Saturday 30 March, 2013

ಪ್ರೇಮ್ -ಕಹಾನಿ


ಪ್ರೇಮ್ -ಕಹಾನಿ

ಪ್ರೀತಿಯ ತಂತಿಯು ಮೀಟಿಹುದು ಮತ್ತೆ ಈಗ ,

ಒಲವ ಶ್ರುತಿಕೆ ಲಯ ಸೇರಿತು ಈಗ... 

ಮೌನದಲೇ ಹೂತ್ತಿದ್ದ  ಭಾವಗಳಿಗೆ ಸ್ವರವಾದೆ ನೀನು ,

"ಭೂತ"ವಾಗಿ ಕಾಡಿದ್ದ ನೆನಪುಗಳು ಸಮಾಧಿಯಾದವು 

ಕಿಚ್ಚೆಬ್ಬಿಸಿದ್ದ  ಬಿರುಗಾಳಿಯು ಶಾಂತವಾಯಿತು ನಿನ್ನ ಸಾಂಗತ್ಯದಿಂದ   ...
ಜಡ್ಡುಗಟ್ಟಿದ ಮನವು ಮಿಡಿಯುತಿದೆ ನಿನ್ನ ಸ್ಪರ್ಶ ಮಾತ್ರದಿಂದ,



ಕಡು-ಕಹಿಯ ನೀಗಿಸಿದೆ ನಿನ್ನ ಒಲವ ಪೀಯೂಷದಿಂದ
ಬಾಳ ನೀಲ-ನಭದಲಿ ಮಿನುಗುತಿಹುದು ಧ್ರುವ ತಾರೆ ನಿನ್ನಿಂದ,


ಬಾಡಿಹೋದ ಜೀವನದಿಯು ಸ್ಫುರಿಸಿಹುದು ಮತ್ತೆ ನಿನ್ನಿಂದ 
ಹನಿ-ಹನಿಯಾಗಿ ಮುದ ತರುತಿಹುದು ಒಲವ ವರುಷ ನಿನ್ನ ಆಗಮನದಿಂದ  ...


ಈ ಬೆಳದಿಂಗಳಲಿ... 

ನಿನ್ನ ಜೊತೆಯಲಿ , 

ತುಡಿಯುತಿಹುದು ನಿನಗಾಗೇ ,ಕಲ್ಲಾದ ಈ ಹೃದಯ ...
ಸಖನೇ ,
ನೀನೇ ಆದಿ , ನೀನೇ ಅಂತ್ಯ ,ನೀನೇ ಉಸಿರು
 ನನ್ನ ಪ್ರೇಮ್ -ಕಹಾನಿಗೆ ಸದಾ ...


-ಪ್ರಜ್ಞಮಾಲಾ 

ಪರಮ - ದೈವ

ಪರಮ - ದೈವ

ಮಮತೆಯ ಸುರಿಮಳೆಯಲಿ ಬೆಳೆಸಿದಿರಿ ನನ್ನ ,
ನಿಮ್ಮ ಒಲುಮೆಯ ಕಣ್ಣಾಗಿ ಸಲಹಿರುವಿರಿ  ನನ್ನ 

ವರ್ಣಿಸಲಿ ಹೇಗೆ ನಿಮ್ಮೀ ಮಮಕಾರವನ್ನು ....  

ಕೇಳಿದ, ಇಚ್ಛಿಸಿದ ಎಲ್ಲವನೂ ಕ್ಷಣದಲ್ಲೇ ಮುಂದಿಟ್ಟವರು ನೀವು ... 
ಕಲಿಕೆಗೆ ಗುರುವಾಗಿ  ,ಆಸೆಗಳಿಗೆ  ನೆರಳಾಗಿ , 
ಕನಸುಗಳ ಪೋಷಿಸಿದವರು  ನೀವು...
ಪರಿಶ್ರಮದ ಚಿಗುರ ಮನದಲಿ ಬಿತ್ತಿ ,
ಆಸೆಗಳ ಬೆನ್ನೇರುವ ಹಾದಿ ತೋರಿದವರು ನೀವು ... 

ತಪ್ಪಿದಾಗ  ಕಿವಿಹಿಂಡಿ,ಸಿಟ್ಟಿನಲಿ ಗುಡುಗುವ ಸಿಡಿಲು ನೀವು  ,
ಮರುಕ್ಷಣವೇ ,ಕ್ಷಮಿಸಿ ...
ನಲ್ಮೆಯಲೇ ಕಿವಿಮಾತ ತಿಳಿಹೇಳುವ ಅಕ್ಕರೆಯು ನೀವು

ಕಗ್ಗತ್ತಲೆಯು ಮುತ್ತಿದಾಗ  ,
ನಿರಾಶೆಯು ಕುಗ್ಗಿಸಿದಾಗ ,
ಕೈ-ಹಿಡಿದು ಮುನ್ನುಗಿಸುವ ಬೆಳಕು ನೀವು  ,
ಸೋಲಿನಲಿ ಕಮರದೇ ,ಗೆಲುವಿನಲಿ ಸೊಕ್ಕದೇ ,
ಪ್ರಜ್ಞೆಯ ಮನದಲಿ ಬೇರೂರಿಸಿದವರು ನೀವು...
ಅಸಂಭವಗಳಲಿ ಸೆಟೆದೇಳಿಸುವ ಮಿಂಚು - ನನ್ನ ಶಕ್ತಿ ನೀವು...


ನಿಮ್ಮ ಆದರ್ಶಗಳ ನನ್ನಲಿ ಅಂಕುರಿಸಿ , 
ನನ್ನ ಸ್ವಂತಿಕೆ , ಅಭಿವ್ಯಕ್ತಿ ಗೆ ನೀರೂರಿದಿರಿ ನೀವು,
ನನ್ನ ಖುಶಿಗಳಲಿ ಸಡಗರಿಸುವ ,ಕಂಬನಿಗೆ ಮಿಡಿಯುವ ... 
ಭಾವಜೀವಿಗಳು , ನಿಮ್ಮ  ಜೇವಕಳೆಯು ನಾನು ...

 ನಿಮ್ಮ  ಜೀವಾಳ ,ಮುದ್ದಿನ ಕಂದಮ್ಮಳು   ನಾನೇ  ...
 ನಿಮ್ಮ ಸಹನೆಯ ತಲ್ಲಣಿಸುವ ರಕ್ಕಸಿಯೂ  ನಾನೇ,
ಕೆರಳಿಸಿ, ನೋಯಿಸುವ  ಜಗಳಗಂಟಿಯೂ ನಾನೇ ,
ನಿಮ್ಮ ಮನವ ಅರಳಿಸುವ ನಿತ್ಯ -"ಕುಸುಮ"ವೂ ನಾನೇ  ....  
  
ಪೋಷಕರು ,ರಕ್ಷಕರು, ಗೆಳೆಯರು...
ನಿಮ್ಮ ರೂಪಗಳು ಹಲವು ...
ಪದಗಳಲಿ ಬಣ್ಣಿಸಲಾರೆ ,
Darling ಅಪ್ಪಾ - ಅಮ್ಮಾ  ...
ನೀವಿಬ್ಬರೂ "ಪನ್ಯ"ಳಿಗೆ  ಅಚ್ಚು-ಮೆಚ್ಚು

ನಿಮ್ಮೀ ಪ್ರೀತಿಯ ಕಾಯ್ವೆ, ನಂಬಿಕೆಯ ಕಾಯ್ವೆ ,
ಈ ಬಾಂಧವ್ಯವ ಸದಾ ಕಾಯ್ವೆನು  ನಾನು ...

ನಿಮ್ಮ ಒಲುಮೆಯೇ ಸದಾ ನನಗೆ  ಶ್ರೀ-ರಕ್ಷೆ...
ನನ್ನ ಪರಮ -ದೈವವು  ನೀವೇ...


- ಪ್ರಜ್ಞಮಾಲಾ

Sunday 17 March, 2013

ಆಶಯ : ಕೆಲವೊಮ್ಮೆ ಸಣ್ಣ-ಪುಟ್ಟ ವಿಷಯಗಳೇ ನಮ್ಮನ್ನು ಗುಂಪಿನಲ್ಲಿ ವಿಭಿನ್ನವಾಗಿಸುತ್ತದೆ ... ಅಂತಹ ಅನುಭವ ತಂದುಕೊಟ್ಟ "LUCKY " ಕವನ ಇದು


ನರಳುತಿಹುದು ಮನ ಕ್ಷಣ-ಕ್ಷಣವೂ ಇಂದು ,
ಹಿಡಿದಿಡಲಿ ಹೇಗೆ ಈ ಕುತೂಹಲವ ಇನ್ನು ?...
ಅಂಜಿಕೆಯ ಬುತ್ತಿಯ ಬೊಗಸೆಯಲಿ ಹಿಡಿದು ,
ವಿಶ್ವಾಸದ ಮುಗುಳ್ನಗೆ ಮೂಡುವುದು ಹೇಗೆ ಇನ್ನು ?...

ಅನುಭವಗಳ ಪುಳಕ  ಮನವ ಹಿಗ್ಗಿಸುತಿರೆ,

"ನ"-ಕಾರದ ಛಾಯೆ ಹಿಂಡಲು ಸಜ್ಜಾದಂತಿದೆ
ಮನವ ಇನ್ನೊಂದೆಡೆ  ...

'ಸೋಲ'ನೇ ಸೋಲಿಸುವ ಛಲ ಮನಕೆ ಸಾಂತ್ವನವ ನೀಡುತಿರೆ,

ಬೆನ್ನೇರಲು ಕಾದಂತಿದೆ ನಿರಾಸೆಯ ರಚ್ಚೆ
ಮಗದೊಂದೆಡೆ ...

"ಸುದೈವ"ವೇ ಬಾ ಅಪ್ಪಿಬಿಡು ನನ್ನ ,

ಈ ಭಾವ-ತುಮುಲದಿಂದ ಬಿಡಿಸು ಒಮ್ಮೆ ,

ನಿರ್ಭಾವುಕ ಅಲೆಗಳೇ ತೇಲಿಬಿಡಿ ನನ್ನ ,

ಕರ್ಣಗಳಲಿ ಗುನುಗಿಸಿ ಹಿತವಾದ ರಾಗವೊಂದ ಹಾಗೆ ಸುಮ್ಮನೆ ...

ಸಾಕೆನಿಸಿದೆ ಈ ಜಂಜಾಟ-ಈ ವೇದನೆ ... 

 
ಬಯಸುತಿದೆ ಮನವು ಎಡಬಿಡದೇ ,
ಸಿಹಿ ತರಲಿ ಈಗ ಬರುವ ಸುದ್ದಿ ,
ತುಂಬಲಿ ಕಂಗಳಲಿ ಅನನ್ಯ ಕಾಂತಿ...
 ಚಿಗುರಲಿ "ಆತ್ಮವಿಶ್ವಾಸ"ದ ಸಂಜೀವಿನಿ ...
ನೆರವೇರಲಿ ಮನದ "ಆಶಯ" ಇಂದೇ ... 
ನೆರವೇರಲಿ ಮನದ "ಆಶಯ" ಇಂದೇ ...


-ಪ್ರಜ್ಞಮಾಲಾ