Monday 23 December, 2013

ಸಾವಿರ ಸಂವತ್ಸರ : "A Thousand Years" ಕವನದ ಅನುವಾದ - ನನ್ನ ಪ್ರಯತ್ನ

ಸಾವಿರ ಸಂವತ್ಸರ 

ಕನಸುಗಳು . . . ವರ್ಣಗಳು ಈಗ   
ಕಂಗಳಲಿ   ಚಿತ್ತಾರ ಬಿಡಿಸುತಿವೆ  . . . 

ಎದೆಯ ಬಡಿತ ಕರ್ಣಗಳ ತುಂಬುತಿದೆ . . . 

ನನ್ನೆಲ್ಲಾ  ಭಯವ  . . . . ಮನದ ಆತಂಕವ . . . .
ಮೀರಬಹುದೇ  ಈ ಪ್ರೀತಿಯ ಅನುಭಾವ ? 
  

ಕಂಡ ಕ್ಷಣ ನಿನ್ನ ಬಿಂಬ  
ಸೂಸಿದೆ ನೀನು ಕಂಗಳಲೇ ಒಲವ . . . 
ಅಳಿಯಿತು ನನ್ನೆಲ್ಲಾ ಸಂದೇಹ. . . 
ಮೀಟಿತು   ಅನುರಾಗದ   ಸ್ವರ   . . .

ಹೆಜ್ಜೆಯೊಂದ ಇಟ್ಟೆ  ನಿನ್ನೆಡೆಗೆ  ನಾ 

ಕಳೆದಂತಿದೆ  ಸಾವಿರ ಸಂವತ್ಸರ
ನನ್ನ ಜೀವ ,  ನನ್ನ ಸಿರಿಯು   ನೀನು   ,
ಕಾದಿದ್ದೆ ನಾ  ನಿನಗಾಗೇ ಅನುಕ್ಷಣವೂ ಚಿನ್ನ. . .  
ಅಂದು -ಇಂದು . . . ಎಂದೆಂದೂ ಪ್ರೀತಿಸುವೆ ನಿನ್ನ 

 ಹೆಜ್ಜೆಯೊಂದ ಇಟ್ಟೆ  ನಿನ್ನೆಡೆಗೆ  ನಾ. . .  


ಸಿಕ್ಕಾಗ  ನಿನ್ನ ಸಾಂಗತ್ಯ ,
ಸ್ತಬ್ಧವಾಯಿತು  ಕಾಲಚಕ್ರ . . . 

ನೆನ್ನೆಗಳ ಭಯವಿಲ್ಲ , 
ನಾಳೆಗಳ ಚಿಂತೆಯೂ ಇಲ್ಲ  

ನಿನಗಾಗೇ ಈ  ಪಣವು ,
ನಿನ್ನುಸಿರಲಿ ಒಂದಾಗಿ ,
ಕಳೆಯುವೆ ಪ್ರತಿ-ಕ್ಷಣವೂ . . . 
ಅಂದು -ಇಂದು . . . ಎಂದೆಂದೂ ಪ್ರೀತಿಸುವೆ ನಿನ್ನ 


 ಚೈತ್ರದ ಚಿಗುರು ನೀನು ,
ಶ್ರಾವಣದ ಸೊಬಗು ನೀನು ,
ನನ್ನ ಒಲವ ವೃಂದಾವನದಲಿ 
ಮನಮೋಹನನು  ನೀನು . . .  


ಬಚ್ಚಿಡುವೆ ನಮ್ಮೀ ಒಲವ ,
ವಿಶ್ವಾಸದ ಗೂಡಲಿ ನಾ   . . . 
ರಾಮನು  ನೀನಾದರೆ ,
 ಭಕ್ತಿಯಲಿ ಕಾಯ್ದ ಶಬರಿಯು  ನಾ. . .

ಕಳೆದಂತಿದೆ  ಸಾವಿರ ಸಂವತ್ಸರ . . . 
ಕಾಯ್ವಿಕೆಯ ವಿರಹವ   ಮರೆಸಿದೆ ನಿನ್ನ ಆಗಮನ
ಕಾದಿದ್ದೆ ನಾ  ನಿನಗಾಗೇ ಅನುಕ್ಷಣವೂ ಚಿನ್ನ. . .  
ಅಂದು -ಇಂದು . . . ಎಂದೆಂದೂ ಪ್ರೀತಿಸುವೆ ನಿನ್ನ


-ಪ್ರಜ್ಞಮಾಲಾ

Saturday 7 December, 2013

" ತಪ್ಪು-ಒಪ್ಪು " - ಸರಿಯಾದ ತಪ್ಪು ಇಲ್ಲ ನಿಜ , ಆದರೆ ನಮಗೆ ತಪ್ಪು ಎನಿಸಿದ್ದು ಬೇರೆಯವರಿಗೆ ಸರಿ ಇರಬಹುದು , ನಮಗೆ ಅಕಾರ್ಯ ಅನಿಸಿದ್ದು ಇನ್ನೊಬರಿಗೆ ಸುಕಾರ್ಯವಾಗಬಹುದು . . . "ನೋಡಲು ಕಣ್ಣು ಗಳಿದ್ದರೂ , ಪರಾಮರ್ಶೆ ಮಾಡುವ ವಿವೇಕ ಇದ್ದಂತೆ "

ತಪ್ಪು- ಒಪ್ಪು



ತಪ್ಪು-ಒಪ್ಪುಗಳ ಈ ಬಯಲ- ಸಂತೆಯಲಿ  ,
ಚುಕ್ಕೆಗಳ ಅಳಿಸಲಾಗದು  ,
ಮರೆಸಲೂ ಆಗದು . . .

ಕೂಡಿ -ಕಳೆಯುವ ಕಾಲನ ಈ ಆಟದಲಿ -

ತಪ್ಪುಗಳೂ  ಒಮ್ಮೊಮ್ಮೆ ಸರಿಯಾಗಬಹುದು ,
ಸರಿಗಳೆಷ್ಟೋ ತಪ್ಪಾಗಬಹುದು ,

ನಂಬಿಕೆಗಳು ಹುಸಿಯಾಗಬಹುದು  ,
ಅವಿವೇಕತೆಯೇ ವರವಾಗಬಹುದು

ಹಾವುಗಳೇ ಏಣಿಗಳಾಗಿ , ಏಣಿಗಳು ವಿಷ ಕಾರಬಹುದು  . . .
ಸಾಗಿ ಬಂದ ಹಾದಿ ಮುನಿದು ,
ಬಾಳ ಹಳಿಯೇ ಕಣ್ಮರೆಯಾಗಬಹುದು


ವಿಸ್ಮಯ ತಿರುವುಗಳ ರೋಚಕ ಅನುಭವ ಈ ಬದುಕು . . .
ತೆರೆದಿಡಲು ಕೆದಕಿದಷ್ಟೂ ,
ಮುಚ್ಚಿಡಲು ಸೆಣೆಸಾಡಿದಷ್ಟೂ  ,

ಬೀಳುವೆವು ನಾವಗೆದ  ಹಳ್ಳಕೆ ನಾವು . . . .

ಪ್ರತಿಯೊಬ್ಬರದು ಇದೇ ಗೋಳು . . .

-ಪ್ರಜ್ಞಮಾಲಾ

ಎಂದು ಬರುವೆಯೋ ನೀನು ? . . .


ಎಂದು ಬರುವೆಯೋ ನೀನು ? . . . 


ಮುಂಜಾವಿನ ಇಬ್ಬನಿಯಲಿ ,
ನೇಸರನ ಆ ಮೊದಲ ಕಿರಣದಲಿ ,
ನಿನ್ನ ನೆನಪು  ಮನವ ಅಪ್ಪುವುದು . . . 

ತಣ್ಣನೆಯ ಗಾಳಿಯಲಿ ,
ಮಳೆಯ ಆ ಮೊದಲ ಹನಿಯಲಿ ,
ನಿನ್ನ ಸಿಹಿ-ನಗು ನಿನಾದಿಸುವುದು . . . 

ಸುಡು -ಬಿಸಿಲಿನ  ಬೇಗೆಯಲಿ ,
ದಾಹವ ತಣಿಸುವ  ಆ  ನೆರಳಲಿ ,
ನಿನ್ನ ಆರೈಕೆಯ ಸೆಳೆತ ಕಾಡುವುದು . . . 
ಏಕಾಂತದ ಶೀತಲ ಈ ಅಪ್ಪುಗೆಯಲಿ ,
ನನಸಾಗಲು ಕಾಯುತಿರುವ 
ಅಗಣಿತ, ಅನನ್ಯ  ಕನಸುಗಳಲಿ . . . 
ನಿನ್ನ ಬರುವಿಕೆಯ ನಿರೀಕ್ಷೆ  ,
ಮನಕೆ ಜೋಗುಳ ಹಾಡುತಿಹುದು . . . 

ಎಂದು ಬರುವೆಯೋ ನೀನು . . . ,
ನನ್ನ ಶ್ರೇಯದಲಿ ಜೊತೆಯಾಗಿ,
ನಿನ್ನೇಳ್ಗೆಯಲಿ  ನನ್ನ ಪಾಲು ಸೇರಿಸಿ,
ಬಾಳ ಹಸನಾಗಿಸುವೆ ನೀನು . . .

ಕಾಯುತಾ ...ಕುಳಿತಿರುವೆ ನಾನು . . .   
   
 -ಪ್ರಜ್ಞಮಾಲಾ