Sunday 21 April, 2013

"ನೆನಪು "


"ನೆನಪು "


ತುಂತಿರಿನ ಈ ಮಳೆಯಲಿ ,
ಇಂದೇಕೋ ನಿನ್ನ ನೆನಪು ಕಾಡುತಿದೆ . . .
ಬೀಸುತಿರುವ ಗಾಳಿಯೂ,
ನಿನ್ನ ದನಿಯ ಪಿಸುಗುಡುತಿದೆ

ಕಣ್ಣ ಪರದೆಯಲಿ ನಿನ್ನ  ಚಿತ್ರವೇ ಮೂಡಿ,
ಮಾಸಿದ ಗಾಯಗಳೆಲ್ಲಾ ಮತ್ತೆ ಹಸಿಯಾಗಿ,
ಮನದ ಬೇಗೆಯ ಹೆಚ್ಚಿಸಿದೆ ...

ಇಂದೇಕೋ ನಿನ್ನ ನೆನಪು ಕಾಡುತಿದೆ . . .


ಆ ಬಿಸಿಯುಸಿರು ,ಮೃದು ಸ್ಪರ್ಶ ,
ನಗುವಿನ ಆ ಸದ್ದು , ಕಂಗಳ ಸುಳಿಮಿಂಚು . . .
ಕಿತ್ತೊಗೆದ ನೆನಪುಗಳೆಲ್ಲಾ . . .
ಮತ್ತೆ ಮತ್ತೆ ಮನವ ಮುತ್ತಿದೆ . . . 


ಅಂದೆಂದೋ ಕಳೆದಳಿದ
ಸಿಹಿ-ಕಹಿ ನೆನಪುಗಳು ,
ಅಗಣಿತ ಭಾವಗಳು ,

ಬಾಳ ಪಯಣದಲರಳಿ ಬಾಡಿದ ಪ್ರಣಯಗೀತೆಯು ,
ಕೊಚ್ಚಿಹೋದ ಪ್ರೇಮನೌಕೆಯು
ಮನದ ದಡಕೆ ಮತ್ತೆ ಬಡಿದಪ್ಪಳಿಸಿದೆ

ತಂಪೆರೆಯುವ ಈ ಮಳೆಯಲಿ , ಚಿಗುರಬೇಕಾದ ಮನಸು . .
"ಧೋ" ಎಂದು ಅಳುತಲಿದೆ , ನಿನ್ನ ನೆನಪಲಿ ನರಳುತಿದೆ . . .
 ತುಂತಿರಿನ ಈ ಮಳೆಯಲಿ ,ಇಂದೇಕೋ ನಿನ್ನ ನೆನಪು ಕಾಡುತಿದೆ . . .
ಬಹುವಾಗಿ ಕಾಡುತಿದೆ 

-ಪ್ರಜ್ಞಮಾಲಾ