Tuesday 21 August, 2012

ಪ್ರೀತಿ

" ಪ್ರೀತಿ " 

ಈ ಪ್ರೀತಿಯ ಪರಿಯ 
ಹೇಗೆ ಬಿಚ್ಚಡಲಿ ಗೆಳತಿ ?
ಇದರರ್ಥವ -ನಿರಾಸೆಯ ಬಿಚ್ಚಡಿಲಿ ಹೇಗೆ ಗೆಳತಿ ? 

ಹೊಸತನದ ಸಂಭ್ರಮ ಇದು ,
ಹಳಸಿ , ನಾರುವ ಹುಚ್ಚು  ಇದು 

ನಿಲ್ಲಲಾರದ ಒರತೆಯು ಇದು,
ಚಿಮ್ಮಲಾರದ ಚಿಲುಮೆಯೂ ಇದು

ಕಂಗಳ ಸುಳಿ-ಮಿಂಚು ಇದು,
ಭೋರ್ಗರೆವ ಅಶ್ರುಧಾರೆಯೂ ಇದು 

ತಂಗಾಳಿಯ ತಂಪು ಇದು, ಮುಂಗಾರಿನ ಅಭಿಷೇಕವಿದು 
ಬರಗಾಲದ ಬರಡು ಇದು , ಪ್ರವಾಹದ ಆರ್ಭಟವೂ ಇದು  

ಎದೆಯ ಬೆಳಗುವ ನಂದಾದೀಪವಿದು,
ಧಗಧಗಿಸುವ ಕಾಡ್ಗಿಚ್ಚು  ಇದು
ಬೆಂಬಲಿಸುವ ಚೈತನ್ಯವಿದು ,
ದಿಗುಲುಗೊಳಿಸುವ ದುರ್ಬಲತೆಯೂ ಇದು 

ಕಲ್ಪನೆಯ ಲಹರಿಯಲಿ ತೇಲಿಸುವ ಅಲೆಯು  ಇದು,
ನೈಜತೆಯ  ಕೂಪಕೆ ಮುಗ್ಗರಿಸಿ ತಳ್ಳುವ ಮುಳ್ಳು ಇದು 

ಹೇಳೇ ಸಖಿ, ಈ ಪ್ರೀತಿಯ ಪರಿ-ಪರಿಯಾಗಿ ಬಿಚ್ಚಿಡಲಿ ಹೇಗೆ,
ಆಗಮನದ ಬೆನ್ನಲ್ಲೇ ನಿರ್ಗಮಿಸಿದ ಗ್ರಹಣವು ಇದು ...
ತೊಯ್ದಾಟ , ಹೊಯ್ದಾಟ , ಜಂಜಾಟಗಳ  ಕಾಟವು ಇದು ...
ಬಿಡುವೆನೆಂದರೂ ಬೆಸೆಯುವ ಮಾಯೆ ಇದು ,ಜಾಲವು ಇದು ... 

-ಪ್ರಜ್ಞಮಾಲಾ  

Thursday 9 August, 2012

ಸೋಲು

ಸೋಲು 

ಎದೆಯ ಕಣಿವೆಯಲ್ಲಿ
ಕತ್ತಲೆಯು ಕವಿದಿದೆ ...

ಬಾಳ ಆಗಸಕೆ

ಕಾರ್ಮೋಡಗಳ ಮುಸುಕಿದೆ ...

ನಂಬಿ ಸಾಗಿದ ದಾರಿಯೂ  ಇಂದು

ನನ್ನ ಮೇಲೆ ಮುನಿದಿದೆ ....


ಮನದ ಗೂಡಿನಲ್ಲಿ

ಅಗೋಚರ - ಅನಿಶ್ಚಿತ ಗಳೇ ಸುಳಿಯುತಿವೆ...

ಉಕ್ಕುತಿರುವ ಕಂಬನಿಗೆ ,

ನರಳಾಟದ ಈ  ಬೇಗುದಿಗೆ
ಅಂತ್ಯವ ಮನ ಅರಸುತಿದೆ ...
                                                                 
                                     ಆಸರೆಯ ನಿರೀಕ್ಷೆಯಲಿ ,
                              ಮನ ಇಂದೇಕೋ ಪರಿತಪಿಸುತಿದೆ ...

                                                                                                                             
 
 

ಅಪರಂಜಿ


ಅಪರಂಜಿ

ಈ ಬಾಂಧವ್ಯವ 
ಹೇಗೆ ವರ್ಣಿಸಲಿ ಗೆಳೆಯ ...
ಝೇಂಕರಿಸುತಿರುವ ಪ್ರಣಯ ನಾದವ    
ಹೇಗೆ ಬಣ್ಣಿಸಲಿ ಇನಿಯ ... 

ಒಲಿದು ಬಂದ ಕನಸು  ನೀನು ,
ಒಲವ ಸುಧೆಯ ಹರಿಸಿದವ ನೀನು ,

ನಗೆಯ ಹಂಚಿ, ಗುಣದಿ ಮಿಂಚಿ,
ಅಂತರಂಗದಾಳಕಿಳಿದ 
ಅಪರಂಜಿಯು ನೀನು... 

ನನ್ನೊಳಗೆ ನೀನಾಗಿ ,
ನಾ ನುಡಿವ ನುಡಿಯಾಗಿ ,
ಜೀವಗಳು ಒಂದಾಗಿ ,
ಬೆರೆತಿಹೆವು ನಾವು ಸೊಗಸಾಗಿ ಇಂದು