Monday 6 May, 2013

ಮಿತ್ರರೋ , ಶತ್ರುಗಳೋ ಇವರು ?


ಮಿತ್ರರೋ , ಶತ್ರುಗಳೋ 
ಇವರು  ? 
ಮಿತ್ರರು ಯಾರೋ , ಶತ್ರುಗಳು ಯಾರೋ .....
ವಿಷವುಣಿಸುವ ಹಿತ - ಶತ್ರುಗಳಾರೋ ... ಅರಿಯೆನು ನಾನು

ಪ್ರೀತಿಯ ಅಮೃತವನೀಯುವ ದೈವವ ಬೇಡೆನು, 
ಬಿರುಕು ತರುವ ಆ ಮನಸ್ತಾಪಗಳ ದೂರೆನು ನಾನು ,

ಖುಷಿಯ ಸುಮಧುರ ಕ್ಷಣಗಳ
 ಸವಿ ಹೆಚ್ಚಿಸುವುದು ಅದು  . . .
ಮನಸುಗಳ ಬೆಸೆಯುವುದೇ ಅದು. . .

ಹಗೆಯ ಸಾಧಿಸುವ ರಕ್ಕಸನ ದೂರುವೆನು ನಾನು  ...
ಸ್ನೇಹದ ನೆರಳಲ್ಲಿ ಹುಟ್ಟುವುದು ಹೇಗೆ ಆ ದ್ವೇಷದ ಕಿಡಿ?
ಮನಸ ಸುಡುವುದೇ ಅದರ ನೈಜ ಪರಿ ....
ಪ್ರೀತಿಯ ಅಮೃತವನೀಯುವ ದೈವವ ಬೇಡೆನು,  
ಹಗೆಯ ಸಾಧಿಸುವ ರಕ್ಕಸನ ಬೇಡೆನು ನಾನು  ..
ಗೆಳೆತನದ ಸಿಹಿ-ಕಹಿ ಬಾಂಧವ್ಯವ 

ಬೆಸೆವ
ಸರಳ ಮನಸ ಬೇಡುವೆನು ನಾನು ,

ಉಪಕಾರ ಮಾಡದಿರೆ , ಅಪಕಾರವ ಬಗೆಯುವ ಕಹಿ ಮನಸೇ ಏತಕಿಲ್ಲಿ ?
ಎಲ್ಲರೊಳು ಬೆರೆತು ಬಾಳಲು ಹವಣಿಸುವ  ನಾನು  ಮೂರ್ಖಳೇ  ಇಲ್ಲಿ ?... 

-ಪ್ರಜ್ಞಮಾಲಾ


ಗ್ರಹಣ


ಗ್ರಹಣ

ಬಯಸಿದಾಗ  ಸಿಕ್ಕಿತು
ನಿನ್ನ  ಮುನಿಸು - ಮೌನಗಳ  ಬಹುಮಾನ
ಬೇಡಿದಾಗ ನೀಡಿದೆ 
ಅವಮಾನ- ಬಿಗುಮಾನಗಳ ಸನ್ಮಾನ 



                   ಪ್ರೀತಿಸಿದವ ಬದಲಾದ , ಪ್ರೀತಿ ನಿಂತ ನೀರಾಯ್ತು ...

               ಜಟಿಲವಾದ ಸಂಬಂಧಗಳು , ಒಲವ ಕುಸುಮವ ಕರಟಿಸಿತು ... .

ಒಡೆದ  ಕನಸುಗಳ ರಾಶಿಯಲ್ಲಿ ,
ಬಿಕ್ಕುತ್ತಿದ್ದೆ  ನಿನ್ನ ನೆನಪಲ್ಲಿ ಅನುದಿನವು ನಾನು ... 

ದೂರವಾದೆ ...  ಅದೆಲ್ಲಿ ಮಾಯವಾದೆ ,
ಅಂಟಿಸಿ ಹೋದೆ ನನಗೇಕೆ ಒಂಟಿತನ ಛಾಯೆ ಅಂದು ನೀನು ? ...
 

ಉರುಳಿತು ಕಾಲ , ಚಿಗುರಿತು ನವ ಋತುಮಾನ ... 


ಮತ್ತೆ  ಪ್ರವಹಿಸಿತು  ಒಲವ ನೂತನ ಝರಿ ,



                              ಮಿಂದು-ನಲಿದು ನಗುತ್ತಿದ್ದೆ , 



                              ಮಾಸಿಸುತ್ತಿತ್ತು ಮನದ  ಗಾಯಗಳು, 


                                   ನನ್ನೀ ಸುಧಾಂಶುವಿನ  ಮಡಿಲಿನಲಿ 

ಬೆಳದಿಂಗಳ ನಗೆಯ ಹರಿಸಿ , ಜೇನ  ಸವಿಯ ಸ್ಫುರಿಸಿ,
 ಪಲ್ಲವಿಸಿತು  ಮಗದೊಮ್ಮೆ ಅನುರಾಗದ  ಸಿರಿ ...
ಸುಪ್ತ ಆಸೆಗಳಿಗೆ  ಬೀಸಿತು  ವಾಸ್ತವದ ತಂಗಾಳಿ ...


ಝೇಂಕರಿಸಿತು ನಿರೀಕ್ಷೆಗಳ ನೂತನ ಖನಿ,
ಅವನೇ ನನ್ನ ಬಾಳ ಕಣ್ಮಣಿ  ...



ಗ್ರಹಣದಂತೆ  ಹಿಂದಿರುಗಿದೆ  ಏಕೆ?...
ಹಳೆಯ ಕಿಡಿಯ  ಹೊಗೆಯಾಡಿಸಲು,

 ಪ್ರತ್ಯಕ್ಷವಾದೆ  ಈಗೇಕೆ ?

ಸಲ್ಲದ-ಒಲ್ಲದ ಹಳೆಯ ನೆನಪುಗಳು
ಹುಗಿದುಹೋಗಿಹವು 
ನಳನಳಿಸುವ  ಹೂಬನದಲ್ಲಿ ಇಂದು ..

ಭಾವರಹಿತ ನೆರಳು ಮಾತ್ರವೇ ನಿನಗಾಗಿಗೆಯೇ ಚಾಚಿಹುದು ,
ನನ್ನ ಕಣಕಣಗಳಲ್ಲಿ  ಇಂದು...

ಉರುಳಲಾರೆ ಹಳೆಯ ಗಾಲಿಯ ಕಟ್ಟಿ
ನಿನ್ನ  ಜೇಡನ ಬಲೆಗೆ ಮತ್ತೆ ನಾನು....


"ಕಲ್ಮಷ " ಪ್ರೀತಿಯ ನಾಟಕವ ನಿಲ್ಲಿಸು,

ಆಡದಿರು ಚದುರಂಗದಾಟವ ನನ್ನ ಬಾಳಲಿ ಮತ್ತೆ  ನೀನು...

ದೂರವಾಗಲಾರೆ, ಮಾಯವಾಗಲಾರೆ. . . 

ಈಗೇಕೆ  ಅಂದಿನಂತೆ ಮತ್ತೆ ನೀನು?
ದೂರವಾಗಲಾರೆ ,ತೊರೆದು ಹೋಗಲಾರೆ  
ಈಗೇಕೆ  ಅಂದಿನಂತೆ ಮತ್ತೆ ನೀನು?...




-ಪ್ರಜ್ಞಮಾಲಾ

ಕೋಪ

ಕೋಪ 



ಪ್ರೀತಿ ಅನಂತವಾಗಿದೆ ,

ಆಸೆಯ ಕನಸುಗಳು ಅಗಣಿತ ತಾರೆಯಾಗಿವೆ ,



ಪ್ರೀತಿ ಸಾಗರದಷ್ಟಿದ್ದರೂ ,

ಆಸೆಗಳು ಮುನಿಸಿನ ಪರದೆಯಲಿ ಮರೆಯಾಗಿವೆ . . .

ಕೋಪ ಮನಸಲಿ ನೆಲೆ ಮಾಡಿದೆ ,

ನಂಬಿಕೆಯ ಬುನಾದಿಗೇ  ಗೆದ್ದಲು ಹಿಡಿದಿದೆ 

ಮುನಿಸು ತರವಲ್ಲ ಮುಗ್ಧ ಮನಸಿಗೆ -ತಿಳಿದರೂ ಈ ಸತ್ಯ ,

ಕೇಳದು   ಮನಸು ... ಎಂದೂ ಇಲ್ಲದ ಹಠವ ಹಿಡಿದಿದೆ

ನಿನ್ನ ಮನದಲಿ ನಾನಿರುವೆನೇ ,

ನಿನ್ನ ಒಲವ ಹಕ್ಕು ನನಗೆ ಮೀಸಲೇ ,

ಈ ಪ್ರೀತಿಯು ನಿನಗೆ ನಿರ್ಜೀವ ಆಟಿಕೆಯೇ . . .

ಪ್ರಶ್ನೆಗಳು ಹಲವು ಮನವ  ಕಾಡುತಿದೆ ,

ನಿನ್ನ ಅಸಡ್ಡೆಯ ಮಾತುಗಳ ಮಾರ್ದನಿ

ಮನದಲಿ  ಬಿರುಗಾಳಿಯ ಎಬ್ಬಿಸಿರೆ ,

ನಿರ್ಲಕ್ಷ್ಯದ ಆ ನೋಟ ಅಂಕುಶವಾಗಿ ತಿವಿಯುತಿದೆ ,



ಗರ್ವದ ಹೊರೆ ಒಲವ ಸೇತುವೆಯ ಜಗ್ಗುತಿರೆ ,
ಸನಿಹವಿದ್ದರೂ ಮನಗಳು ದೂರ   -   ಬಹು ದೂರ ಸಾಗಿದಂತಿದೆ

ನಿರ್ಲಿಪ್ತ ನಿನ್ನ ಭಾವ ಮನವ  ಹಿಂಡುತಿದೆ



ಬಿಚ್ಚಿಡು ಒಮ್ಮೆ ನಿನ್ನ ಮನದ ಬುತ್ತಿಯ ,

ನಗುವಿನಲಿ ಜೊತೆಯಾದ ಮನಸಿಗೆ , ಅಳುವಿನಲಿ ಪಾಲು ಹಂಚಿನೋಡು

ಬಾಳು ಒಂದು ಸುಂದರ  ಕಗ್ಗಂಟು   . . .

ಏಕಾಂಗಿ ನೀನಲ್ಲ ,
ಜೊತೆಯಾಗಿ ಬಿಡಿಸೋಣ ಅದರ ಪ್ರತಿಯೊಂದು ಒಗಟು . . .



ಈ ಮೌನ , ಈ ನಿರಾಶೆ  , ಈ ಅಪನಂಬಿಕೆ . . .

ತಿಳಿಯೆಯಾ  ಇದರ ಪರಿಣಾಮ . . . ?

ಕವಲೊಡೆಯಬೇಕೇ  ನಮ್ಮ ದಾರಿ . . . ?

ಇಲ್ಲವೇ ,
ಮರಳಿಸುವೆಯಾ ನಮ್ಮ  ಪ್ರೀತಿ ಅಪರಂಜಿಯ  . . . ?

ಬಿಡುವೆನೆಂದರೂ ಬಿಡದ ಮಾಯೆ  ನಿನ್ನದು,

ಮರಳಿಸುವೆಯಾ ಆ ಮೋಹ ,
ನಮ್ಮ  ಪ್ರೀತಿ ಅಪರಂಜಿಯ  . . . ?

ಕಾಯುತಿರುವೆ ನಿನ್ನ ಉತ್ತರ . . .


ಕಾಯುತಿರುವೆ ನಿನ್ನ ಉತ್ತರ . . .

-ಪ್ರಜ್ಞಮಾಲಾ