Saturday 25 November, 2017

ಹಿಮ ಕರಗಿದ ಬಳಿಕ


ಹಿಮ ಕರಗಿದ ಬಳಿಕ

ಹಕ್ಕಿಯ ಇಂಚರದಲ್ಲಿ, ನೇಸರನ ಕೆಂಪಿನಲ್ಲಿ ,  ಹಿಮದ ತಂಪಿನಲ್ಲಿ 
ನಿನ್ನ ನೆನಪುಗಳು ನನ್ನ ಅಪ್ಪಿಹುದು ಗೆಳೆಯ 
ಬಾಳಲಿ    ಪ್ರೀತಿಯ ಮಾಧುರ್ಯವ ತುಂಬಿದವ ನೀನೇ  ಇನಿಯ 

ಕನಸುಗಳ ಬಳ್ಳಿ ಮುರುಟಿತು ಹೇಗೋ   
ಕಳೆದು ಹೋದೆ ನೀನು  , ಮರೆತು ಮರೆಯಾದೆ   ಏಕೋ , 

ಮೇಣದಂತೆ  ಕರಗುತಿಹೆನು   ನಾನು
ಒಲವ   ಜ್ವಾಲೆಯ  ನಿರಂತರ  ಉರಿಸಿಹೆನು    ನಾನು
ಪ್ರೀತಿಯ ಅಮಿತ ಹಿತವ   
ನಿನಗಾಗೆ ಕಾಯ್ದಿರಿಸಿಹೆನು  ನಾನು  

ಮನಸು ಕರಗದೆ ನಿನಗೆ , ನೆನಪುಗಳು ಕಾಡದೆ ನಿನಗೆ
ಕಂಡರೂ ಕಾಣದಂತೆ ,
ನಿರ್ಜೀವ ಕೊರಡಾಗಿಹೆ ನೀ ಹೀಗೇಕೆ ?....

ಹಿಮ ಕರಗಿದ ಬಳಿಕ , ಕತ್ತಲು ಕವಿದ ಬಳಿಕ ..
ತೋರುವೆ ಯಾರಿಗೆ  ಆ ಪ್ರೀತಿಯ...
ಕಾಲ ನಿಂತ ಬಳಿಕ ....? 
-ಪ್ರಜ್ಞಮಾಲಾ

ನೀ ನನಗೆ ಯಾರು ?

ನೀ ನನಗೆ ಯಾರು ?

ಹೀಗೆ ಹಾದು ಹೋದ ಅಪರಿಚಿತನು ನೀನಲ್ಲ ...
ಹಾದಿ ಉದ್ದಕ್ಕೂ ಜೊತೆಗಿರುವ ನಂಟೂ ನಿನ್ನ ಜೊತೆಗಿಲ್ಲ ...


ಕಂಡ ಮರುಕ್ಷಣವೇ ,ಎದೆ ತಾಳ ತಪ್ಪಿಸಿದವ ನೀನು...
 ಕಂಡರೂ ಕುರುಡಾಗಿ , ಕನಸಿನಲೇ ಸುಳಿದಾಡುವ
"ಚಿತ್ತ-ಚೋರ" ನು  ನೀನು ....
ಕೈಗೆಟುಕದ ಹಣ್ಣಾಗಿ , ಮನಸ ಕಾಡುವ,
ಕಗ್ಗಂಟಿನ ಒಗಟು  ನೀನು ...

                                                                                  - ಪ್ರಜ್ಞಮಾಲಾ 

Friday 24 November, 2017

"ಮೋಹನ -ರಾಗ"



"ಮೋಹನ -ರಾಗ"

ಅದೆಂಥಹಾ ನಿನ್ನ ಕಳೆ,
ಎಬ್ಬಿಸಿರುವೆ ಮನದಲಿ  ಕಚಗುಳಿಯ ಅಲೆ ,
ಕಳೆದು ಹೋದೆ ನಾ ನಿನ್ನಲೇ . . . 


ಬಾಳ ಬೃಂದಾವನದ ಮೋಹನನು ನೀನು ,
ನೀ ನುಡಿಸಿದಂತೆ  ನುಡಿಯುವ ಕೊಳಲು ನಾನು . . .
ಹತ್ತಿರ ಬರಸೆಳೆದ ಮೋಹ ಮಾಯೆಯು  ನೀನು 
ಒಲವ ಹೂಬನದಲಿ ಸುಗಂಧರಾಜನು  ನೀನು  

ಸ್ನೇಹದ ಪಲ್ಲವಿಗೆ "ಪ್ರೀತಿಯ " ಶ್ರುತಿ  ಸೇರಿ  . . . ಅನುರಾಗ ಅರಳಿತು 
ಕನಸುಗಳ ಆಶಾಗೋಪುರ ಇಂದು ನನಸಾಯಿತು  

ಕಣ್ಣರಳಿದಾಗ , ಕಣ್ -ಹೊರಳಿದಾಗ 
ಮಿನುಗುತಿದೆ ನಿನ್ನ ಬಿಂಬ  
ನನ್ನೀ ಒಲವ ಪರದೆಯಲಿ 
ಕಾಣಿಸದೇ ನಿನಗೀಗ  ನಿನ್ನದೇ ಪ್ರತಿಬಿಂಬ ?

  ಪುಳುಕದ ಆಲಿಂಗನ , ಝಲ್ಲೆನಿಸಿದೆ  ತನು-ಮನ
ಒಲವ  ಆ ಚುಂಬನ , ಮತ್ತೇರಿಸುತಿದೆ ಪ್ರತಿ ಕ್ಷಣ  
  ಈ ನಿನ್ನ ಪ್ರೀತಿಯೇ  ಚೇತನವು ನನಗೆ

ಆಶಯವು ಒಂದೇ, 
ಬೆಳಗುತಿರಲಿ ಎಂದೆಂದೂ  ನಮ್ಮೀ  ಒಲವ ಹಣತೆ . . . . 


-ಪ್ರಜ್ಞಮಾಲಾ

"ಬೆಳದಿಂಗಳು"


 "ಬೆಳದಿಂಗಳು"
ಕಂಗೊಳಿಸುತಿಹ ಇರುಳು ,
ವಸುಧೆಯ ಈ ಶುಭ್ರ ಸೊಬಗು ,
ತಂಗಾಳಿ  ಸೂಸಿಹುದು ನೀರವತೆಯ  ಸೊಗಡು , 
ನಾಚಿ ನುಲಿಯುತಿಹ ನೀರಧಿಗೆ ,
ಕಂಗಳಲೇ ಅಣುಕಿಸುತಿಹನು ಆ ಶಶಿಯು  . . .
ಈ ಸಲ್ಲಾಪವ ಕಂಡು ,
ಮರೆಯಲೇ ನಗುತಿಹನು ದಿನಮಣಿಯು  . . .  
-ಪ್ರಜ್ಞಮಾಲಾ 

ಸತ್ಯ-ನಿತ್ಯ

ಸತ್ಯ-ನಿತ್ಯ


ಸ್ಪರ್ಧೆಯೋ . . .  ಇಲ್ಲಿ ಸ್ವಾರ್ಥವೋ ...
ಮುಖವಾಡಗಳೇ ಇಲ್ಲಿ ಸ್ವರೂಪವೊ 

ವ್ಯಸನವೋ . . . ಇಲ್ಲಿ ಕತ್ತಲೆಯೋ ...
ನಂಬಿಕೆಯೇ ನಿನ್ನ ಶತ್ರುವೋ ,
ಸುಳ್ಳಿನ ಮಹಪೂರವೋ  ,
ಸತ್ಯವೂ  ಇಲ್ಲಿ  ಬೆತ್ತಲೆಯೋ  ...
ಇಲ್ಲಿ ಇದುವೇ ನಿತ್ಯವೋ . 

ಭಾವನೆಗಳ ಹಿಂಡಿ , ಮೌಲ್ಯಗಳ ಧಿಕ್ಕರಿಸಿ
ಕರುಣೆಯ ತೋರದ  ಸರದಾರನು
ಅವನೇ ಇಲ್ಲಿ ಸಾಹುಕಾರನು . . .

ಅರಿತರೂ , 
ಮರಳರೋ ನಾವು . . . 
ಬೆರೆತು - ನಗುತಾ ಕೂಪಕ್ಕೆ ಬೀಳಲು ಸಿದ್ಧರಾಗಿಹೆವು . . .
ನಾವಿಲ್ಲಿ  ಅಸಹಾಯಕರೋ ,ಮತಿಹೀನರೋ
ಅಥವಾ
ತುಳಿದು ಮೇಲ್ನುಗ್ಗುವ  ಪ್ರಚಂಡರೋ  . . .

ಜಗಕೆ ಅಂಟಿಹುದು
ವಿಷವೋ ಇದು ,
ಅಲ್ಲಲ್ಲಾ ಅನಿವಾರ್ಯದ  ಅಮಲೋ!

ಬದಲಾವಣೆಯ ಭ್ರಮೆಯು ನೆತ್ತಿಗೇರಿದರೆ  ,
ಹಿತವರನು ಹುಡುಕ ಹೊರಟರೆ   
- ಶೂನ್ಯದಲೇ ಕಳೆದು ಹೋದೇವು, ವಸುಧೆಯ ಒಡಲೊಳಗೆ ಬೆರೆತೇವು ಜೋಕೆ . . .
ಬದುಕು ಇಲ್ಲಿ  ಮಾರಿಯೋ
ಮಹಾ - ಮಾಯೆಯೋ
ಜೋಕೆ -ಜೋಕೆ 
-ಪ್ರಜ್ಞಮಾಲಾ

ನಾನು -ಆನು -ತಾನು

ನಾನು -ಆನು -ತಾನು

ನಾನು -ಆನು -ತಾನು 
       ಹಿತವರಾರು ಇವರಲಿ ?
               ಮಿತವರಾರು ಇವರಲಿ ?
      ಸ್ಥಿರವರಾರು ಇವರಲಿ ? 
                      ಸ್ಥಿತವರಾರು ಇವರಲಿ ?

ಹುಡುಕ ಹೊರಟರೆ ಜೋಕೆ 
ಹೊತ್ತು ನಗುವುದು ಮುಖವಾಡಗಳ ನಿನ್ನ  ಬಿಂಬವು  . . .
ನುಲಿಯುತಾ ಇರಿಯುವಳು  ನಿನ್ನ ಆ  ಬೆಡಗಿ  "ನೆರಳು" 
"ಮರುಳ" ! ಅರಿತುಕೋ ಇಲ್ಲಿ ನಿನಗೆ ನೀನೇ  ಶತ್ರುವು 

ಆರು -ಮೂರರ  ಜಾಗದಲಿ ,
ಜಗದ ಸತ್ಯವೇ ಇಹುದು ನೋಡು 
ಬೇಡಿದರೂ , ಬಿಕ್ಕಿದರೂ 
ಮನ್ನಿಸದು ಬೆಳಕಿನ ಒಂದಿನಿತು ಕಿರಣ 
ಇಣುಕಿದಷ್ಟೂ ಶೂನ್ಯ ,
ಜಗ್ಗಿದಷ್ಟೂ ಕತ್ತಲೆಯ ಕಡಿವಾಣ ... 

ಒಪ್ಪಿ - ಅಪ್ಪಿದರೆ ಇದುವೇ   ಶಯನ 
ಮುಂದಿನ ಪಯಣದ ನಿರ್ಮಾಣ 
ನಾಳೆಯ ಅನಂತಕೆ ಇದುವೇ ನಿರ್ವಾಣ . . .  

ಜೀವನದ ಅಸ್ತಕೆ ,  ಹಾದಿ ಬಲು ದೂರ  
ವ್ಯಕ್ತಿಗಳ - ವಸ್ತುಗಳ ಬೇಧವ ಅರಿತು ,
ಕರ್ತುವಿನ  ಕಾರ್ಯಗಳ ಋಣದಲಿ ಬೆರೆತು   
ವ್ಯಕ್ತಿಯ ಪ್ರೀತಿಸಿ , ಕರ್ತುವ ನಂಬಿ 
ದಾಟಿಕೋ  ಈ ಯಾನವ,
ಮುಗಿಸು ನಿನ್ನ ಒಂದು "ಸಣ್ಣ" ಪಯಣ ,
 ಭವಸಾಗರವು ಇದು ಬಿಡಲೊಲ್ಲದು ನಿನ್ನ 
ಆರಂಭಿಸುವುದು ಮತ್ತೊಂದು ನವೀನ ಪಯಣ 

ಜೀವನಚಕ್ರವು  ಇಲ್ಲಿ ನಿತ್ಯ ಚಲನವು ,
ಆದಿ - ಅಂತ್ಯಗಳೇ ಇಲ್ಲಿ ಶಾಶ್ವತವು. . . 
-ಪ್ರಜ್ಞಮಾಲಾ 

Thursday 23 November, 2017

ಮೌನ, The Power of Silence

ಮೌನ

ಮೌನ ,ಅಗಣಿತ ಭಾವಗಳ ಬಿಂಬವು 
ನುಡಿಯದ ಸಾವಿರ ಪದಗಳ ಸ್ವರವು 

ಮೌನ, ನಾಚಿ ತೋರುವ ಸಮ್ಮತಿಯು 
ತಿರಸ್ಕಾರವ ಬಂಧಿಸುವ ಸಂಕೋಲೆಯು 

ಮೌನ , ಎದೆತಟ್ಟಿ ಬೀಗುವ ಹೆಮ್ಮೆಯು 
ಜಿಗುಪ್ಸೆ , ಕಪಟಗಳ ಮರೆಯಾಗಿಸುವ ತೆರೆಯು 

ಮೌನ , ಮನವ ರಂಗೇರಿಸುವ ಖುಷಿಯು 
ಮಡುಗಟ್ಟಿದ ದುಃಖವು 

ಮೌನ , ಶಾಂತ ನಿರಾಕಾರ ಸ್ವರೂಪವು
ಕುದಿಯುವ ಕೋಪವು - ಜ್ವಾಲಾಗ್ನಿಯು

ಮೌನ,  ಕಗ್ಗತ್ತಲೆಯ ಕೂಪಕೆ ತಳ್ಳುವ ಕ್ರೂರಿಯು 
ಒಂಟಿತನವ ಅಂಟಿಸುವ ವೈರಿಯು 

ಮೌನ, ಏಕಾಂತದಲಿ ಮೂಡುವ ಆಶಾಕಿರಣವು 
ನಿರಾಸೆಯಲಿ ಮೂಡುವ ಸ್ಫೂರ್ತಿ , ನವಚೈತನ್ಯವು 

ಮೌನ ವರ್ಣಿಸಲು ಅತೀತ . . . 
ಸಾಗರಕಿಂತ ಆಳ. . . 

ಮೌನ ಕಹಿಯು,
                       ನೈಜವು  ,
                                       ಗೌಪ್ಯವು 

ಮೌನ ಅನುಭವವು . . .  ಅನುಭಾವವು 
ಮೌನ ಸುಂದರ , ಸುಗುಣ , ರಮ್ಯವು 

-ಪ್ರಜ್ಞಮಾಲಾ

ವಿಧಿ

ವಿಧಿ 


ವಿಧಿಗೆ ಋಣದ ಕಡಿವಾಣ ಇಹುದು ,
ಋಣಕೆ ವಿಧಿಯ ಸೆಳೆತವಿಹುದು

ಕೇಳಿ , ಹೇಳಿ , ಹಿಡಿದು ಜಗ್ಗಿದರೂ ...
ಮೌನ ತೆಳೆದು , ಮುನಿದು ದೂಡಿದರೂ ...

ಒಲಿಸಿ, ಆಲಿಸಿ, ಪಾಲಿಸಿ ಬಯಸಿದರೂ
ಕೂಗಿ ಕರೆದು , ದೈನ್ಯದಿ ಬೇಡಿದರೂ

ಇರುವುದರ ಬಿಟ್ಟು , ಇರದುದರೆಡೆಗೆ ತುಡಿದರೂ
ಆಸೆ - ನಿರಾಸೆ -ದುರಾಸೆಗಳ ಮೋಹದಲಿ ಸಿಲುಕಿದರೂ

ಪಾಲಿಗೆ ಸಿಗುವುದು ವಿಧಿ ಲಿಖಿತವು ,
ಅದೃಷ್ಟ  ಒಮ್ಮೆಯಾದರೆ , ಮಗದೊಮ್ಮೆ ದುರ್ಭಾಗ್ಯವು

ಈ ಕಾಲನು ಮಾಂತ್ರಿಕನು , ವಿಧಿಯೇ   ಆತನ ಮಾಯಾಜಾಲವು 
ಪೀಡಿಸುತಾ - ತಿಳಿಸುವ ಆತನೇ ನಕ್ಷತ್ರಿಕನು , ನಮ್ಮ ಪರೀಕ್ಷಕನು
ನಾವೆಲ್ಲರೂ ಆತನ ಕೈಗೊಂಬೆಗಳು
-ಪ್ರಜ್ಞಮಾಲಾ 

ಒಲವ ಚುಂಬನ-A Proposal


ಒಲವ ಚುಂಬನ -A Proposal 

ಚುಂಬಿಸಿ ಚಂದಿರನ ಕಿರಣ ,
ತಬ್ಬಿದೆ ಇಳೆಯ ಇರುಳ ಮೌನ

ತಂಗಾಳಿಯಲಿ ತೇಲಿ ಬಂದ ಮೇಘವೂ
ಪಿಸುಗುಡುತಿದೆ ನಮ್ಮ ಪ್ರೇಮ ಗಾನ

ಜಿನುಗಿದ ಹನಿಗಳು ವಸುಧೆಯ ಮುತ್ತಿಟ್ಟು  ,
ಸೂಸಿದೆ ನಿನ್ನದಯೇ ಪರಿಮಳ

ಅಂಬರದ ತಾರೆಗಳೂ ಛೇಡಿಸುತಿವೆ
ಮಿನುಗುತಿಹ ನನ್ನೀ ವದನವ

ಬೆಳದಿಂಗಳು ಇಳಿದು , ನೇಸರನು ಇಣುಕಿದರೂ
ಕನಸುಗಳೇ ತುಂಬಿದೆ ತೆರೆದ ಈ  ಕಂಗಳ

ಸಮ್ಮುದದ ಅಲೆಯೊಂದು  ಹೊಮ್ಮಿದೆ ,
ಇದಕೆಲ್ಲಾ  ಯಾರು ತಾನೇ ಕಾರಣ ,

ಎಲ್ಲಿ ಅಡಗಿದ್ದೆಯೋ ಮನ-ಮೋಹನ,
ಈ ತಳಮಳಕ್ಕೆ ನೀನೇ ತಾನೆ ಕಾರಣ . . .
-ಪ್ರಜ್ಞಮಾಲಾ 

ಪ್ರೀತಿಸುವುದು ಒಂದು ಕಲೆ, ಕಲಿತು-ರೂಢಿಸಿ ಬರುವ ಭಾವನೆ ಇದಲ್ಲ. ಪ್ರೀತಿಯ ಅಮರ ಪ್ರತೀಕ ರಾಧಾ-ಕೃಷ್ಣ , ಮಾನವ ಸ್ವರೂಪದಲ್ಲಿ ಜನಿಸಿ ಪ್ರೀತಿಯ ಗಾಢತೆ ಹಾಗು ಮೌಲ್ಯವನ್ನು ತೋರಿದವರು ಇವರು .ರಾಧಾ-ಕೃಷ್ಣರ ಪ್ರೀತಿಯ ಒಂದಂಶದಷ್ಟು ಪ್ರೀತಿ ನಮ್ಮಲ್ಲಿ ಮೂಡಿದರೆ, ಅಂತಹ ಪ್ರೀತಿ ದೊರೆತರೆ , ಜೀವನವೇ ಭಾಗ್ಯದಾಯಕ ,ಸುಖಮಯ

ಪ್ರೀತಿಸುವುದು ಒಂದು ಕಲೆ, ಕಲಿತು-ರೂಢಿಸಿ ಬರುವ ಭಾವನೆ ಇದಲ್ಲ. ಪ್ರೀತಿಯ ಅಮರ ಪ್ರತೀಕ ರಾಧಾ-ಕೃಷ್ಣ , ಮಾನವ ಸ್ವರೂಪದಲ್ಲಿ ಜನಿಸಿ ಪ್ರೀತಿಯ ಗಾಢತೆ ಹಾಗು ಮೌಲ್ಯವನ್ನು ತೋರಿದವರು  ಇವರು .ರಾಧಾ-ಕೃಷ್ಣರ ಪ್ರೀತಿಯ ಒಂದಂಶದಷ್ಟು ಪ್ರೀತಿ ನಮ್ಮಲ್ಲಿ ಮೂಡಿದರೆ, ಅಂತಹ ಪ್ರೀತಿ ದೊರೆತರೆ , ಜೀವನವೇ  ಭಾಗ್ಯದಾಯಕ  ,ಸುಖಮಯ

ರಾಧೆಗೆ ಜಗತ್ತೇ ಕೃಷ್ಣಮಯವು 
ಸ್ನೇಹದಿಂದ ಮೂಡಿದ ಅನುರಕ್ತಿ
ಅನುರಕ್ತಿಯಿಂದ ಅರಳಿದ ಭಕ್ತಿ 
ಆಕೆಗೆ ಅವನದೇ ಮೋಹಮಾಯೆಯು 

ಮನದಲಿ ಆವರಿಸಿದ ಗೋಪಾಲನು ,
ಆಕೆಯ ಕಂಗಳಲಿ ಅವತರಿಸುವನು 
ನಾಟ್ಯ-ಗಾನ ಲೋಲ ಕೃಷ್ಣನಲಿ ಲೀನವು 
ಆಕೆಯ ಪ್ರತಿ ಎದೆ ಬಡಿತವು 
" ನನ್ನಲ್ಲಿ ಕೃಷ್ಣ ", " ನಾನೇ ಕೃಷ್ಣ " 
ರಾಧೆಗೆ ಕೃಷ್ಣನೇ ಸರ್ವಸ್ವವು  
ಇವಳೇ ಪ್ರೀತಿಯ ಸ್ವರೂಪವು 

ಅವಿರತ, ನಿರಂತರ  ಕಾಯುವಿಕೆಯಲಿ ಇರುವವಳೇ  ರಾಧೆಯು 
ಅನಂತ ಪ್ರೀತಿಯ ನೀಯುವವಳೇ ರಾಧೆಯು 
ಸಾಮಿಪ್ಯ-ಸಾನಿಧ್ಯಗಳ ಎಲ್ಲೆ  ಮೀರಿ ,
ಆಸೆ ನಿರಾಸೆಗಳ ಬಯಕೆ ದಾಟಿದವಳೇ ರಾಧೆಯು 

ಮಾಧವನ  ಕೊಳಲ ಮಧುರ ದನಿಯಲಿ  ಇಹಳು ರಾಧೆ 
ಶ್ಯಾಮನ ಕಣ್ಮಣಿ , ಸಹಚಾರಿಣಿ , ಸಖಿಯೇ ರಾಧೆ 

ಶ್ಯಾಮನ ಆಸರೆ,  ಪ್ರತಿಬಿಂಬವೇ ರಾಧೆ 
ಪ್ರೀತಿಯ ಅನನ್ಯ -ದಿವ್ಯ ಪ್ರತೀಕವೇ ರಾಧೆ 
-ಪ್ರಜ್ಞಮಾಲಾ 

Wednesday 22 November, 2017

ಯಾರಿಗೆ ಯಾರುಂಟು ಎರವಿನ ಸಂಸಾರ

ಯಾರಿಗೆ ಯಾರುಂಟು ಎರವಿನ ಸಂಸಾರ (ಒಂದು ಚಿಂತನ)



ನಾವು ಬಯಸಿದಂತೆ ಸಮಾಜ ಇರಬೇಕೆ ? ನಾವು ನಿಶ್ಚಯಿಸಿದ್ದೇ ಆಗಬೇಕೆಂದರೆ ಹೇಗೆ ? 
ನಾವು ಬಯಸಿದಂತೆ ಎಲ್ಲರೂ ಇರಹೊರಟರೆ , ನಮ್ಮ ನಿರ್ಧಾರಗಳಿಗೆ ಎಲ್ಲರು ತಲೆದೂಗ ಹೊರಟರೆ , ನಾವು ದೇವರೇ ಆಗಿಬಿಡುವೆವು ಅಲ್ಲವೆ ?
ಇವರು ಹಾಗೆ ಮಾಡಬೇಕಿತ್ತು , ಅವರು ಇದನ್ನು ಹೇಳಬೇಕಿತ್ತು ಎಂದು ನಮ್ಮ ಮನಸ್ಸು ಬಯಸುವುದಾದರೂ ಏಕೆ ? 
ನಾವು ಬಯಸಿದಂತೆ ಎಲ್ಲವೂ ಆಗಿ ಈಗಿರುವ ಸ್ಥಿತಿಗಿಂತಲೂ ಹದಗೆಟ್ಟ ಸ್ಥಿತಿಯಲ್ಲಿ ನಾವು ಸಿಲುಕಿಬಿಟ್ಟರೇ  ...  ಯಾರು ಬಲ್ಲರು ? 

" ಅವಶ್ಯಕತೆ ಇದ್ದಲ್ಲಿ ಅವಶ್ಯವಾಗಿ ಇರಬೇಕಾದವರನ್ನು ಭಗವಂತ ಕರುಣಿಸುತ್ತಾನೆ "

ಇತರರು ಮಾಡುವ ಕಾರ್ಯಗಳಾಗಲಿ , ಪೇಳುವ ನುಡಿಗಳಾಗಲಿ ಅವರವರ ವ್ಯಕ್ತಿತ್ವಕ್ಕೆ ಬಿಟ್ಟದ್ದು . ಇವರು ನನ್ನ ಜೊತೆ ಸರಿಯಾಗಿ ವರ್ತಿಸಲಿಲ್ಲ, ಪ್ರೀತಿಯಿಂದ ನುಡಿಯಲಿಲ್ಲ , ಅವರು ನನ್ನನ್ನು  ಕೀಳಾಗಿ ಕಂಡು ಹೀಯಾಳಿಸಿ ಜರಿದರು ,  ಬೆನ್ನ ಹಿಂದೆ -ಮುಂದೆ ಏನೋ ಹೇಳಿದರು . . . 
ಇದೆಲ್ಲದರ ಚಿಂತೆ ನಮಗ್ಯಾಕೆ ? ನಾವು ಮಾಡಿದ ಕಾರ್ಯ- ಪೇಳ್ವ ನುಡಿ ನಮ್ಮನ್ನು ಬಿಂಬಿಸುತ್ತದೆ . ನಾವು ಇತರರ ಬಗ್ಗೆ ಏನು ಯೋಚಿಸಿದೆವು , ಏನು ಆಡಿದೆವು , ಅವರನ್ನು ನೋಯಿಸುವಂತ ಕಾರ್ಯವ ಮಾಡಿದೆವಾ ... ಇದೆಲ್ಲದರ ಚಿಂತನ -ಅವಲೋಕನ  ಮುಖ್ಯ ಹಾಗು ಅವಶ್ಯ . ಏಕೆಂದರೆ , "ನೆಮ್ಮದಿ" ಎಂಬುದು ನಾವು ಮಾಡುವ ಕಾರ್ಯ - ಯೋಚನಾಲಹರಿಯಲ್ಲಿಯೇ ಅಡಗಿದೆ. ನಮ್ಮ ವ್ಯಕ್ತಿತ್ವದಿಂದ ನಾವು ಸಂತುಷ್ಟರೇ , ನಮ್ಮನ್ನು ಸ್ವತಃ ನಾವೇ  ಒಪ್ಪಿಕೊಳ್ಳಲು  , ಪ್ರೀತಿಸಲು , ಗೌರವಿಸಲು ಸಾಧ್ಯವಾದರೆ ಬೇರೆಲ್ಲವೂ ನಮಗೆ  ಗೌಣವಾಗಿಬಿಡುತ್ತದೆ. 
ಕಷ್ಟಗಳು ಒಂದಾದ ಮೇಲೊಂದು ಮುಗ್ಗರಿಸಿ ಬಂದು ನಮ್ಮ ಜೀವನವನ್ನೇ ಅಲ್ಲೋಲಕಲ್ಲೋಲವಾಗಿಸಿದಾಗ ನಮಗೆ ಸಹಾಯ ಮಾಡಲು ಯಾರಿಲ್ಲ ಎಂದೇಕೆ ಮನಸ್ಸು ಸಣ್ಣ ಮಾಡಿಕೊಳ್ಳಬೇಕು ?  ಆಗುವುದೆಲ್ಲ ದೈವಚಿತ್ತ - ಆ ಸನ್ನಿವೇಶವನ್ನು ಒಬ್ಬಂಟಿಯಾಗಿ ಎದುರಿಸುವ ,ಜಯಿಸುವ ಸಾಮರ್ಥ್ಯ ನಮಗಿದೆ ಎಂದು ದೇವರೇ ನಮ್ಮ ಮೇಲೆ ವಿಶ್ವಾಸ ಇಟ್ಟಾಗ ನಮ್ಮ ಮೇಲೆ ನಮಗೇಕೆ ಅಪನಂಬಿಕೆ ?

ನಾವೆಲ್ಲರು  ಪರಿಸ್ಥಿತಿಯ ಕೈಗೊಂಬೆಗಳು.ಬದುಕು ಹಲವು ರೀತಿಯ ಸಂದರ್ಭಗಳ ಅಚ್ಚುಗಳನ್ನು  ನಮಗೆ ಕೊಡುತ್ತಾ ಪರೀಕ್ಷಿಸುತ್ತದೆ .   ಸನ್ನಿವೇಶಕ್ಕೆ ತಕ್ಕಂತೆ ನಾವು ಯೋಚಿಸುವ ಪರಿ, ನಾವು ಕೈಗೊಳ್ಳುವ ನಿರ್ಧಾರ , ಸಾಗುವ ದಾರಿ ನಿರಂತರ ಬದಲಾಗುತ್ತಾ ಹೋಗುತ್ತದೆ . ಖುಷಿಯಲ್ಲಿ ,  ದುಃಖದಲ್ಲಿ , ಆರೋಗ್ಯದಲ್ಲಿ  , ಅನಾರೋಗ್ಯದಲ್ಲಿ - ಪ್ರತಿ ಕ್ಷಣ ಸಂದರ್ಭಕ್ಕನುಸಾರವಾಗಿ ನಮ್ಮ ನಿರ್ಧಾರಗಳು  ರೂಪಾಂತರವಾಗುತ್ತಿರುತ್ತವೆ. ನಮ್ಮ ವಿವೇಕಕ್ಕೆ ಸರಿ ಹಾಗು ಯೋಗ್ಯ ವೆನಿಸಿದ್ದನ್ನು  ,ಕೆಲವೊಮ್ಮೆ ಎದೆಗುಂದದೆ ತಲೆ ಎತ್ತಿ , ಮಗದೊಮ್ಮೆ ಕುಗ್ಗದೆ ತಲೆ ಬಾಗಿ  ಮನಸ್ಸಿಗೆ  ತೃಪ್ತಿ ನೀಡುವಂತಹ ಉತ್ತಮ ನಿರ್ಧಾರ - ಕಾರ್ಯ ನಮ್ಮದಾಗಿರಬೇಕು. ತಪ್ಪು ಮಾಡಿ - ಅರಿವು ಮೂಡಿದಾಗ ಪಶ್ಚಾತಾಪದ  ಹಾದಿ ತುಳಿಯಬೇಕು . ಅನುಭಗಳಿಂದ  ಬುದ್ಧಿ ಕಲಿಯುತ್ತ ಮನವನ್ನು ಕದಡದಂತೆ ಜಾಗೃತವಹಿಸಬೇಕು .ಆಗಲೇ ನಮ್ಮ ಸಂಪೂರ್ಣ ವಿಕಸನ ಸಾಧ್ಯ .  
ಆದದ್ದೆಲ್ಲಾ  ಒಳಿತೇ ಆಯಿತು , ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು ಎಂದು ಸತ್ಯಪಥದಲ್ಲಿ ನಗುಮೊಗದಿಂದ ಬಾಳ್ವೆ  ನಡೆಸುವುದಷ್ಟೇ ನಮ್ಮ ಹೊಣೆ . 
ಹುಡುಗಾಟವಲ್ಲ ಜತನವು ಈ ಬಾಳು 
ಕರುಣೆಯ ಮರೆಯದಿರು , ಕರ್ತವ್ಯದಲಿ ದಿಟವಾಗಿರು . . .
 ಆದರ್ಶಗಳೇ ಹಳಿಯಾಗಲಿ , ಕನಸುಗಳೇ ಬೆಳಕಾಗಲಿ
ಕವಲೊಡೆಯದೇ ,ಹಳಿ ತಪ್ಪದೇ ಸತ್ಯದಲಿ ಸಾಗುತಿರು ನೀನು,
ಮುಟ್ಟುವೆ ನಿನ್ನ ಧ್ಯೇಯವ  
ಸಾರ್ಥಕವು ಆಗ ನಿನ್ನ ಬಾಳು 
-ಪ್ರಜ್ಞಮಾಲಾ

Monday 27 February, 2017

ನನ್ನ ಅಜ್ಜ


ನನ್ನ ಅಜ್ಜ 


ಬಹಳ ವರುಷಗಳ ಹಿಂದೆ , ಎಂದೋ ಬರೆದ ಈ ಕವನದ ಸಾಲುಗಳು . . .  ಇಂದು ಕೈಸೇರಿದಾಗ ಮನದ ಅಂಗಳದಲಿ ಖುಷಿಯ ಕುಸುಮ ಅರಳಿಸಿತು 



ಮಮತೆಯ ಮಡಿಲಲಿ ಆಡಿಸಿ ನನ್ನ 
ಪ್ರೀತಿಯ ತುತ್ತನು ಉಣಿಸಿದರು 
ಮಲಗಲು ಮಡಿಲನು, ನಡೆಯಲು ಕೈಯನ್ನು ,
ಒಲವಿನ ಗೂಡಲಿ  ಬೆಳೆಸಿದರು 
ಹಠವನು ಮಾಡಲು ಬುದ್ಧಿಯ ತಿಳಿಸಿ 
ಗಣಿತ- ಕನ್ನಡಗಳ ಕಲಿಸಿದರು

ಅಂಗಳದಲ್ಲಿನ ಆ ಜೂಟ್-ಆಟ , ಗದ್ದೆಯ ಬಯಲಿನ ಆ ಸುತ್ತಾಟ 
ಸಮುದ್ರ ದಡದಲಿನ  ಆ ಹುಚ್ಚಾಟ 
ಬಾಲ್ಯಕೆ ಸೊಗಸಿನ ಅನುಭಗಳ ತುಂಬಿದರು 

ಶಿಸ್ತಿನ ಗುರುವಾಗಿ , ಗದರುತಾ -ತಿದ್ದುತಾ 
ಗೆಲುವನು ಸಾಧಿಸೆ ಅಕ್ಕರೆಯಿಂದಲಿ 
ಒಲವಿನ ಅಪ್ಪುಗೆ ನೀಡಿದರು

ಯಾರಿವರು ? ಯಾರಿವರು ?
ಇವರೇ ನನ್ನಜ್ಜ ನೀಲಕಂಠ ಮಾಸ್ತರರು 
-ಪ್ರಜ್ಞಮಾಲಾ