Wednesday 22 November, 2017

ಯಾರಿಗೆ ಯಾರುಂಟು ಎರವಿನ ಸಂಸಾರ

ಯಾರಿಗೆ ಯಾರುಂಟು ಎರವಿನ ಸಂಸಾರ (ಒಂದು ಚಿಂತನ)



ನಾವು ಬಯಸಿದಂತೆ ಸಮಾಜ ಇರಬೇಕೆ ? ನಾವು ನಿಶ್ಚಯಿಸಿದ್ದೇ ಆಗಬೇಕೆಂದರೆ ಹೇಗೆ ? 
ನಾವು ಬಯಸಿದಂತೆ ಎಲ್ಲರೂ ಇರಹೊರಟರೆ , ನಮ್ಮ ನಿರ್ಧಾರಗಳಿಗೆ ಎಲ್ಲರು ತಲೆದೂಗ ಹೊರಟರೆ , ನಾವು ದೇವರೇ ಆಗಿಬಿಡುವೆವು ಅಲ್ಲವೆ ?
ಇವರು ಹಾಗೆ ಮಾಡಬೇಕಿತ್ತು , ಅವರು ಇದನ್ನು ಹೇಳಬೇಕಿತ್ತು ಎಂದು ನಮ್ಮ ಮನಸ್ಸು ಬಯಸುವುದಾದರೂ ಏಕೆ ? 
ನಾವು ಬಯಸಿದಂತೆ ಎಲ್ಲವೂ ಆಗಿ ಈಗಿರುವ ಸ್ಥಿತಿಗಿಂತಲೂ ಹದಗೆಟ್ಟ ಸ್ಥಿತಿಯಲ್ಲಿ ನಾವು ಸಿಲುಕಿಬಿಟ್ಟರೇ  ...  ಯಾರು ಬಲ್ಲರು ? 

" ಅವಶ್ಯಕತೆ ಇದ್ದಲ್ಲಿ ಅವಶ್ಯವಾಗಿ ಇರಬೇಕಾದವರನ್ನು ಭಗವಂತ ಕರುಣಿಸುತ್ತಾನೆ "

ಇತರರು ಮಾಡುವ ಕಾರ್ಯಗಳಾಗಲಿ , ಪೇಳುವ ನುಡಿಗಳಾಗಲಿ ಅವರವರ ವ್ಯಕ್ತಿತ್ವಕ್ಕೆ ಬಿಟ್ಟದ್ದು . ಇವರು ನನ್ನ ಜೊತೆ ಸರಿಯಾಗಿ ವರ್ತಿಸಲಿಲ್ಲ, ಪ್ರೀತಿಯಿಂದ ನುಡಿಯಲಿಲ್ಲ , ಅವರು ನನ್ನನ್ನು  ಕೀಳಾಗಿ ಕಂಡು ಹೀಯಾಳಿಸಿ ಜರಿದರು ,  ಬೆನ್ನ ಹಿಂದೆ -ಮುಂದೆ ಏನೋ ಹೇಳಿದರು . . . 
ಇದೆಲ್ಲದರ ಚಿಂತೆ ನಮಗ್ಯಾಕೆ ? ನಾವು ಮಾಡಿದ ಕಾರ್ಯ- ಪೇಳ್ವ ನುಡಿ ನಮ್ಮನ್ನು ಬಿಂಬಿಸುತ್ತದೆ . ನಾವು ಇತರರ ಬಗ್ಗೆ ಏನು ಯೋಚಿಸಿದೆವು , ಏನು ಆಡಿದೆವು , ಅವರನ್ನು ನೋಯಿಸುವಂತ ಕಾರ್ಯವ ಮಾಡಿದೆವಾ ... ಇದೆಲ್ಲದರ ಚಿಂತನ -ಅವಲೋಕನ  ಮುಖ್ಯ ಹಾಗು ಅವಶ್ಯ . ಏಕೆಂದರೆ , "ನೆಮ್ಮದಿ" ಎಂಬುದು ನಾವು ಮಾಡುವ ಕಾರ್ಯ - ಯೋಚನಾಲಹರಿಯಲ್ಲಿಯೇ ಅಡಗಿದೆ. ನಮ್ಮ ವ್ಯಕ್ತಿತ್ವದಿಂದ ನಾವು ಸಂತುಷ್ಟರೇ , ನಮ್ಮನ್ನು ಸ್ವತಃ ನಾವೇ  ಒಪ್ಪಿಕೊಳ್ಳಲು  , ಪ್ರೀತಿಸಲು , ಗೌರವಿಸಲು ಸಾಧ್ಯವಾದರೆ ಬೇರೆಲ್ಲವೂ ನಮಗೆ  ಗೌಣವಾಗಿಬಿಡುತ್ತದೆ. 
ಕಷ್ಟಗಳು ಒಂದಾದ ಮೇಲೊಂದು ಮುಗ್ಗರಿಸಿ ಬಂದು ನಮ್ಮ ಜೀವನವನ್ನೇ ಅಲ್ಲೋಲಕಲ್ಲೋಲವಾಗಿಸಿದಾಗ ನಮಗೆ ಸಹಾಯ ಮಾಡಲು ಯಾರಿಲ್ಲ ಎಂದೇಕೆ ಮನಸ್ಸು ಸಣ್ಣ ಮಾಡಿಕೊಳ್ಳಬೇಕು ?  ಆಗುವುದೆಲ್ಲ ದೈವಚಿತ್ತ - ಆ ಸನ್ನಿವೇಶವನ್ನು ಒಬ್ಬಂಟಿಯಾಗಿ ಎದುರಿಸುವ ,ಜಯಿಸುವ ಸಾಮರ್ಥ್ಯ ನಮಗಿದೆ ಎಂದು ದೇವರೇ ನಮ್ಮ ಮೇಲೆ ವಿಶ್ವಾಸ ಇಟ್ಟಾಗ ನಮ್ಮ ಮೇಲೆ ನಮಗೇಕೆ ಅಪನಂಬಿಕೆ ?

ನಾವೆಲ್ಲರು  ಪರಿಸ್ಥಿತಿಯ ಕೈಗೊಂಬೆಗಳು.ಬದುಕು ಹಲವು ರೀತಿಯ ಸಂದರ್ಭಗಳ ಅಚ್ಚುಗಳನ್ನು  ನಮಗೆ ಕೊಡುತ್ತಾ ಪರೀಕ್ಷಿಸುತ್ತದೆ .   ಸನ್ನಿವೇಶಕ್ಕೆ ತಕ್ಕಂತೆ ನಾವು ಯೋಚಿಸುವ ಪರಿ, ನಾವು ಕೈಗೊಳ್ಳುವ ನಿರ್ಧಾರ , ಸಾಗುವ ದಾರಿ ನಿರಂತರ ಬದಲಾಗುತ್ತಾ ಹೋಗುತ್ತದೆ . ಖುಷಿಯಲ್ಲಿ ,  ದುಃಖದಲ್ಲಿ , ಆರೋಗ್ಯದಲ್ಲಿ  , ಅನಾರೋಗ್ಯದಲ್ಲಿ - ಪ್ರತಿ ಕ್ಷಣ ಸಂದರ್ಭಕ್ಕನುಸಾರವಾಗಿ ನಮ್ಮ ನಿರ್ಧಾರಗಳು  ರೂಪಾಂತರವಾಗುತ್ತಿರುತ್ತವೆ. ನಮ್ಮ ವಿವೇಕಕ್ಕೆ ಸರಿ ಹಾಗು ಯೋಗ್ಯ ವೆನಿಸಿದ್ದನ್ನು  ,ಕೆಲವೊಮ್ಮೆ ಎದೆಗುಂದದೆ ತಲೆ ಎತ್ತಿ , ಮಗದೊಮ್ಮೆ ಕುಗ್ಗದೆ ತಲೆ ಬಾಗಿ  ಮನಸ್ಸಿಗೆ  ತೃಪ್ತಿ ನೀಡುವಂತಹ ಉತ್ತಮ ನಿರ್ಧಾರ - ಕಾರ್ಯ ನಮ್ಮದಾಗಿರಬೇಕು. ತಪ್ಪು ಮಾಡಿ - ಅರಿವು ಮೂಡಿದಾಗ ಪಶ್ಚಾತಾಪದ  ಹಾದಿ ತುಳಿಯಬೇಕು . ಅನುಭಗಳಿಂದ  ಬುದ್ಧಿ ಕಲಿಯುತ್ತ ಮನವನ್ನು ಕದಡದಂತೆ ಜಾಗೃತವಹಿಸಬೇಕು .ಆಗಲೇ ನಮ್ಮ ಸಂಪೂರ್ಣ ವಿಕಸನ ಸಾಧ್ಯ .  
ಆದದ್ದೆಲ್ಲಾ  ಒಳಿತೇ ಆಯಿತು , ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು ಎಂದು ಸತ್ಯಪಥದಲ್ಲಿ ನಗುಮೊಗದಿಂದ ಬಾಳ್ವೆ  ನಡೆಸುವುದಷ್ಟೇ ನಮ್ಮ ಹೊಣೆ . 
ಹುಡುಗಾಟವಲ್ಲ ಜತನವು ಈ ಬಾಳು 
ಕರುಣೆಯ ಮರೆಯದಿರು , ಕರ್ತವ್ಯದಲಿ ದಿಟವಾಗಿರು . . .
 ಆದರ್ಶಗಳೇ ಹಳಿಯಾಗಲಿ , ಕನಸುಗಳೇ ಬೆಳಕಾಗಲಿ
ಕವಲೊಡೆಯದೇ ,ಹಳಿ ತಪ್ಪದೇ ಸತ್ಯದಲಿ ಸಾಗುತಿರು ನೀನು,
ಮುಟ್ಟುವೆ ನಿನ್ನ ಧ್ಯೇಯವ  
ಸಾರ್ಥಕವು ಆಗ ನಿನ್ನ ಬಾಳು 
-ಪ್ರಜ್ಞಮಾಲಾ

0 comments:

Post a Comment