . . ಅನುರಾಗ ಅರಳಿತು 
ಕನಸುಗಳ ಆಶಾಗೋಪುರ ಇಂದು ನನಸಾಯಿತು  

ಕಣ್ಣರಳಿದಾಗ , ಕಣ್ -ಹೊರಳಿದಾಗ 
ಮಿನುಗುತಿದೆ ನಿನ್ನ ಬಿಂಬ  
ನನ್ನೀ ಒಲವ ಪರದೆಯಲಿ 
ಕಾಣಿಸದೇ ನಿನಗೀಗ  ನಿನ್ನದೇ ಪ್ರತಿಬಿಂಬ ?

  ಪುಳುಕದ ಆಲಿಂಗನ , ಝಲ್ಲೆನಿಸಿದೆ  ತನು-ಮನ
ಒಲವ  ಆ ಚುಂಬನ , ಮತ್ತೇರಿಸುತಿದೆ ಪ್ರತಿ ಕ್ಷಣ  
  ಈ ನಿನ್ನ ಪ್ರೀತಿಯೇ  ಚೇತನವು ನನಗೆ

ಆಶಯವು ಒಂದೇ, 
ಬೆಳಗುತಿರಲಿ ಎಂದೆಂದೂ  ನಮ್ಮೀ  ಒಲವ ಹಣತೆ . . . . 


-ಪ್ರಜ್ಞಮಾಲಾ

"ಬೆಳದಿಂಗಳು"


 "ಬೆಳದಿಂಗಳು"
ಕಂಗೊಳಿಸುತಿಹ ಇರುಳು ,
ವಸುಧೆಯ ಈ ಶುಭ್ರ ಸೊಬಗು ,
ತಂಗಾಳಿ  ಸೂಸಿಹುದು ನೀರವತೆಯ  ಸೊಗಡು , 
ನಾಚಿ ನುಲಿಯುತಿಹ ನೀರಧಿಗೆ ,
ಕಂಗಳಲೇ ಅಣುಕಿಸುತಿಹನು ಆ ಶಶಿಯು  . . .
ಈ ಸಲ್ಲಾಪವ ಕಂಡು ,
ಮರೆಯಲೇ ನಗುತಿಹನು ದಿನಮಣಿಯು  . . .  
-ಪ್ರಜ್ಞಮಾಲಾ 

ಸತ್ಯ-ನಿತ್ಯ

ಸತ್ಯ-ನಿತ್ಯ


ಸ್ಪರ್ಧೆಯೋ . . .  ಇಲ್ಲಿ ಸ್ವಾರ್ಥವೋ ...
ಮುಖವಾಡಗಳೇ ಇಲ್ಲಿ ಸ್ವರೂಪವೊ 

ವ್ಯಸನವೋ . . . ಇಲ್ಲಿ ಕತ್ತಲೆಯೋ ...
ನಂಬಿಕೆಯೇ ನಿನ್ನ ಶತ್ರುವೋ ,
ಸುಳ್ಳಿನ ಮಹಪೂರವೋ  ,
ಸತ್ಯವೂ  ಇಲ್ಲಿ  ಬೆತ್ತಲೆಯೋ  ...
ಇಲ್ಲಿ ಇದುವೇ ನಿತ್ಯವೋ . 

ಭಾವನೆಗಳ ಹಿಂಡಿ , ಮೌಲ್ಯಗಳ ಧಿಕ್ಕರಿಸಿ
ಕರುಣೆಯ ತೋರದ  ಸರದಾರನು
ಅವನೇ ಇಲ್ಲಿ ಸಾಹುಕಾರನು . . .

ಅರಿತರೂ , 
ಮರಳರೋ ನಾವು . . . 
ಬೆರೆತು - ನಗುತಾ ಕೂಪಕ್ಕೆ ಬೀಳಲು ಸಿದ್ಧರಾಗಿಹೆವು . . .
ನಾವಿಲ್ಲಿ  ಅಸಹಾಯಕರೋ ,ಮತಿಹೀನರೋ
ಅಥವಾ
ತುಳಿದು ಮೇಲ್ನುಗ್ಗುವ  ಪ್ರಚಂಡರೋ  . . .

ಜಗಕೆ ಅಂಟಿಹುದು
ವಿಷವೋ ಇದು ,
ಅಲ್ಲಲ್ಲಾ ಅನಿವಾರ್ಯದ  ಅಮಲೋ!

ಬದಲಾವಣೆಯ ಭ್ರಮೆಯು ನೆತ್ತಿಗೇರಿದರೆ  ,
ಹಿತವರನು ಹುಡುಕ ಹೊರಟರೆ   
- ಶೂನ್ಯದಲೇ ಕಳೆದು ಹೋದೇವು, ವಸುಧೆಯ ಒಡಲೊಳಗೆ ಬೆರೆತೇವು ಜೋಕೆ . . .
ಬದುಕು ಇಲ್ಲಿ  ಮಾರಿಯೋ
ಮಹಾ - ಮಾಯೆಯೋ
ಜೋಕೆ -ಜೋಕೆ 
-ಪ್ರಜ್ಞಮಾಲಾ

ನಾನು -ಆನು -ತಾನು

ನಾನು -ಆನು -ತಾನು

ನಾನು -ಆನು -ತಾನು 
       ಹಿತವರಾರು ಇವರಲಿ ?
               ಮಿತವರಾರು ಇವರಲಿ ?
      ಸ್ಥಿರವರಾರು ಇವರಲಿ ? 
                      ಸ್ಥಿತವರಾರು ಇವರಲಿ ?

ಹುಡುಕ ಹೊರಟರೆ ಜೋಕೆ 
ಹೊತ್ತು ನಗುವುದು ಮುಖವಾಡಗಳ ನಿನ್ನ  ಬಿಂಬವು  . . .
ನುಲಿಯುತಾ ಇರಿಯುವಳು  ನಿನ್ನ ಆ  ಬೆಡಗಿ  "ನೆರಳು" 
"ಮರುಳ" ! ಅರಿತುಕೋ ಇಲ್ಲಿ ನಿನಗೆ ನೀನೇ  ಶತ್ರುವು 

ಆರು -ಮೂರರ  ಜಾಗದಲಿ ,
ಜಗದ ಸತ್ಯವೇ ಇಹುದು ನೋಡು 
ಬೇಡಿದರೂ , ಬಿಕ್ಕಿದರೂ 
ಮನ್ನಿಸದು ಬೆಳಕಿನ ಒಂದಿನಿತು ಕಿರಣ 
ಇಣುಕಿದಷ್ಟೂ ಶೂನ್ಯ ,
ಜಗ್ಗಿದಷ್ಟೂ ಕತ್ತಲೆಯ ಕಡಿವಾಣ ... 

ಒಪ್ಪಿ - ಅಪ್ಪಿದರೆ ಇದುವೇ   ಶಯನ 
ಮುಂದಿನ ಪಯಣದ ನಿರ್ಮಾಣ 
ನಾಳೆಯ ಅನಂತಕೆ ಇದುವೇ ನಿರ್ವಾಣ . . .  

ಜೀವನದ ಅಸ್ತಕೆ ,  ಹಾದಿ ಬಲು ದೂರ  
ವ್ಯಕ್ತಿಗಳ - ವಸ್ತುಗಳ ಬೇಧವ ಅರಿತು ,
ಕರ್ತುವಿನ  ಕಾರ್ಯಗಳ ಋಣದಲಿ ಬೆರೆತು   
ವ್ಯಕ್ತಿಯ ಪ್ರೀತಿಸಿ , ಕರ್ತುವ ನಂಬಿ 
ದಾಟಿಕೋ  ಈ ಯಾನವ,
ಮುಗಿಸು ನಿನ್ನ ಒಂದು "ಸಣ್ಣ" ಪಯಣ ,
 ಭವಸಾಗರವು ಇದು ಬಿಡಲೊಲ್ಲದು ನಿನ್ನ 
ಆರಂಭಿಸುವುದು ಮತ್ತೊಂದು ನವೀನ ಪಯಣ 

ಜೀವನಚಕ್ರವು  ಇಲ್ಲಿ ನಿತ್ಯ ಚಲನವು ,
ಆದಿ - ಅಂತ್ಯಗಳೇ ಇಲ್ಲಿ ಶಾಶ್ವತವು. . . 
-ಪ್ರಜ್ಞಮಾಲಾ 

Thursday 23 November, 2017

ಮೌನ, The Power of Silence

ಮೌನ

ಮೌನ ,ಅಗಣಿತ ಭಾವಗಳ ಬಿಂಬವು 
ನುಡಿಯದ ಸಾವಿರ ಪದಗಳ ಸ್ವರವು 

ಮೌನ, ನಾಚಿ ತೋರುವ ಸಮ್ಮತಿಯು 
ತಿರಸ್ಕಾರವ ಬಂಧಿಸುವ ಸಂಕೋಲೆಯು 

ಮೌನ , ಎದೆತಟ್ಟಿ ಬೀಗುವ ಹೆಮ್ಮೆಯು 
ಜಿಗುಪ್ಸೆ , ಕಪಟಗಳ ಮರೆಯಾಗಿಸುವ ತೆರೆಯು 

ಮೌನ , ಮನವ ರಂಗೇರಿಸುವ ಖುಷಿಯು 
ಮಡುಗಟ್ಟಿದ ದುಃಖವು 

ಮೌನ , ಶಾಂತ ನಿರಾಕಾರ ಸ್ವರೂಪವು
ಕುದಿಯುವ ಕೋಪವು - ಜ್ವಾಲಾಗ್ನಿಯು

ಮೌನ,  ಕಗ್ಗತ್ತಲೆಯ ಕೂಪಕೆ ತಳ್ಳುವ ಕ್ರೂರಿಯು 
ಒಂಟಿತನವ ಅಂಟಿಸುವ ವೈರಿಯು 

ಮೌನ, ಏಕಾಂತದಲಿ ಮೂಡುವ ಆಶಾಕಿರಣವು 
ನಿರಾಸೆಯಲಿ ಮೂಡುವ ಸ್ಫೂರ್ತಿ , ನವಚೈತನ್ಯವು 

ಮೌನ ವರ್ಣಿಸಲು ಅತೀತ . . . 
ಸಾಗರಕಿಂತ ಆಳ. . . 

ಮೌನ ಕಹಿಯು,
                       ನೈಜವು  ,
                                       ಗೌಪ್ಯವು 

ಮೌನ ಅನುಭವವು . . .  ಅನುಭಾವವು 
ಮೌನ ಸುಂದರ , ಸುಗುಣ , ರಮ್ಯವು 

-ಪ್ರಜ್ಞಮಾಲಾ

ವಿಧಿ

ವಿಧಿ 


ವಿಧಿಗೆ ಋಣದ ಕಡಿವಾಣ ಇಹುದು ,
ಋಣಕೆ ವಿಧಿಯ ಸೆಳೆತವಿಹುದು

ಕೇಳಿ , ಹೇಳಿ , ಹಿಡಿದು ಜಗ್ಗಿದರೂ ...
ಮೌನ ತೆಳೆದು , ಮುನಿದು ದೂಡಿದರೂ ...

ಒಲಿಸಿ, ಆಲಿಸಿ, ಪಾಲಿಸಿ ಬಯಸಿದರೂ
ಕೂಗಿ ಕರೆದು , ದೈನ್ಯದಿ ಬೇಡಿದರೂ

ಇರುವುದರ ಬಿಟ್ಟು , ಇರದುದರೆಡೆಗೆ ತುಡಿದರೂ
ಆಸೆ - ನಿರಾಸೆ -ದುರಾಸೆಗಳ ಮೋಹದಲಿ ಸಿಲುಕಿದರೂ

ಪಾಲಿಗೆ ಸಿಗುವುದು ವಿಧಿ ಲಿಖಿತವು ,
ಅದೃಷ್ಟ  ಒಮ್ಮೆಯಾದರೆ , ಮಗದೊಮ್ಮೆ ದುರ್ಭಾಗ್ಯವು

ಈ ಕಾಲನು ಮಾಂತ್ರಿಕನು , ವಿಧಿಯೇ   ಆತನ ಮಾಯಾಜಾಲವು 
ಪೀಡಿಸುತಾ - ತಿಳಿಸುವ ಆತನೇ ನಕ್ಷತ್ರಿಕನು , ನಮ್ಮ ಪರೀಕ್ಷಕನು
ನಾವೆಲ್ಲರೂ ಆತನ ಕೈಗೊಂಬೆಗಳು
-ಪ್ರಜ್ಞಮಾಲಾ