ಮುಕ್ತ ...?
ಬಾಳ ನವ್ಯಶಕ್ತಿ ಸವಿದಷ್ಟು ತಣಿಯದು ಗೆಳೆಯಾ ...
ಸಹನೆಯ ಅಂಗಳದಲಿ
ತೃಪ್ತಿ-ಸಂಯಮಗಳ ಹೂಗಳರಳಿರಲು,
ಜ್ಞಾನ- ಆತ್ಮಾಭಿಮಾನಗಳ ಹಸಿರೆಲೆ ಚಿಗುರಿರಲು ,
ಪ್ರೀತಿ-ಮಮತೆಗಳ ಸಿಹಿ ಗಾಳಿ ಬೀಸುತಿರಲು
ಬಾಳು ಅದೆಷ್ಟು ಹಸನಲ್ಲೋ ಮನುಜಾ ...?
ಕಷ್ಟಗಳು -ಇಳಿತಗಳು "ಶಾಶ್ವತ"ವೆಂದು ಮರುಗುವೆ ಏಕೋ ಮರುಳಾ ...?
ಬದುಕಬೇಕು , ಬದುಕಿ ಬಾಳಬೇಕು ...
ಸೃಷ್ಟಿಯ ಮಾಯೆಗೆ ಕೈ ಮುಗಿದು, ಬೆಳಕು ಹರಡಬೇಕೋ ಗೆಳೆಯಾ ...
"ಇಷ್ಟಿರುವುದ" ಅಷ್ಟು ಮಾಡಿ,
ಇರುವೆಯ ಆನೆ ಮಾಡಿ ...
ವಾಸ್ತವಕೆ ಬೀಗ ಜಡಿದು ,
ಬಿಸಿಲ್ಗುದುರೆಯ ಬೆನ್ನೇರುವೆ ಏಕೋ ಮರುಳಾ ...?
ಕೆರಳಿ-ಉದ್ವೇಗದಲಿ ಅಧಃಪತನವಾಗುವೆ ಏಕೋ?
ತೆರೆಯ ಹಿಂದೆ ಸರಿದು , ಬಾಡಿ ಹೋಗುವೆ ಏಕೋ?
ನೀರೂರಿ ಪೋಷಿಸಿದವರ ನೋಯಿಸುವೆ ಏಕೋ ?
ನಿನ್ನವರನು ಅಶ್ರುಧಾರೆಯ ಕೂಪಕೆ ತಳ್ಳುವೆ ಏಕೋ?
ಭರವಸೆ-ಆಸೆಗಳ ಚೂರಾಗಿಸಿ,
ಹಾಲ್ - ಉಣಿಸಿದ ಮಡಿಲಿಗೆ ಮುಳ್ಳಾಗಿ ,
ತೊರೆದು ಹೋಗೆ...
"ಮುಕ್ತ"ನು ನೀನು ಅದ್ಹೇಗೋ ಗೆಳೆಯಾ ?...
"ಮುಕ್ತ"ನು ನೀನು ಅದ್ಹೇಗೋ ಗೆಳೆಯಾ ?...
ಬದುಕಬೇಕು , ಬದುಕಿ ಬಾಳಬೇಕು ...
ಬಾಳ ಕಹಿಯಲಿ ಬೆಂದು ,ಸಿಹಿಯ ಚೆಲುವ ಅಸ್ವಾದಿಸದೇ
"ಹೇಡಿ"ಯಾಗಿ ಜಗವ ತೊರೆದರೆ. . .
ಏನು ಚೆನ್ನ ಗೆಳೆಯಾ...?
ಏನು ಚೆನ್ನ ಗೆಳೆಯಾ...?
-ಪ್ರಜ್ಞಮಾಲಾ
0 comments:
Post a Comment