Thursday 12 September, 2013

"ಅವನು "

"ಅವನು " 

ಕೇಳಿರುವೆ ಪ್ರಶ್ನೆಗಳ ಹಲವಾರು ನೀನು ,
ಉತ್ತರಿಸಲಾರೆ ... ಮೌನಿ ನಾನು . . . 

ಅರಿತಿರುವೆಯಾದರೆ ನೀ ಎನ್ನ , 
ಕಾಣಬಲ್ಲೆಯಾದರೆ ನನ್ನ ಮನವನ್ನ . . .
ಓದು ನನ್ನ ಕಂಗಳ ,
ಬಿಚ್ಚಿಡುವೆ ನನ್ನೊಲವ ಹಾಳೆಯ,
ಅರಿತುಕೋ ನನ್ನೆಲ್ಲಾ ಭಾವಗಳ . . . 

ಅವನು . . . 
ಮನವ  ಝಲ್ಲೆನಿಸುವವನು ,
ನನ್ನಂತರಾಳದಲಿ ಲೀನವಾದವನು ,
ಮೌನದಲೇ ಮನವ ಮೋಹಿಸಿದವನು ,
ಕನಸುಗಳ ಕಾಣಲು ಹುರಿದುಂಬಿಸಿದವನು ,
ಬೆಂಬಿಡದೇ ಕಾಯ್ವೆ ಎಂದು ಕೈ ಹಿಡಿದವನು ,
ಖುಷಿಯ ಇಮ್ಮಡಿಸಿ ,ದುಃಖದಲಿ ಪಾಲು ಕೇಳಿದವನು . . . 
ಗುಣಗಳಲಿ ಸಂಯಮಿ , ಮಾತು ಅತೀ ಕಮ್ಮಿ . . . 
ಕಣ್-ನೋಟದಲೇ ಹರುಷವ ಉಕ್ಕಿಸುವವನು . . . 
ನನ್ನ ಬಾಳ ನಂದನದಲಿ ಅವನೇ "ಶ್ರೀ-ರಾಮ" ನು . . . 
ಒಲವಲಿ ನನ್ನ ಆಸೆಗಳ  ಕಾಯ್ವ ಸಹೃದಯಿ ನೀನಿರಬಹುದು ,
 ಮನದ ಗಾಯಗಳಿಗೆ ನೀ ಮದ್ದಾಗುವೆಯಾದರೂ ,
ಮಾಸುವ ಗಾಯಗಳ ಕಲೆಯಲಿ ಬೆಸೆದಿರುವವನು ಅವನು
ಏಕಾಂಗಿ  ಈಗ ನಾನಾದರೂ ,
ಅವನ ನೆನಪುಗಳ ತೊರೆಯಲಾರೆನು ಎಂದೂ  ,
ಮರೆಯಲಾರೆ ಅವನನು . . . 
ತೆರೆಯಲಾರೆ ಮನದ ಕದವ ಇನ್ಯಾರಿಗೂ ನಾನು . . . 
ನೀ ಅವನಲ್ಲ , 
ಬೇಡುವೆ . . .ಕಲುಕಬೇಡ ಮತ್ತೆ ಈ  ಒಡೆದ ಹೃದಯವ  ,
ಕ್ಷಮಿಸು , ಇದುವೇ ನನ್ನ ಮನದಾಳದ ಕೋರಿಕೆಯು  . . .

 -ಪ್ರಜ್ಞಮಾಲಾ 

ಕಾದಿರುವೆ

 ಕಾದಿರುವೆ

ಕಾದಿಹೆನು ನಾ ನನ್ನ ಮೋಹನನಿಗೆ ,
ನನ್ನ ಪುರುಶೋತ್ತಮ. . . . ರಘುನಂದನನಿಗೆ. . . 

ಬೇಸರವಿಲ್ಲ ಈ ಕಾಯುವಿಕೆಯಲಿ . . . ಹೊಸ ದಿಂಗತದ ನಿರೀಕ್ಷೆಯಲಿ . . . 
ತುಂಬುವೆ ಕನಸುಗಳ , ಆಸೆಗಳ ಈ ವಿರಾಮದಲಿ 

ಕಂಗಳು  ಬಿಡಿಸುತಿವೆ ಮನದ ಪರದೆಯಲಿ ಅವನದೇ ಛಾಯೆಯನು,
ಕರ್ಣಗಳು ಹುಡುಕಿವೆ ಪ್ರತಿ ಸ್ವರದಲಿ ಆ ಕಂಚಿನ ಕಂಠದ ದನಿಯನು 
ಸಂಗಾತಿಯ ಬಿಸಿ-ಅಪ್ಪುಗೆಯಲಿ ,
ಆನಂದಿಸುವ ಆಸೆ . . . ಒಲವ ಅಮೃತಧಾರೆಯಲಿ

ಎದೆ-ತಾಳ ತಪ್ಪಿಸಿ ,
ಮನಕೆ ಸ್ಪಂದಿಸಿ . . . 
ಆಸೆಗಳಿಗೆ ನೀರೂರಿ . . . 
ನನ್ನಿರುವಿಕೆಯ ಗೌರವಿಸಿ . . . 
ದೂರವಿದ್ದರೂ ಸನಿಹತೆಯ  ,ಕೋಪವಿದ್ದರೂ ಒಲ್ಮೆಯ ಆಸರೆಯಾಗಬೇಕು
ಮೂಡಬೇಕು ಅಂತಹ  ಬೆಸುಗೆ . . . 

ನನ್ನ ಚಂಚಲತೆಗೆ ಅವನ  ಧೃಢ ಸಂಕಲ್ಪ    . . . 
ನನ್ನ ಅಸಹಾಯಕತೆಗೆ - ಶಕ್ತಿಯ ಅವನ ಹೊಂಬಣ್ಣ . . . 
ನನ್ನ ಮೊಗದಲಿ - ನಗುವಿನ ಅವನ ಬಿಂಬ . . .
ಕಣ್-ಪನಿಯಲಿ, ಮಿಡಿಯವ ಅವನ ಹೃದಯ . . . 
ಭಯದ ಕರಾಳತೆಯಲಿ - ರಕ್ಷೆಯ ಆ  ಬಂಧ . . . 
ಬಯಸಿರುವೆ ಇಂತಹ ಅನುಬಂಧ ...
 ಆಶಯವು  ಒಂದೇ , 
ನನ್ನ ಬಾಳ ಆಗಸದಲಿ 
ಹೊಂಗಿರಣವೂ ಅವನೇ . . .
ಬೆಳದಿಂಗಳೂ  ಅವನೇ . . . 
ನನ್ನೊಲುಮೆಯ ಕಾಯ್ದಿರಿಸಿರುವೆ ಅವನಿಗಾಗೇ . . . . 
ಬೇಸರವಿಲ್ಲ ಈ ಕಾಯುವಿಕೆಯಲಿ . . . 
ರಂಗೇರಿದೆ ಈ ಮನ ಅವನ ನಿರೀಕ್ಷೆಯಲಿ . . . 
-ಪ್ರಜ್ಞಮಾಲಾ

ಭೂತಾಯಿ



"ಭೂತಾಯಿ "


ಪ್ರಶಾಂತತೆಯ ಮಡಿಲು ಅವಳದು ,
ನೀರವತೆಯ ನಡುವೆ ಶಬ್ದ -ಸಿರಿಯು ಅವಳದು ,
ಜಗಕೆಲ್ಲಾ ನಿರಂತರ ಚೇತನ-ಶಕ್ತಿ,ವಿಶ್ವರೂಪ ಅವಳದು... 

ಗಡಿಬಿಡಿಯ ಈ ಕಪಟ ಸಂತೆಯಲಿ , 
ಕಾಂಚಾಣದ ಮಹಿಮೆ ಎಲ್ಲೆಡೆಯೂ ,ಎಲ್ಲರಲೂ ಬೇರೂರಿ ಕುಣಿಯುತಿಹುದು,
ದಾಹ ದುರಾಸೆಗಳ ಜಾಲದಲಿ ಹುಚ್ಚನಾಗಿಸಿಹುದು ಪ್ರತಿ ಮನುಜನನು,
 ಮೈಯೆಲ್ಲಾ ಮುತ್ತಿ,ಕಿತ್ತು-ಕಸಿದು-ಹಂಚಿ ತಿನ್ನುತ್ತಿದ್ದರೂ ,
ಮಾನವನ ಅಗಣಿತ ಅವಮಾನಗಳ ಹೊರೆಯಲಿ 
ಬೇಯುತಿಹಳು ಅವಳು. . . 



ಮಾನವನ ವಿಕೃತ -ವಿಕಟ ಆಟಗಳೆಲ್ಲವನು ,
ತನ್ನೆಲ್ಲಾ ಆಕ್ರಂದನವನು ಸಹಿಸುತ ಸ್ತಬ್ಧಳು ಅವಳು

ಉರುಳುತಿಹ ಗಾಲಿಗಳು , 
ಹೊಗೆಯುಗುಳುತಾ ಚೀರುತಿಹ ಯಂತ್ರಗಳು ,
ಕುಕ್ಕುವ ನೋಟಗಳು
ತನ್ನೊಡಲ ಬಗೆಯುತಿರೆ ,
ಭಾವರಹಿತ ನಗುವ ಕಂಗಳಲಿ ತುಂಬಿ, 
ದಣಿದು- ಬಳಲಿದರೂ , ತನ್ನೆಲ್ಲಾ ಸತ್ವವ ಹೀರಿ ರಾರಾಜಿಸಿದರೂ 
ಕ್ಷಮಿಸುತಿಹಳು ಪ್ರತಿ ಬಾರಿಯೂ . . .

ಸೆಟೆದು ನಿಂತರೆ ಆಕೆ ,
ಕೋಪದಲಿ ಕಂಪಿಸಿದರೆ ಒಮ್ಮೆ ,
ದಾಳ ಬೀಸಿದರೆ ಆಕೆ ,
ಧೂಳಿಪಟವು ಮಾನವನ ಆಟಗಳೆಲ್ಲವೂ . . . 

ಒಡಲ ಬಿಸಿಯಲಿ ತತ್ತರಿಸುವ ,
ದೈನ್ಯನೋಟದಲಿ ಬೇಡುವ ಸರದಿ ಮಾನವನದು ಆಗ ,
ಬರಡು ಮನಕೆ ಕುರುಡು ಭಾವಗಳು ಎಂತು ಆಸರೆಯಾಗಬಲ್ಲವು ,
ಎಸಗಿದ ಪಾಪ-ಕರ್ಮಗಳೆಲ್ಲವೂ ರಕ್ಷಿಸದು ಅಂದು . . . 


ಮುಕ್ತಳಾಗುವಳು ತಾಯಿ,
ನಿರ್ವಾಣ ಹಬ್ಬುವುದು ಎಲ್ಲೆಡೆಯೂ ,
ಚಿಗುರುವುದು ಹೊಸ ಚಿಗುರು , 
ಉದಯಿಸುವುದು ಹೊಸ ಪರ್ವವು . . . 

ದುರಾಲೋಚನೆಯ ನಡುವೆ ದೂರಾಲೋಚನೆಯ ಸಮಯವಿದು ,
ಸಂರಕ್ಷಣೆಯ ಹಾದಿಯ ಈಗ ತುಳಿಯದಿರೆ ,
ಅಂತ್ಯ-ರಾಗದ ಜೋಗುಳವ ಹಾಡುತಾ , ನಿಪಾತಕೆ ತಳ್ಳುವಳು 
ರಕ್ಷಕಿಯು , ಸಲಹಿ-ಪೋಷಿಸಿದ ಮಾತೆಯು,
ಚಂಡಿ -ಭಕ್ಷಕಿ ಆಗುವಳು ಆಗ . . . 
-ಪ್ರಜ್ಞಮಾಲಾ