"ಮೋಹನ -ರಾಗ"
ಅದೆಂಥಹಾ ನಿನ್ನ ಕಳೆ,
ಎಬ್ಬಿಸಿರುವೆ ಮನದಲಿ ಕಚಗುಳಿಯ ಅಲೆ ,
ಕಳೆದು ಹೋದೆ ನಾ ನಿನ್ನಲೇ . . .
ಬಾಳ ಬೃಂದಾವನದ ಮೋಹನನು ನೀನು ,
ನೀ ನುಡಿಸಿದಂತೆ ನುಡಿಯುವ ಕೊಳಲು ನಾನು . . .
ಹತ್ತಿರ ಬರಸೆಳೆದ ಮೋಹ ಮಾಯೆಯು ನೀನು
ಒಲವ ಹೂಬನದಲಿ ಸುಗಂಧರಾಜನು ನೀನು
ಸ್ನೇಹದ ಪಲ್ಲವಿಗೆ "ಪ್ರೀತಿಯ " ಶ್ರುತಿ ಸೇರಿ . . . ಅನುರಾಗ ಅರಳಿತು
ಕನಸುಗಳ ಆಶಾಗೋಪುರ ಇಂದು ನನಸಾಯಿತು
ಕಣ್ಣರಳಿದಾಗ , ಕಣ್ -ಹೊರಳಿದಾಗ
ಮಿನುಗುತಿದೆ ನಿನ್ನ ಬಿಂಬ
ನನ್ನೀ ಒಲವ ಪರದೆಯಲಿ
ಕಾಣಿಸದೇ ನಿನಗೀಗ ನಿನ್ನದೇ ಪ್ರತಿಬಿಂಬ ?
ಪುಳುಕದ ಆಲಿಂಗನ , ಝಲ್ಲೆನಿಸಿದೆ ತನು-ಮನ
ಒಲವ ಆ ಚುಂಬನ , ಮತ್ತೇರಿಸುತಿದೆ ಪ್ರತಿ ಕ್ಷಣ
ಈ ನಿನ್ನ ಪ್ರೀತಿಯೇ ಚೇತನವು ನನಗೆ
ಆಶಯವು ಒಂದೇ,
ಬೆಳಗುತಿರಲಿ ಎಂದೆಂದೂ ನಮ್ಮೀ ಒಲವ ಹಣತೆ . . . .
-ಪ್ರಜ್ಞಮಾಲಾ
0 comments:
Post a Comment