Friday 12 December, 2014

ನಂಬಿಕೆ

"ನಂಬಿಕೆ" 
- ಇದೊಂದು ಮಾಯಾಜಿಂಕೆ !
ಕೆಲವೊಮ್ಮೆ ಆಸರೆಯು ,
ಮಗದೊಮ್ಮೆ ನಿರಾಸೆಯ ಮಹಾಪೂರವು . . .

" ನಂಬಿಕೆ "- ಇದೊಂದು ನೇಗಿಲು !
ಹಿಂಜರಿಯೆ  ಹೊರೆಯು ,
ಬೆವರೆ  ಚಿನ್ನದ ಬೆಳೆ ಯು
 "ನಂಬಿಕೆ" - ಇದೊಂದು ಮಾಯೆಯು !
ಇಳೆಯ ಸಿಂಗರಿಸುವ ಮೋಡಗಳ ಸಾಲು -
ಇಳಿದು ಬಾರೆ ಮುಂಗಾರು ,
ಮುನಿದು ದೂರ ಸರಿಯೆ - ಬರಡಾಗಿಸುವ ಬರವು . . . 

"ನಂಬಿಕೆ" 
- ವಿಶ್ವಾಸದ ಪಲ್ಲಂಗವೂ ,
-ದ್ರೋಹದ ಮುಳ್ಳು 

"ನಂಬಿಕೆ" 
- ದೈವವೂ  , ಮಾರಿಯೂ. . . 

"ನಂಬಿಕೆ" 
-ಅನುಭವವೂ  , ಅನುಭೂತಿಯೂ  . . .

"ನಂಬಿಕೆ"
-ವಾಸ್ತವವೂ , ಭ್ರಮೆಯೂ . . .
-ಪ್ರಜ್ಞಮಾಲಾ

Tuesday 2 December, 2014

"ಕಂದಮ್ಮ"

"ಕಂದಮ್ಮ"

ನಿನ್ನ ಮೊಗವ ಕಂಡು ,
ಚಂದಿರನೇ ನಾಚಿಹನು 

ಮೋಡಗಳ ಮರೆಯಲಿ 
ಹುಣ್ಣಿಮೆಯ ನಿನ್ನಂದವ ನೋಡಲು ಇಣುಕುತಿಹನು

ಈ ಪೇಚಾಟವ ಕಂಡು ,
ಅರಳಿದೆ  ನಿನ್ನಲಿ  ತುಂಟ ನಗು 
ನಿನಗಂತೂ ಇದೆಲ್ಲವೂ ಒಂದು ವಿಸ್ಮಯ ಸೊಗಸು 


ಚಂದಿರನ ನಾಚಿಕೆಗೆ ,
ನೇಸರನ  ಉರಿ-ಮುನಿಸು . . . 

ಮೋಡಗಳೇ ಕಾಯಿರಿ ,
ಮುಗ್ಧತೆಯೇ ನನ್ನೀ ಕಂದಮ್ಮನ ದಿರಿಸು 

-ಪ್ರಜ್ಞಮಾಲಾ 

Saturday 1 November, 2014

"ನಿರೀಕ್ಷಿತ - ಆಕಸ್ಮಿಕ"



 "ನಿರೀಕ್ಷಿತ - ಆಕಸ್ಮಿಕ"

ತಂಗಾಳಿಯಂತೆ ಸುಳಿಯಲಿಲ್ಲ ನೀನು ,
ಮಿಂಚಿನಂತೆ ಮನವ ಸೆಳೆಯಲಿಲ್ಲ ನೀನು,

ಕಣ್ಣೆದುರಿಗೇ ಇದ್ದ  - - - ಅಪರಿಚಿತನು ನೀನು

ಮಾತಿನ ನಡುವಲಿ " ನಗಿಸುವ  ಮೌನವು " ನೀನು,
ನಗುವಾಗ ಸೂಸುವ   " ನೆನಪು " ನೀನು,

ನೆನಪಿನಲೇ ಗೀಚಿದ "ಕಲೆ"ಯು ನೀನು . . . 
ಮೌನದಲಿ ಇಣುಕುವ " ಕನಸು " ನೀನು ,
ಕನಸಿನಲಿ ಮೂಡುವ " ಬಯಕೆ "ಯು ನೀನು . . . 

ಸ್ವಚ್ಛಂಧ ಮನಕೆ " ಖುಷಿ "ಯ ಅಲೆಯು ನೀನು,
ದೂರ ಸರಿಸಲೂ- ಸರಿಯಲೂ  ಆಗದ,
"ಇಷ್ಟ"- - -  ಸಿಹಿ-ಕಷ್ಟ ನೀನು . . .

ನಿರೀಕ್ಷಿಸಿದ ---"ಅನಿರೀಕ್ಷಿತ - ಆಕಸ್ಮಿಕ"ವೇ   ನೀನು . . .

-ಪ್ರಜ್ಞಮಾಲಾ

Saturday 30 August, 2014

ನೀನ್ಯಾರೋ

ನೀನ್ಯಾರೋ
ಮನವು ಜಾರಿತು ಮೌನವಾಗಿ,
ನಿನ್ನ ನಗುವ - ಮೋಡಿ ನೋಡಿ 

ಮಾತು ಕರಗಿ, ಮೌನಳಾದೆ ,
ನಿನ್ನ ಕಂಚಿನ ದನಿಯ ಕೇಳಿ  

ನಿನ್ನ ನೋಟದ ಮತ್ತು ಏರಿ ,
ವಿಧಿಯೇ ಇಲ್ಲದಂತೆಯಾಗಿ ...
ಹೆಜ್ಜೆ ಗುರುತ ದಿಟ್ಟಿಸುತಲಿರುವೆ   ,
ಕಾಯುತಿರುವೆ ನಿನ್ನದೇ  ದಾರಿ  . . .
ಬಿಡಿಸಿದಷ್ಟೂ ಒಗಟು ನೀನು ,
ವಿಸ್ಮಯಗಳ ಸುಳಿ-ಮಿಂಚು  ನೀನು ,

ಮರೀಚಿಕೆಯೋ , ಧ್ರುವ ತಾರೆಯೋ  . . .
ಏನೆಂದು ತಿಳಿಯಲಿ ನಿನ್ನ ನಾನು !!! 

ಪೀಡಿಸುತಿರುವೆ ಯಾಕೋ ಹೀಗೆ ... ?

ಹುಚ್ಚು ಹಿಡಿಸಿ ಮಾಯವಾದ,
ಸ್ವಪ್ನ-ನಗರಿಯಲ್ಲೇ ವಿಹರಿಸುವ 
ನೀಲಿ ಕಂಗಳ ,
ಆ ನನ್ನ ನಲ್ಲ ನೀನಲ್ಲವೇನು ?

Tuesday 12 August, 2014

ಕ್ಷಮೆ

ಕ್ಷಮೆ

 ಎಲ್ಲರಲೂ ಇಹುದು ಈ ಸುಪ್ತ ಕೋಣೆ. . . 

ಮನದ ಮೂಲೆಯಲ್ಲೊಂದು ಕತ್ತಲೆಯ ಕೋಣೆ,
ಏನೆಲ್ಲಾ ಅಡಗಿದೆಯೋ ನಾನಂತೂ ಕಾಣೆ . . .

ಕದವ ತೆರೆದೆ ನೀನು ,ಕುತೂಹಲದಿ ಇಣುಕಿದೆ  ನಾನು ... 
ಕಂಡೆ ಸುಂದರ ಸ್ವಪ್ನಗಳ ಬೃಂದಾವನ ,
ಸಾಧಿಸುವ ಸ್ಥೈರ್ಯ --ಅದೆಂತಹಾ ಕೆಂಪು ಕಿರಣ ,
 
ರಾಗ ,ದ್ವೇಷ ,ಮೋಹ ,ಪಾಶ ---ಕಳಚಿ ಎಲ್ಲ ಕೃತಕ ವೇಷ ,
ತೋರಿದೆ ನಿನ್ನ ಕೋಮಲ ನಿಜ ಸ್ವರೂಪ 

ಆ ಹಳೆಯ ನೆನಪುಗಳ ಮಂಥನ...
ಕಂಡೆ ಎಳೆಯ  ಕಂದಮ್ಮನ ಆಕ್ರಂದನ . . .


ಕುತೂಹಲ ಹೆಚ್ಚಿತು ನನಗೆ,
ಬಿರಿಯಿತು  ಸಂಯಮ-ಜ್ಞಾನದ ಪರದೆ. . . 
"ಇಷ್ಟಿರುವುದ " ಅಷ್ಟು ಮಾಡಿ . . . 
ಇರುವೆಯನ್ನೂ "ಆನೆ " ಮಾಡಿ . . .
ಮೀಟಿದೆ ನಾ ನಿನ್ನಲಿ "ಅಪಸ್ವರ"ದ ವೀಣೆ 

ಕ್ಷಣಗಳಲ್ಲೇ ಬದಲಾಯಿತು ಆ  ಸುಂದರ ಸಲ್ಲಾಪ ,
ಮಿಂಚಂತೆ ಸುಳಿಯಿತು ನಿನ್ನಲಿ ನೋವಿನ ಸೆಲೆ . . . 

ಆಡಿ ಹೋದ ಮಾತುಗಳು  ಹಿಂದಿರುಗಲಾರದು ,
ನಿನ್ನ ನೋವಿಗೆ ನನ್ನ ಮನವಿ ಮದ್ದಾಗಲಾರದು . . . 

ಆದರೂ  ಬೇಡುತಿರುವೆ ನಾ ನಿನ್ನಲಿ ಕ್ಷಮೆ ,
ದಯಮಾಡಿ ಮನ್ನಿಸು.... 
ಕರುಣಿಸು ಮತ್ತದೇ 
ಸ್ನೇಹ-ವಿಶ್ವಾಸದ ಸುಂದರ ಬೆಸುಗೆ . . . 
-ಪ್ರಜ್ಞಮಾಲಾ


  



Sunday 30 March, 2014

ತಮಿಳಿನ ಪ್ರಸಿದ್ಧ ಕವಿ " ವಾಲೀ " ಯವರ "ನಾನ್ ಏನ್ " ಕವಿತೆಯಿಂದ ಸ್ಫೂರ್ತಿಯಾದುದು . . . ಅಂತಹ ಅದ್ಭುತ ಕವಿತೆಯನ್ನು ಕೇಳಿಸಿ , ಅರ್ಥ ತಿಳಿಸಿದ ರಮೇಶ್ ಸರ್ ಗೆ ನನ್ನ ಮನದಾಳದ ವಂದನೆಗಳು . . .



ಇಹುದು ಅಲ್ಲೊಂದು ಸುಂದರ ನಾಡು ,
ಪ್ರೀತಿ ,ಮುಗ್ಧತೆಯ ಬೀಡು . . . 

ಕಣ್ತಣಿಸುವ ಹಸಿರ ಸಾಲು ,
ಹರಿವ ನದಿಯ ಇಂಪಾದ ಹಾಡು,
ಆ ತಂಪು ಗಾಳಿ ,   
ಕುಣಿದು -ನಲಿಯುತಿಹ  ವನ್ಯ ಜೀವಿ  . . . 

ಇಹುದು ದೂರ -ಬಹು ದೂರದಲ್ಲೊಂದು ಸುಖದ ಬೀಡು,
ಕಲ್ಮಶಗಳೇ ಅರಿಯದ   ಸ್ವಚ್ಛಂದ ನಾಡು . . .

ಅಳದಿರು ನನ ಕಂದಾ . . . 
ಮಲಗೋ ನನ ರನ್ನ . . .
ಇಹುದು ದೂರದಲ್ಲೊಂದು ವಿಸ್ಮಯಗಳ  ನಾಡು . . .

ಕಾರಣವ ಅರಿಯದ ಹುಟ್ಟು ನಮದು,
ಏಕೆ , ಏನೆಂದು ಗುರಿ ಇಲ್ಲದೇ ಸಾಗುತಿಹೆವು ನಾವು . . . 

ಹುಟ್ಟಿದ ಮಗುವಿನಲಿ  ದೋಷವೆಲ್ಲುಂಟು . . . ? 
ಹಸುಗೂಸು, ನಿನ್ನ ತೆಗಳಿದರೆ ಏನು ಬಂತು . . . 

ಬೆಳೆದ ಬಿದಿರ ರಂಧ್ರಗಳೇ ,ಅದರ ಗಾನದ  ಮೂಲ,
ಬೆಳೆಯುತಾ ಕಲಿತ ಪಾಠಗಳೇ ನಿನ್ನ ಬಾಳಿನ  ಮೂಲ . . .

ಕರಿಮೋಡಗಳೇ  ಆಸರೆ ವಸುಧೆಯ ಜೀವಕೆ,
ಬರಡು ಮರವೇ ನಾಂದಿ ನವ ಋತುಮಾನಕೆ . . . 

ಅಳದಿರು ನನ ಕಂದಾ  . . . 
ಮಲಗೋ ನನ ರನ್ನ . . .
ಇಹುದು  ಅಲ್ಲೊಂದು   ಸುಂದರ ನಾಡು ,
ನೆಮ್ಮದಿಯ ಬೀಡು . . .


ಹುಟ್ಟು - ಸಾವಿನ ನಡುವಲ್ಲಿ ಇಹುದು ಸಣ್ಣ ವಿರಾಮ,
ಆ  ವಿರಾಮದಲ್ಲೇ  ಅಡಗಿಹುದು ಈ ಜೀವನ . . . 
ಕಾರಣಗಳ ಒಗಟನ್ನು ಬಿಡಿಸೆ ,
 ಅನುಭವಿಸುವೆ ನೀ ಸಾರ್ಥಕತೆಯನ್ನ ,
ಇದರ ಸಾರವನ್ನ  . . . 

ದೇವನ ಪ್ರತಿ ಸೃಷ್ಟಿಯೂ ರೋಚಕ,
 ಅಡಗಿಹುದು ಪ್ರತಿಯೊಂದರಲೂ  ಸೌಂದರ್ಯ . . . 
ಈ ಕಣ್ಣುಗಳು ಸೋತಿಹುದು ಅರಿಯಲು 
ಅವನ  ಮರ್ಮವನ್ನ . . . 

ಕಣ್ತೆರೆದ ಕಾರಣವೇನು . . . ?
ಈ ಇರುವಿಕೆಯ ಧ್ಯೇಯವೇನು  . . . ?
ಪ್ರಶ್ನೆಗಳ  ಸುಳಿವಲ್ಲೇ ಅಲೆಯುತಿಹೆವು ನಾವು 


ಅಳದಿರು ನನ ಕಂದಾ  . . . 
ಮಲಗೋ ನನ ರನ್ನ . . .
ಇಹುದು  ಅಲ್ಲೊಂದು ಸುಂದರ ನಾಡು,
ನಲ್ಮೆಯ ಬೀಡು . . . 

ಕರುಣೆಯ ಕಡಲಿಹುದು ,
ಆದರ್ಶಗಳ ನೆಲೆ ಇಹುದು,
ಪ್ರೀತಿ - ವಿಶ್ವಾಸಗಳೇ  ತುಂಬಿಹುದು,
ದೂರದಲ್ಲಿಹುದು ಆ ನೆಮ್ಮದಿಯ  ಗೂಡು . . .   

ಅಳದಿರು ನನ ರನ್ನ . . . 
ಮಲಗೋ ನನ ಕಂದಾ . . .
ವಿಹರಿಸು, ಆನಂದಿಸು  ವಿಸ್ಮಯದ ಸವಿ-ನಾಡಲ್ಲಿ ,
ಕನಸುಗಳ ಆ ಸುಂದರ ಬೀಡಲ್ಲಿ  . . . 

ಮಲಗೋ ನನ ಕಂದಾ ... ಓ ನನ ಚಿನ್ನಾ . . . 
ಮಲಗೋ ನನ ಕಂದಾ ... ಓ ನನ ರನ್ನಾ . . . 

-ಪ್ರಜ್ಞಮಾಲಾ 

  

Saturday 15 March, 2014

ಇನಿಯ

ಇನಿಯ
ಕಾಣದ ನಿನಗೆ ಈ ಮನ ಕಾಯುತಿದೆ ,
ಕಾಯುತಿರುವ ಮನವು ಕನಸುಗಳಲಿ ಲಹರಿಸುತಿದೆ ,
ಲಹರಿಯ ಸಿಂಚನ ಮೊಗವ ಅರಳಿಸಿದೆ,
ಅರಳಿದ ಕಂಗಳು ನಿನ್ನನೇ ಅರಸುತಿವೆ . . .
 ಬಂದು ಬಿಡು ಬೇಗ ,
ತೋರಿಬಿಡು ನಿನ್ನ ಒಲವ ,
ಕನಸುಗಳ ನನಸಾಗಿಸಿ ,
ಬೆಳಗಿಸು ನನ್ನ ಬಾಳ . . .