Friday 24 November, 2017

ನಾನು -ಆನು -ತಾನು

ನಾನು -ಆನು -ತಾನು

ನಾನು -ಆನು -ತಾನು 
       ಹಿತವರಾರು ಇವರಲಿ ?
               ಮಿತವರಾರು ಇವರಲಿ ?
      ಸ್ಥಿರವರಾರು ಇವರಲಿ ? 
                      ಸ್ಥಿತವರಾರು ಇವರಲಿ ?

ಹುಡುಕ ಹೊರಟರೆ ಜೋಕೆ 
ಹೊತ್ತು ನಗುವುದು ಮುಖವಾಡಗಳ ನಿನ್ನ  ಬಿಂಬವು  . . .
ನುಲಿಯುತಾ ಇರಿಯುವಳು  ನಿನ್ನ ಆ  ಬೆಡಗಿ  "ನೆರಳು" 
"ಮರುಳ" ! ಅರಿತುಕೋ ಇಲ್ಲಿ ನಿನಗೆ ನೀನೇ  ಶತ್ರುವು 

ಆರು -ಮೂರರ  ಜಾಗದಲಿ ,
ಜಗದ ಸತ್ಯವೇ ಇಹುದು ನೋಡು 
ಬೇಡಿದರೂ , ಬಿಕ್ಕಿದರೂ 
ಮನ್ನಿಸದು ಬೆಳಕಿನ ಒಂದಿನಿತು ಕಿರಣ 
ಇಣುಕಿದಷ್ಟೂ ಶೂನ್ಯ ,
ಜಗ್ಗಿದಷ್ಟೂ ಕತ್ತಲೆಯ ಕಡಿವಾಣ ... 

ಒಪ್ಪಿ - ಅಪ್ಪಿದರೆ ಇದುವೇ   ಶಯನ 
ಮುಂದಿನ ಪಯಣದ ನಿರ್ಮಾಣ 
ನಾಳೆಯ ಅನಂತಕೆ ಇದುವೇ ನಿರ್ವಾಣ . . .  

ಜೀವನದ ಅಸ್ತಕೆ ,  ಹಾದಿ ಬಲು ದೂರ  
ವ್ಯಕ್ತಿಗಳ - ವಸ್ತುಗಳ ಬೇಧವ ಅರಿತು ,
ಕರ್ತುವಿನ  ಕಾರ್ಯಗಳ ಋಣದಲಿ ಬೆರೆತು   
ವ್ಯಕ್ತಿಯ ಪ್ರೀತಿಸಿ , ಕರ್ತುವ ನಂಬಿ 
ದಾಟಿಕೋ  ಈ ಯಾನವ,
ಮುಗಿಸು ನಿನ್ನ ಒಂದು "ಸಣ್ಣ" ಪಯಣ ,
 ಭವಸಾಗರವು ಇದು ಬಿಡಲೊಲ್ಲದು ನಿನ್ನ 
ಆರಂಭಿಸುವುದು ಮತ್ತೊಂದು ನವೀನ ಪಯಣ 

ಜೀವನಚಕ್ರವು  ಇಲ್ಲಿ ನಿತ್ಯ ಚಲನವು ,
ಆದಿ - ಅಂತ್ಯಗಳೇ ಇಲ್ಲಿ ಶಾಶ್ವತವು. . . 
-ಪ್ರಜ್ಞಮಾಲಾ 

0 comments:

Post a Comment