Monday, 23 December 2013

ಸಾವಿರ ಸಂವತ್ಸರ : "A Thousand Years" ಕವನದ ಅನುವಾದ - ನನ್ನ ಪ್ರಯತ್ನ

ಸಾವಿರ ಸಂವತ್ಸರ 

ಕನಸುಗಳು . . . ವರ್ಣಗಳು ಈಗ   
ಕಂಗಳಲಿ   ಚಿತ್ತಾರ ಬಿಡಿಸುತಿವೆ  . . . 

ಎದೆಯ ಬಡಿತ ಕರ್ಣಗಳ ತುಂಬುತಿದೆ . . . 

ನನ್ನೆಲ್ಲಾ  ಭಯವ  . . . . ಮನದ ಆತಂಕವ . . . .
ಮೀರಬಹುದೇ  ಈ ಪ್ರೀತಿಯ ಅನುಭಾವ ? 
  

ಕಂಡ ಕ್ಷಣ ನಿನ್ನ ಬಿಂಬ  
ಸೂಸಿದೆ ನೀನು ಕಂಗಳಲೇ ಒಲವ . . . 
ಅಳಿಯಿತು ನನ್ನೆಲ್ಲಾ ಸಂದೇಹ. . . 
ಮೀಟಿತು   ಅನುರಾಗದ   ಸ್ವರ   . . .

ಹೆಜ್ಜೆಯೊಂದ ಇಟ್ಟೆ  ನಿನ್ನೆಡೆಗೆ  ನಾ 

ಕಳೆದಂತಿದೆ  ಸಾವಿರ ಸಂವತ್ಸರ
ನನ್ನ ಜೀವ ,  ನನ್ನ ಸಿರಿಯು   ನೀನು   ,
ಕಾದಿದ್ದೆ ನಾ  ನಿನಗಾಗೇ ಅನುಕ್ಷಣವೂ ಚಿನ್ನ. . .  
ಅಂದು -ಇಂದು . . . ಎಂದೆಂದೂ ಪ್ರೀತಿಸುವೆ ನಿನ್ನ 

 ಹೆಜ್ಜೆಯೊಂದ ಇಟ್ಟೆ  ನಿನ್ನೆಡೆಗೆ  ನಾ. . .  


ಸಿಕ್ಕಾಗ  ನಿನ್ನ ಸಾಂಗತ್ಯ ,
ಸ್ತಬ್ಧವಾಯಿತು  ಕಾಲಚಕ್ರ . . . 

ನೆನ್ನೆಗಳ ಭಯವಿಲ್ಲ , 
ನಾಳೆಗಳ ಚಿಂತೆಯೂ ಇಲ್ಲ  

ನಿನಗಾಗೇ ಈ  ಪಣವು ,
ನಿನ್ನುಸಿರಲಿ ಒಂದಾಗಿ ,
ಕಳೆಯುವೆ ಪ್ರತಿ-ಕ್ಷಣವೂ . . . 
ಅಂದು -ಇಂದು . . . ಎಂದೆಂದೂ ಪ್ರೀತಿಸುವೆ ನಿನ್ನ 


 ಚೈತ್ರದ ಚಿಗುರು ನೀನು ,
ಶ್ರಾವಣದ ಸೊಬಗು ನೀನು ,
ನನ್ನ ಒಲವ ವೃಂದಾವನದಲಿ 
ಮನಮೋಹನನು  ನೀನು . . .  


ಬಚ್ಚಿಡುವೆ ನಮ್ಮೀ ಒಲವ ,
ವಿಶ್ವಾಸದ ಗೂಡಲಿ ನಾ   . . . 
ರಾಮನು  ನೀನಾದರೆ ,
 ಭಕ್ತಿಯಲಿ ಕಾಯ್ದ ಶಬರಿಯು  ನಾ. . .

ಕಳೆದಂತಿದೆ  ಸಾವಿರ ಸಂವತ್ಸರ . . . 
ಕಾಯ್ವಿಕೆಯ ವಿರಹವ   ಮರೆಸಿದೆ ನಿನ್ನ ಆಗಮನ
ಕಾದಿದ್ದೆ ನಾ  ನಿನಗಾಗೇ ಅನುಕ್ಷಣವೂ ಚಿನ್ನ. . .  
ಅಂದು -ಇಂದು . . . ಎಂದೆಂದೂ ಪ್ರೀತಿಸುವೆ ನಿನ್ನ


-ಪ್ರಜ್ಞಮಾಲಾ

Saturday, 7 December 2013

" ತಪ್ಪು-ಒಪ್ಪು " - ಸರಿಯಾದ ತಪ್ಪು ಇಲ್ಲ ನಿಜ , ಆದರೆ ನಮಗೆ ತಪ್ಪು ಎನಿಸಿದ್ದು ಬೇರೆಯವರಿಗೆ ಸರಿ ಇರಬಹುದು , ನಮಗೆ ಅಕಾರ್ಯ ಅನಿಸಿದ್ದು ಇನ್ನೊಬರಿಗೆ ಸುಕಾರ್ಯವಾಗಬಹುದು . . . "ನೋಡಲು ಕಣ್ಣು ಗಳಿದ್ದರೂ , ಪರಾಮರ್ಶೆ ಮಾಡುವ ವಿವೇಕ ಇದ್ದಂತೆ "

ತಪ್ಪು- ಒಪ್ಪು



ತಪ್ಪು-ಒಪ್ಪುಗಳ ಈ ಬಯಲ- ಸಂತೆಯಲಿ  ,
ಚುಕ್ಕೆಗಳ ಅಳಿಸಲಾಗದು  ,
ಮರೆಸಲೂ ಆಗದು . . .

ಕೂಡಿ -ಕಳೆಯುವ ಕಾಲನ ಈ ಆಟದಲಿ -

ತಪ್ಪುಗಳೂ  ಒಮ್ಮೊಮ್ಮೆ ಸರಿಯಾಗಬಹುದು ,
ಸರಿಗಳೆಷ್ಟೋ ತಪ್ಪಾಗಬಹುದು ,

ನಂಬಿಕೆಗಳು ಹುಸಿಯಾಗಬಹುದು  ,
ಅವಿವೇಕತೆಯೇ ವರವಾಗಬಹುದು

ಹಾವುಗಳೇ ಏಣಿಗಳಾಗಿ , ಏಣಿಗಳು ವಿಷ ಕಾರಬಹುದು  . . .
ಸಾಗಿ ಬಂದ ಹಾದಿ ಮುನಿದು ,
ಬಾಳ ಹಳಿಯೇ ಕಣ್ಮರೆಯಾಗಬಹುದು


ವಿಸ್ಮಯ ತಿರುವುಗಳ ರೋಚಕ ಅನುಭವ ಈ ಬದುಕು . . .
ತೆರೆದಿಡಲು ಕೆದಕಿದಷ್ಟೂ ,
ಮುಚ್ಚಿಡಲು ಸೆಣೆಸಾಡಿದಷ್ಟೂ  ,

ಬೀಳುವೆವು ನಾವಗೆದ  ಹಳ್ಳಕೆ ನಾವು . . . .

ಪ್ರತಿಯೊಬ್ಬರದು ಇದೇ ಗೋಳು . . .

-ಪ್ರಜ್ಞಮಾಲಾ

ಎಂದು ಬರುವೆಯೋ ನೀನು ? . . .


ಎಂದು ಬರುವೆಯೋ ನೀನು ? . . . 


ಮುಂಜಾವಿನ ಇಬ್ಬನಿಯಲಿ ,
ನೇಸರನ ಆ ಮೊದಲ ಕಿರಣದಲಿ ,
ನಿನ್ನ ನೆನಪು  ಮನವ ಅಪ್ಪುವುದು . . . 

ತಣ್ಣನೆಯ ಗಾಳಿಯಲಿ ,
ಮಳೆಯ ಆ ಮೊದಲ ಹನಿಯಲಿ ,
ನಿನ್ನ ಸಿಹಿ-ನಗು ನಿನಾದಿಸುವುದು . . . 

ಸುಡು -ಬಿಸಿಲಿನ  ಬೇಗೆಯಲಿ ,
ದಾಹವ ತಣಿಸುವ  ಆ  ನೆರಳಲಿ ,
ನಿನ್ನ ಆರೈಕೆಯ ಸೆಳೆತ ಕಾಡುವುದು . . . 
ಏಕಾಂತದ ಶೀತಲ ಈ ಅಪ್ಪುಗೆಯಲಿ ,
ನನಸಾಗಲು ಕಾಯುತಿರುವ 
ಅಗಣಿತ, ಅನನ್ಯ  ಕನಸುಗಳಲಿ . . . 
ನಿನ್ನ ಬರುವಿಕೆಯ ನಿರೀಕ್ಷೆ  ,
ಮನಕೆ ಜೋಗುಳ ಹಾಡುತಿಹುದು . . . 

ಎಂದು ಬರುವೆಯೋ ನೀನು . . . ,
ನನ್ನ ಶ್ರೇಯದಲಿ ಜೊತೆಯಾಗಿ,
ನಿನ್ನೇಳ್ಗೆಯಲಿ  ನನ್ನ ಪಾಲು ಸೇರಿಸಿ,
ಬಾಳ ಹಸನಾಗಿಸುವೆ ನೀನು . . .

ಕಾಯುತಾ ...ಕುಳಿತಿರುವೆ ನಾನು . . .   
   
 -ಪ್ರಜ್ಞಮಾಲಾ 

Saturday, 12 October 2013

ಅನು-ಬಂಧ

ಅನು-ಬಂಧ


ಆಕಸ್ಮಿಕ ಈ  ನಮ್ಮ ಭೇಟಿ. . . . 
ಶುರುವಾಯಿತು ಸಂದೇಶ-ವಿನಿಮಯದ  ನಮ್ಮ ನವೀನ ರೀತಿ  . . . 

ಇಣುಕಿದೆ ನಾ ಸ್ವಲ್ಪ ನಿನ್ನ ಬದುಕಿನಲಿ ,
ಹಂಚಿಕೊಂಡೆ ನನ್ನ ಬಾಳ ತುಣುಕನು ಸ್ನೇಹದಲಿ  . . . 

ಸಾಗಿ ಬಂದಿಹೆವು ವಿಚಿತ್ರ ದಾರಿಯನು ನಾವು ,
ನೆನಪುಗಳ ಅಗಣಿತ ಬೆಸೆದಿಹೆವು ನಾವು   . . . 


ಭಾಂದವ್ಯದ ಬುತ್ತಿ ತೆರೆದರೆ  ,
ಹೊತ್ತೊಯ್ವುದು ಪ್ರತಿ ಪುಟವು,
ನೆನಪುಗಳ ಸುಮಧುರ ಲೋಕಕೆ . . .
 ತಿರುವಿದರೆ  ಪ್ರತಿ ಪುಟವ , 
ತೆರೆಯುವುದು  ಭಾಂದವ್ಯದ ನಮ್ಮ ಪ್ರತಿ ಪದರು  
ಸೋಜಿಗದಲೇ . . . 
ಅಪರಿಚಿತ ಮುನ್ನುಡಿಗೆ  ,ನಗವಿನ ಶುಭಾರಂಭ ,   
ಕೋಪದ ಮೌನಕೆ , ಸಿಟ್ಟಿನ ವಾಗ್ಯುದ್ಧ   ,
ಬಿರು ನುಡಿಗಳ ಪರದೆಯಲಿ,  ಅಡಗಿಸಿಟ್ಟ  ಕಾಳಜಿ,
ಸಂತೈಸುವ ಆಸರೆಯಲಿ , ಕಾಲೆಳವ ಆ ವಿನೋದ ಪರಿ. . .

ಹೆಸರಿಡಲು ಸಾಧ್ಯವೇ ನಮ್ಮ  ಅನುಬಂಧಕೆ. . . 
ಸ್ನೇಹವೂ ಇದೆ , ರಕ್ಷೆಯ ಬಂಧವೂ ಇದೆ , 
ಸ್ವಾರ್ಥವೂ ಇದೆ , ಮಮತೆಯೂ ಇದೆ ,
ಕಲ್ಪನೆಯೂ ಇದೆ , ನೈಜತೆಯೂ ಇದೆ . . . 
ಒಲವ ಒರತೆಯೂ ಇದೆ , ಶೂನ್ಯವೂ ಇದೆ. . . 

ಹೆಸರಿಡಲು ಸಾಧ್ಯವೇ ನಮ್ಮ  ಅನುಬಂಧಕೆ?

ಸಲ್ಲದ ಪ್ರಶ್ನೆಗೆ , ಇಲ್ಲದ ಉತ್ತರವ  ಹುಡುಕುವ, 
ಬಾಲಿಶ ಹಠವ ಹಿಡಿದಿದೆ ಇಂದೇಕೋ ಈ ಮನ. . . .  

-ಪ್ರಜ್ಞಮಾಲಾ



  

Thursday, 12 September 2013

"ಅವನು "

"ಅವನು " 

ಕೇಳಿರುವೆ ಪ್ರಶ್ನೆಗಳ ಹಲವಾರು ನೀನು ,
ಉತ್ತರಿಸಲಾರೆ ... ಮೌನಿ ನಾನು . . . 

ಅರಿತಿರುವೆಯಾದರೆ ನೀ ಎನ್ನ , 
ಕಾಣಬಲ್ಲೆಯಾದರೆ ನನ್ನ ಮನವನ್ನ . . .
ಓದು ನನ್ನ ಕಂಗಳ ,
ಬಿಚ್ಚಿಡುವೆ ನನ್ನೊಲವ ಹಾಳೆಯ,
ಅರಿತುಕೋ ನನ್ನೆಲ್ಲಾ ಭಾವಗಳ . . . 

ಅವನು . . . 
ಮನವ  ಝಲ್ಲೆನಿಸುವವನು ,
ನನ್ನಂತರಾಳದಲಿ ಲೀನವಾದವನು ,
ಮೌನದಲೇ ಮನವ ಮೋಹಿಸಿದವನು ,
ಕನಸುಗಳ ಕಾಣಲು ಹುರಿದುಂಬಿಸಿದವನು ,
ಬೆಂಬಿಡದೇ ಕಾಯ್ವೆ ಎಂದು ಕೈ ಹಿಡಿದವನು ,
ಖುಷಿಯ ಇಮ್ಮಡಿಸಿ ,ದುಃಖದಲಿ ಪಾಲು ಕೇಳಿದವನು . . . 
ಗುಣಗಳಲಿ ಸಂಯಮಿ , ಮಾತು ಅತೀ ಕಮ್ಮಿ . . . 
ಕಣ್-ನೋಟದಲೇ ಹರುಷವ ಉಕ್ಕಿಸುವವನು . . . 
ನನ್ನ ಬಾಳ ನಂದನದಲಿ ಅವನೇ "ಶ್ರೀ-ರಾಮ" ನು . . . 
ಒಲವಲಿ ನನ್ನ ಆಸೆಗಳ  ಕಾಯ್ವ ಸಹೃದಯಿ ನೀನಿರಬಹುದು ,
 ಮನದ ಗಾಯಗಳಿಗೆ ನೀ ಮದ್ದಾಗುವೆಯಾದರೂ ,
ಮಾಸುವ ಗಾಯಗಳ ಕಲೆಯಲಿ ಬೆಸೆದಿರುವವನು ಅವನು
ಏಕಾಂಗಿ  ಈಗ ನಾನಾದರೂ ,
ಅವನ ನೆನಪುಗಳ ತೊರೆಯಲಾರೆನು ಎಂದೂ  ,
ಮರೆಯಲಾರೆ ಅವನನು . . . 
ತೆರೆಯಲಾರೆ ಮನದ ಕದವ ಇನ್ಯಾರಿಗೂ ನಾನು . . . 
ನೀ ಅವನಲ್ಲ , 
ಬೇಡುವೆ . . .ಕಲುಕಬೇಡ ಮತ್ತೆ ಈ  ಒಡೆದ ಹೃದಯವ  ,
ಕ್ಷಮಿಸು , ಇದುವೇ ನನ್ನ ಮನದಾಳದ ಕೋರಿಕೆಯು  . . .

 -ಪ್ರಜ್ಞಮಾಲಾ 

ಕಾದಿರುವೆ

 ಕಾದಿರುವೆ

ಕಾದಿಹೆನು ನಾ ನನ್ನ ಮೋಹನನಿಗೆ ,
ನನ್ನ ಪುರುಶೋತ್ತಮ. . . . ರಘುನಂದನನಿಗೆ. . . 

ಬೇಸರವಿಲ್ಲ ಈ ಕಾಯುವಿಕೆಯಲಿ . . . ಹೊಸ ದಿಂಗತದ ನಿರೀಕ್ಷೆಯಲಿ . . . 
ತುಂಬುವೆ ಕನಸುಗಳ , ಆಸೆಗಳ ಈ ವಿರಾಮದಲಿ 

ಕಂಗಳು  ಬಿಡಿಸುತಿವೆ ಮನದ ಪರದೆಯಲಿ ಅವನದೇ ಛಾಯೆಯನು,
ಕರ್ಣಗಳು ಹುಡುಕಿವೆ ಪ್ರತಿ ಸ್ವರದಲಿ ಆ ಕಂಚಿನ ಕಂಠದ ದನಿಯನು 
ಸಂಗಾತಿಯ ಬಿಸಿ-ಅಪ್ಪುಗೆಯಲಿ ,
ಆನಂದಿಸುವ ಆಸೆ . . . ಒಲವ ಅಮೃತಧಾರೆಯಲಿ

ಎದೆ-ತಾಳ ತಪ್ಪಿಸಿ ,
ಮನಕೆ ಸ್ಪಂದಿಸಿ . . . 
ಆಸೆಗಳಿಗೆ ನೀರೂರಿ . . . 
ನನ್ನಿರುವಿಕೆಯ ಗೌರವಿಸಿ . . . 
ದೂರವಿದ್ದರೂ ಸನಿಹತೆಯ  ,ಕೋಪವಿದ್ದರೂ ಒಲ್ಮೆಯ ಆಸರೆಯಾಗಬೇಕು
ಮೂಡಬೇಕು ಅಂತಹ  ಬೆಸುಗೆ . . . 

ನನ್ನ ಚಂಚಲತೆಗೆ ಅವನ  ಧೃಢ ಸಂಕಲ್ಪ    . . . 
ನನ್ನ ಅಸಹಾಯಕತೆಗೆ - ಶಕ್ತಿಯ ಅವನ ಹೊಂಬಣ್ಣ . . . 
ನನ್ನ ಮೊಗದಲಿ - ನಗುವಿನ ಅವನ ಬಿಂಬ . . .
ಕಣ್-ಪನಿಯಲಿ, ಮಿಡಿಯವ ಅವನ ಹೃದಯ . . . 
ಭಯದ ಕರಾಳತೆಯಲಿ - ರಕ್ಷೆಯ ಆ  ಬಂಧ . . . 
ಬಯಸಿರುವೆ ಇಂತಹ ಅನುಬಂಧ ...
 ಆಶಯವು  ಒಂದೇ , 
ನನ್ನ ಬಾಳ ಆಗಸದಲಿ 
ಹೊಂಗಿರಣವೂ ಅವನೇ . . .
ಬೆಳದಿಂಗಳೂ  ಅವನೇ . . . 
ನನ್ನೊಲುಮೆಯ ಕಾಯ್ದಿರಿಸಿರುವೆ ಅವನಿಗಾಗೇ . . . . 
ಬೇಸರವಿಲ್ಲ ಈ ಕಾಯುವಿಕೆಯಲಿ . . . 
ರಂಗೇರಿದೆ ಈ ಮನ ಅವನ ನಿರೀಕ್ಷೆಯಲಿ . . . 
-ಪ್ರಜ್ಞಮಾಲಾ

ಭೂತಾಯಿ



"ಭೂತಾಯಿ "


ಪ್ರಶಾಂತತೆಯ ಮಡಿಲು ಅವಳದು ,
ನೀರವತೆಯ ನಡುವೆ ಶಬ್ದ -ಸಿರಿಯು ಅವಳದು ,
ಜಗಕೆಲ್ಲಾ ನಿರಂತರ ಚೇತನ-ಶಕ್ತಿ,ವಿಶ್ವರೂಪ ಅವಳದು... 

ಗಡಿಬಿಡಿಯ ಈ ಕಪಟ ಸಂತೆಯಲಿ , 
ಕಾಂಚಾಣದ ಮಹಿಮೆ ಎಲ್ಲೆಡೆಯೂ ,ಎಲ್ಲರಲೂ ಬೇರೂರಿ ಕುಣಿಯುತಿಹುದು,
ದಾಹ ದುರಾಸೆಗಳ ಜಾಲದಲಿ ಹುಚ್ಚನಾಗಿಸಿಹುದು ಪ್ರತಿ ಮನುಜನನು,
 ಮೈಯೆಲ್ಲಾ ಮುತ್ತಿ,ಕಿತ್ತು-ಕಸಿದು-ಹಂಚಿ ತಿನ್ನುತ್ತಿದ್ದರೂ ,
ಮಾನವನ ಅಗಣಿತ ಅವಮಾನಗಳ ಹೊರೆಯಲಿ 
ಬೇಯುತಿಹಳು ಅವಳು. . . 



ಮಾನವನ ವಿಕೃತ -ವಿಕಟ ಆಟಗಳೆಲ್ಲವನು ,
ತನ್ನೆಲ್ಲಾ ಆಕ್ರಂದನವನು ಸಹಿಸುತ ಸ್ತಬ್ಧಳು ಅವಳು

ಉರುಳುತಿಹ ಗಾಲಿಗಳು , 
ಹೊಗೆಯುಗುಳುತಾ ಚೀರುತಿಹ ಯಂತ್ರಗಳು ,
ಕುಕ್ಕುವ ನೋಟಗಳು
ತನ್ನೊಡಲ ಬಗೆಯುತಿರೆ ,
ಭಾವರಹಿತ ನಗುವ ಕಂಗಳಲಿ ತುಂಬಿ, 
ದಣಿದು- ಬಳಲಿದರೂ , ತನ್ನೆಲ್ಲಾ ಸತ್ವವ ಹೀರಿ ರಾರಾಜಿಸಿದರೂ 
ಕ್ಷಮಿಸುತಿಹಳು ಪ್ರತಿ ಬಾರಿಯೂ . . .

ಸೆಟೆದು ನಿಂತರೆ ಆಕೆ ,
ಕೋಪದಲಿ ಕಂಪಿಸಿದರೆ ಒಮ್ಮೆ ,
ದಾಳ ಬೀಸಿದರೆ ಆಕೆ ,
ಧೂಳಿಪಟವು ಮಾನವನ ಆಟಗಳೆಲ್ಲವೂ . . . 

ಒಡಲ ಬಿಸಿಯಲಿ ತತ್ತರಿಸುವ ,
ದೈನ್ಯನೋಟದಲಿ ಬೇಡುವ ಸರದಿ ಮಾನವನದು ಆಗ ,
ಬರಡು ಮನಕೆ ಕುರುಡು ಭಾವಗಳು ಎಂತು ಆಸರೆಯಾಗಬಲ್ಲವು ,
ಎಸಗಿದ ಪಾಪ-ಕರ್ಮಗಳೆಲ್ಲವೂ ರಕ್ಷಿಸದು ಅಂದು . . . 


ಮುಕ್ತಳಾಗುವಳು ತಾಯಿ,
ನಿರ್ವಾಣ ಹಬ್ಬುವುದು ಎಲ್ಲೆಡೆಯೂ ,
ಚಿಗುರುವುದು ಹೊಸ ಚಿಗುರು , 
ಉದಯಿಸುವುದು ಹೊಸ ಪರ್ವವು . . . 

ದುರಾಲೋಚನೆಯ ನಡುವೆ ದೂರಾಲೋಚನೆಯ ಸಮಯವಿದು ,
ಸಂರಕ್ಷಣೆಯ ಹಾದಿಯ ಈಗ ತುಳಿಯದಿರೆ ,
ಅಂತ್ಯ-ರಾಗದ ಜೋಗುಳವ ಹಾಡುತಾ , ನಿಪಾತಕೆ ತಳ್ಳುವಳು 
ರಕ್ಷಕಿಯು , ಸಲಹಿ-ಪೋಷಿಸಿದ ಮಾತೆಯು,
ಚಂಡಿ -ಭಕ್ಷಕಿ ಆಗುವಳು ಆಗ . . . 
-ಪ್ರಜ್ಞಮಾಲಾ




Saturday, 17 August 2013

ತಿರುವು


ತಿರುವು

ಸೋಜಿಗದ ತಿರುವೊಂದು ಬಾಳಿನಲಿ  ಹೊಸ ಅಲೆಯ ತಂದಿತ್ತು ,
ಖುಷಿಯ ಖಾತೆಗೆ  ಹೊಂದಾಣಿಕೆಯ ಬೀಗ ಜಡಿದ್ದಿತ್ತು . . .    

ಒಗ್ಗದೇ ಜಗ್ಗಾಡುತ್ತಿದ್ದೆ ಪ್ರತಿಯೊಂದು ದಿನ   
ಮಾರಿಯಂತೆ ಕಾಡುತ್ತಿತ್ತು ಪ್ರತಿಯೊಂದು ಕ್ಷಣ  

ನನ್ನವರ ಬಿಸಿಅಪ್ಪುಗೆಯು ದೂರವಾಗಿತ್ತು ,
ಸ್ಥೈರ್ಯದ ತಳಹದಿಯೇ ನಲುಗಾಡುತ್ತಿತ್ತು  . . . 

ಮುನಿಸಿಕೊಂಡ  ಭಾಗ್ಯನ ಕೈಗೊಂಬೆಯಾಗಿ ,
ದಿನದೂಡಿದ್ದೆ  ಹೈರಾಣದಲಿ ನಾನು  . . . 
ಕೈಚೆಲ್ಲಿ ಕೂತೆ , ಹೆಜ್ಜೆಯ ಹಿಂದಿಟ್ಟೆ . . . 
ಮರಳಿ ಗೂಡನು ಸೇರಲು ಹವಣಿಸುತ್ತಿದ್ದೆ ಅಂದು  . . . . 

ತೂರಿಬಂದಿತು ಕಿರಣವೊಂದು ನನ್ನ ಕೈಹಿಡಿಯಲು ,
ಮೂಡಿಸಲೆಂದೇ ನವ್ಯ ಹುರುಪ ,ಗುರಿ ಮಟ್ಟಿಸಲು . . . 

ದಾರಿಯೊಂದು ರೂಪುಗೊಂಡಿತು ದಿಕ್ಕೆಟ್ಟ ನಾವೆಗೆ ,

ಚೇತರಿಸಿಕೊಂಡೆ ನನ್ನವರ ಮೃದು ಅರೈಕೆಯಲಿ, 
ಮುನಿದ ಭಾಗ್ಯವೂ ಜೊತೆಯಾಯಿತು ಅಂದಿನಿಂದಲೇ  . . . 

ದಿನಗಳುರುಳಿದವು ಹೇಗೋ ತಿಳಿಯೆನು ನಾನು ,
ಈ ನಂದನವನದಲ್ಲಿ ,
ತುಂಟ ತಮ್ಮನ ಕಲರವವಿತ್ತು ,
ಶಾಂತ ತಂಗಿಯ ಪ್ರೀತಿಯೂ ಇತ್ತು . . . 
ಸ್ನೇಹದ ಮಾತೃ - ಹೃದಯವೂ  ಇತ್ತು ,
ಕಾಳಜಿಯ ಅಣ್ಣನ ನೆರಳಿತ್ತು  . . . 

ತನ್ನ ಬಾಂಧವ್ಯದ  ಬೆಸುಗೆಯಲಿ ,
ನನ್ನೆಲ್ಲಾ ನೋವ ಮರೆಯಾಗಿಸಿತ್ತು  . . . 
ಮನೆ-ಮನದಲ್ಲಿ ಒಲವ ಸಾಗರವೇ ಇತ್ತು . . . 



ಬಾಳ ನವ್ಯ ಸವಾಲೊಂದು ಕರೆಯುತಿದೆ ದೂರ ಈಗ ,
ವಿದಾಯ ಹೇಳಲೇ ಬೇಕು  ಕುಸುಮ ನಿಲಯದಿಂದ ಬಹು ಬೇಗ  ,

ಹೊಸ ತಿರುವಿನ ಅಚ್ಚರಿಗೆ ಕಾಯುತಿದೆ ಮನ 
ಹರುಷಗೊಂಡರೂ , 
ಮುಂದೆ ಸಾಗಲು ಹಿಂಜರಿಯುತಿದೆ ಮನ ,

 ಬಿಟ್ಟು ಬರಲಿ ಹೇಗೆ ,    

ಪ್ರೀತಿಯ  ದಾಹ ಇನ್ನೂ ನೀಗಿಲ್ಲ ,

ಮಾತಿನ ಗಂಟು ಇನ್ನೂ ಬಿಚ್ಚಿಲ್ಲ ,

ನೆನಪಿನ ಬುತ್ತಿಯು ಇನ್ನು ತುಂಬಿಲ್ಲ . . .

ಬಿಟ್ಟು ಬರಲು ಮನಸಿಲ್ಲ . . . 

ಮರಳಿ ಹೋಗಲು ಬಯಸುತಿದೆ ಬಂದ ದಾರಿಯಲಿ ಮತ್ತೆ ಇಂದು

ಕಾಲಚಕ್ರವ ಹಿಂದೆ ತಿರುಗಿಸಲು ಬಯಸುತಿದೆ ಮನವಿಂದು 


-ಪ್ರಜ್ಞಮಾಲಾ

ಹಣತೆ


ಹಣತೆ 

ಬೆಳಗಿಸಿರುವೆ ಒಲವ ಹಣತೆ ಎಂದಿನಿಂದ ,
ಕಾಯುತಿರುವೆ ಶ್ರದ್ಧೆಯಲಿ ಬಹು ನಿರೀಕ್ಷೆಯಿಂದ  . . . 
ಕನಸುಗಳ ಶುಭಾರಂಭವು ನಿನ್ನಿಂದ  ,
ವಿಶ್ವಾಸದ ಮುಗುಳ್ನಗೆಯು ನಿನ್ನಿಂದ ,

ಈ ಮಿಡಿತ-ತುಡಿತಗಳೂ ನಿನ್ನಿಂದ . . .
ಒಲವ ಈ ಸುಂದರ ಅನುಭಾವ,
ನಿನ್ನಿಂದ . . . 


 ಒಲವ ನನ್ನ ಪ್ರಪಂಚ ಪರಿಪೂರ್ಣ ನಿನ್ನಿಂದ ,
ನೀನೇ ಆಗಸ , ನೀನೇ ಸಾಗರ. . .
ಇದರ  ಆದಿ , ಅಂತ್ಯಗಳು ನಿನ್ನಿಂದ  . . . 
ಕೇವಲ ನಿನ್ನಿಂದ . . . 

 

ನನ್ನೆಲ್ಲಾ ಕೋಪವ ಸಹನೆಯಲಿ ಬಂಧಿಸುವ,
ಕ್ಷಣದಲೇ ನಗುವ - ಉಕ್ಕಿಸುವ 
ಮಾಯಗಾರನು ನೀನೇ  
ನನ್ನ ಅಳುವಿನ ಕಡಲ ಕಂಡವನೂ ನೀನೇ ,
ಭಾವಗಳ ಆಳ ಅರಿತವನೂ ನೀನೇ . . .  

ಬಾಳ ಪ್ರತಿ ಹಂತದಲಿ  ಸ್ಫೂರ್ತಿಯೂದವನು  ನೀನೇ ,
ಕ್ಷಣವೂ  ಸವಾಲಾಗಿ ಕಾಡುವವನೂ ನೀನೇ . . . 

ಮನಸಿನ ರಾಜ್ಯವ  ಆಳುವ ಅರಸನೂ ನೀನೇ ,
ಅರಿತಷ್ಟೂ ಆಗಂತುಕನಾಗಿ ದೂರ ಸರಿಯುವವನು ನೀನೇ  . . . 
ಒಂಟಿತನದ ಹತಾಶೆಯು,
ನಿರ್ಲಕ್ಷ್ಯದ ಕಂಪನವು , ವಿರಹದ ದುಸ್ಸ್ವಪ್ನವೂ ನೀನೇ  . . . 

ಓ ನನ್ನ ಒಲವೇ , 
 ಪ್ರೀತಿಯ ಪ್ರತಿ ಹಾಳೆಯ ಕಗ್ಗಂಟು - ನಿಘಂಟು ಎಲ್ಲವೂ ನೀನೇ . . .  

ಕುಳಿತಿಹೆನು  ನಿನ್ನ ಒಲವ ದ್ವಾರದಲಿ ನಾನು ,
ಕಂಗಳಲೇ ಹೊಸೆದಿರುವೆ ನಿನಗಾಗೆ ನನ್ನೆಲ್ಲಾ ಒಲವನು  ,

ಈ ಕಾಯುವಿಕೆಯು ನನ್ನ ಪರೀಕ್ಷೆಯೇನು ?
ಅಥವಾ 

 ಒಲವ ನಿನ್ನ ದಾರಿಯಲಿ  ನಾನು ನಿಶಿದ್ಧಳೇನು  ?
ಅಸ್ಪಷ್ಟ ನಿನ್ನ  ಭಾವದಲಿ - ನನ್ನ ಒಲವ ದಿಕ್ಕೆಡಿಸದಿರು ,

ಮೃದುವು ಈ ಮನಸು , 
ಕೋಪದಲಿ , ಮೌನದಲೇ ಚುಚ್ಚದಿರು . . . 

ಈ ವೇದನೆ ನನಗಿನ್ನೂ ಸಹ್ಯವಲ್ಲ . . . . 

ನನ್ನೀ ಒಲವು ಅಚಲ,
ಆಟಿಕೆಯೆಂದು ತಿಳಿಯದಿರು. . . 
  
ಕೊನೆಯ ನಿವೇದನೆಯು ನಿನಗೆ ,
ತೆರೆದಿಡು ಒಮ್ಮೆ ನಿನ್ನ ಮನಸನು ,
ತೋರಿಬಿಡು ನಿನ್ನ ಮನದಲಿ ನನ್ನ ಸ್ಥಾನವನು. . . 

ಅಳಿಸಿಬಿಡು ನನ್ನೆಲ್ಲಾ ಆತಂಕಗಳನು . . . 
ಮರೆಯಾಗಿಸು ನನ್ನೆಲ್ಲಾ  ಪ್ರಶ್ನೆಗಳನು 

ನಿವೇದನೆಯು ನಿನಗೆ , ಹೇಳಿಬಿಡು  ಉತ್ತರ . . .
ಮನದ ಕದವ ತೆರೆದು ,ಬೆಳದಿಂಗಳ ಪಸರಿಸುವೆಯಾ ,
ಆಸೆಯ-ಗರಿಗಳುದುರಿಸುವ  ಬಿರುಗಾಳಿಯಾಗುವೆಯಾ  . . . 
ಕಾಯುತಿರುವೆ ನಿನ್ನ ಉತ್ತರ . . . 

ಜೊತೆಯಾದರೆ ಉಸಿರಿನಲಿ ಉಸಿರಾಗುವೆ ಅನುಕ್ಷಣ ,
ಇಲ್ಲದಿರೇ 
ಗೆಳತಿಯಾಗಲಾರೆ , ಬಾಳ  ಮುಳ್ಳಾಗಲಾರೆ 
ಎಂದೂ ಇರದಂತೆ  ಅದೃಶ್ಯವಾಗುವೆ ಇದೇ ಕ್ಷಣ . . . 

ನಿವೇದನೆಯು ನಿನಗೆ , ಹೇಳಿಬಿಡು ನಿನ್ನ  ಉತ್ತರ . . . 

-ಪ್ರಜ್ಞಮಾಲಾ 

ಉಡುಗೊರೆ

ಉಡುಗೊರೆ


ಹಾಗೆ ಎಲ್ಲೋ ನಿನ್ನ ನೋಡಿದಂತೆ ,
ನಿನ್ನ ಸ್ವರವ ಕೇಳಿದಂತೆ ,
ಬಿಸಿಯುಸಿರ ನಿನ್ನ ಸ್ಪರ್ಶ ಮೈಯ ಸೋಕಿದಂತೆ
ಜಾರುತಿದೆ ಈ  ಹುಚ್ಚು ಮನಸು ನಿನ್ನೆಡೆಗೆ  ,
ಕ್ಷಣವೂ ನಿನ್ನ ನೆನಪಲ್ಲೇ  ತೇಲ ಬಯಸಿಹೆ ಅದೇಕೋ ನಾ ಕಾಣೆ  . . .

 ಆಕರ್ಷಣೆಯು ಇದಲ್ಲ ,
ಕಾಲ -ಹರಣವೂ ಅಲ್ಲ ,
ವಿಭಿನ್ನ ನಿನ್ನ ವ್ಯಕ್ತಿತ್ವ , ವೈಖರಿಯೂ ವಿಶಿಷ್ಟ . . .
ವರ್ಣಿಸಲಾರೆ ಈ ಅನುಭೂತಿಯ . . .  
ಕಂಡಿರುವೆ  ನಿನ್ನಲ್ಲಿ  ಬಾಳ ಸುಮಧುರ ಸಾಂಗತ್ಯ . . .  

ಕಾಡುತಿದೆ ಅನುಮಾನವು ನನಗೆ ,
ಮೊದಲು ಒಲವಿನ ತಲ್ಲಣವೇ ಇದು!!!  
ನವ್ಯ -ಪರ್ವಕೆ ಆದಿ ಹೇಳಿರುವೆ ನೀನು . . . 
ಅಂಕುರಿಸಿದೆ ಆಸೆಗಳು ಸಾವಿರಾರು,
ಹೊಸತು-ಹೊಸತು ಇದೆಲ್ಲವೂ ಈ ಮನಕೆ,
ನೀನೇ ಕಾರಣ ಈ ಅನನ್ಯತೆಗೆ. . . 
ಬಿಗುಮಾನದ ಗೋಡೆ ನನಗಿಲ್ಲ . . . 
ಸುಪ್ತ ಪ್ರೀತಿಯು ಇದಲ್ಲ  , 
ವಿರಹದಲಿ ನಾ ಬೇಯೋದಿಲ್ಲ ,
ಮುಚ್ಚಿಟ್ಟು  ನಿನ್ನ ಕಾಡಿಸೋದಿಲ್ಲ . . .  

ನೀನೇ ಹೇಳು ,
ಕಂಗಳಲಿ   ಬಿಚ್ಚಿಡಲೇ ಈ ಹರುಷವ ?
ಬರೆದು ಒಪ್ಪಿಸಲೇ . . .  ಕೂಗಿ ಹೇಳಲೇ ನನ್ನೀ ಮನದ ತುಮುಲವ. . . ?

ಹಕ್ಕು ನನಗೆ ನಿನ್ನ ಮೇಲೆ ,

ಬೇಕು ನನಗೆ ಸದಾ ನಿನ್ನ ಸಾಂಗತ್ಯ-ಸಾನಿಧ್ಯ . . .
ಅದುವೇ ನನಗೆ ಸೌಭಾಗ್ಯ . . .
ಕೇಳುತಿರುವೆ  ನಿನ್ನ ಒಲವ ಉಡುಗೊರೆಯ. . . 
ಕೊಡುವೆಯಾ ನಾ ಬಯಸಿದ ಕಾಣಿಕೆಯ ?

-ಪ್ರಜ್ಞಮಾಲಾ

Saturday, 13 July 2013

ವಿದಾಯ

ವಿದಾಯ

ಬೆಸುಗೆಯು ಇದು ಸಂಕೋಲೆಯಲ್ಲ . . . 
ಕಾಳಜಿಯು ಇದು ಕಡಿವಾಣವಲ್ಲ . . . 
ಪ್ರೀತಿಯು ಇದು ಸಂಶಯವಲ್ಲ. . . 
ಹುಸಿಗೋಪವಿದು ಬಿಗುಮಾನವಲ್ಲ . . . 

ನಿನಗಾಗೇ ಮಿಡಿಯುವ ಹೃದಯವಿದು , 

ನನ್ನೀ ಒಲವು ಬತ್ತುವುದಿಲ್ಲ . . . 

ಬದಲಾಯಿತು ಹೇಗೆ , ಏಕೆ ನಮ್ಮೀ ಬಂಧ ?

ಆತ್ಮೀಯವೆನಿಸಿದ ಕ್ಷಣಗಳು ಕಾಲ ಹರಣವೆನಿಸಿದವು  
ಮಾತು ಕಿರಿ - ಕಿರಿಯಾಯಿತು, 
 ಮೌನವೂ ವ್ಯರ್ಥವಾಯಿತು  . . . 
ನಾಟಕವೆನಿಸುತಿದೆ  ಮಾಡುತಿರುವ ಪ್ರಯತ್ನವೆಲ್ಲವೂ ನಿನಗೆ  . . . 
ಉಸಿರುಗಟ್ಟುತಿದೆಯೇ ಈ ಸನಿಹತೆಯು ನಿನಗೆ ?
ಬದಲಾಯಿತು ಹೇಗೆ ನಮ್ಮೀ ಬಾಂಧವ್ಯವು ನಿನಗೆ ?

ಪ್ರೀತಿಯು ನನ್ನದು ,  ಪಾಶವಲ್ಲ  ,
ಬೇಡಿ ಪಡೆಯಲಾರೆ , ನನ್ನ ಒಲವು ನಿಕೃಷ್ಟವಲ್ಲ . . .
ಅಗಣಿತ ಸಮ್ಮುದ ಕ್ಷಣಗಳ ಕೊಟ್ಟವನು  ನೀನೇ ,
ನೆನಪುಗಳ ಬುತ್ತಿಯಲಿ ಕಹಿಯ ತುಂಬುತಿರುವವನು  ನೀನೇ . . .
  ಬದಲಾವಣೆಯ ಹರಿಕಾರನೂ ನೀನೇ . . . 
ದೂಷಿಸಿ , ದೂರ ತಳ್ಳುತಿರುವವನೂ  ನೀನೇ . . . 



ಮನಸಿಲ್ಲದ ಮನಸಿನಿಂದ ಮನಸಿನಲಿ
ಮನೆಯ ಮಾಡಿದೆ ಏಕೆ  ನೀನು? . . .
ಒಡೆಯುತಿರುವೆ  ನಮ್ಮ ಒಲವ ಆಶಾ-ಸೌಧ,
ನಿರ್ದಯಿಯಾದೆ ಇಷ್ಟು ಏಕೆ ಇಂದು ?  . . .

ಬೇಡ ಗೆಳೆಯ ,
ಸಾಕು ಮಾಡು ಈ ಕೋಪ -ಈ ತಾಪ . . .
ಕಟ್ಟಿಹಾಕಲು ನಾನ್ಯಾರು. . .
ನಿನ್ನ ಖುಷಿಗೆ ಕಲ್ಲು-ಹಾಕುವ  ಕ್ರೂರಿ ನಾನಲ್ಲ . . .
ನಗುವ ಬಯಸುವೆನೇ ಹೊರತು ನಿನ್ನ ದುಃಖವನಲ್ಲ . . .
ಈ  ಅಪವಾದ ನನಗೆ ಬೇಡ . . .

ಹಾಡಿಬಿಡುವೆ  ಮುಕ್ತಾಯ  ಈ ಅನುರಾಗಕೆ ,

ದೂರ ಸರಿದು  , ಮರೆಯಾಗುವೆ 
ನಿನ್ನ ಒಲವ ಪರದೆಯಿಂದ,
ಅಳಿಸಿಬಿಡು ನನ್ನ ನಿನ್ನಿಚ್ಛೆಯಂತೆ, 
ನಿನ್ನ ಬಾಳ ಪುಟದಿಂದ. . .   

ವಿದಾಯವು ನಿನಗೆ  . . . ಶುಭ-ವಿದಾಯ . . .
ಎಲ್ಲೇ ಇರು . . . 

ಸುಖದಿಂದಿರು ,
 ಹಾರೈಕೆಯು ನನದು . . .

ಹಿಂದುರಗಲಾರೆ ಇನ್ನೆಂದೂ . . .ವಿದಾಯವು ನಿನಗೆ ,
ಇದುವೇ  ನನ್ನ  ಶುಭ-ವಿದಾಯ . . .
-ಪ್ರಜ್ಞಮಾಲಾ  

Monday, 6 May 2013

ಮಿತ್ರರೋ , ಶತ್ರುಗಳೋ ಇವರು ?


ಮಿತ್ರರೋ , ಶತ್ರುಗಳೋ 
ಇವರು  ? 
ಮಿತ್ರರು ಯಾರೋ , ಶತ್ರುಗಳು ಯಾರೋ .....
ವಿಷವುಣಿಸುವ ಹಿತ - ಶತ್ರುಗಳಾರೋ ... ಅರಿಯೆನು ನಾನು

ಪ್ರೀತಿಯ ಅಮೃತವನೀಯುವ ದೈವವ ಬೇಡೆನು, 
ಬಿರುಕು ತರುವ ಆ ಮನಸ್ತಾಪಗಳ ದೂರೆನು ನಾನು ,

ಖುಷಿಯ ಸುಮಧುರ ಕ್ಷಣಗಳ
 ಸವಿ ಹೆಚ್ಚಿಸುವುದು ಅದು  . . .
ಮನಸುಗಳ ಬೆಸೆಯುವುದೇ ಅದು. . .

ಹಗೆಯ ಸಾಧಿಸುವ ರಕ್ಕಸನ ದೂರುವೆನು ನಾನು  ...
ಸ್ನೇಹದ ನೆರಳಲ್ಲಿ ಹುಟ್ಟುವುದು ಹೇಗೆ ಆ ದ್ವೇಷದ ಕಿಡಿ?
ಮನಸ ಸುಡುವುದೇ ಅದರ ನೈಜ ಪರಿ ....
ಪ್ರೀತಿಯ ಅಮೃತವನೀಯುವ ದೈವವ ಬೇಡೆನು,  
ಹಗೆಯ ಸಾಧಿಸುವ ರಕ್ಕಸನ ಬೇಡೆನು ನಾನು  ..
ಗೆಳೆತನದ ಸಿಹಿ-ಕಹಿ ಬಾಂಧವ್ಯವ 

ಬೆಸೆವ
ಸರಳ ಮನಸ ಬೇಡುವೆನು ನಾನು ,

ಉಪಕಾರ ಮಾಡದಿರೆ , ಅಪಕಾರವ ಬಗೆಯುವ ಕಹಿ ಮನಸೇ ಏತಕಿಲ್ಲಿ ?
ಎಲ್ಲರೊಳು ಬೆರೆತು ಬಾಳಲು ಹವಣಿಸುವ  ನಾನು  ಮೂರ್ಖಳೇ  ಇಲ್ಲಿ ?... 

-ಪ್ರಜ್ಞಮಾಲಾ


ಗ್ರಹಣ


ಗ್ರಹಣ

ಬಯಸಿದಾಗ  ಸಿಕ್ಕಿತು
ನಿನ್ನ  ಮುನಿಸು - ಮೌನಗಳ  ಬಹುಮಾನ
ಬೇಡಿದಾಗ ನೀಡಿದೆ 
ಅವಮಾನ- ಬಿಗುಮಾನಗಳ ಸನ್ಮಾನ 



                   ಪ್ರೀತಿಸಿದವ ಬದಲಾದ , ಪ್ರೀತಿ ನಿಂತ ನೀರಾಯ್ತು ...

               ಜಟಿಲವಾದ ಸಂಬಂಧಗಳು , ಒಲವ ಕುಸುಮವ ಕರಟಿಸಿತು ... .

ಒಡೆದ  ಕನಸುಗಳ ರಾಶಿಯಲ್ಲಿ ,
ಬಿಕ್ಕುತ್ತಿದ್ದೆ  ನಿನ್ನ ನೆನಪಲ್ಲಿ ಅನುದಿನವು ನಾನು ... 

ದೂರವಾದೆ ...  ಅದೆಲ್ಲಿ ಮಾಯವಾದೆ ,
ಅಂಟಿಸಿ ಹೋದೆ ನನಗೇಕೆ ಒಂಟಿತನ ಛಾಯೆ ಅಂದು ನೀನು ? ...
 

ಉರುಳಿತು ಕಾಲ , ಚಿಗುರಿತು ನವ ಋತುಮಾನ ... 


ಮತ್ತೆ  ಪ್ರವಹಿಸಿತು  ಒಲವ ನೂತನ ಝರಿ ,



                              ಮಿಂದು-ನಲಿದು ನಗುತ್ತಿದ್ದೆ , 



                              ಮಾಸಿಸುತ್ತಿತ್ತು ಮನದ  ಗಾಯಗಳು, 


                                   ನನ್ನೀ ಸುಧಾಂಶುವಿನ  ಮಡಿಲಿನಲಿ 

ಬೆಳದಿಂಗಳ ನಗೆಯ ಹರಿಸಿ , ಜೇನ  ಸವಿಯ ಸ್ಫುರಿಸಿ,
 ಪಲ್ಲವಿಸಿತು  ಮಗದೊಮ್ಮೆ ಅನುರಾಗದ  ಸಿರಿ ...
ಸುಪ್ತ ಆಸೆಗಳಿಗೆ  ಬೀಸಿತು  ವಾಸ್ತವದ ತಂಗಾಳಿ ...


ಝೇಂಕರಿಸಿತು ನಿರೀಕ್ಷೆಗಳ ನೂತನ ಖನಿ,
ಅವನೇ ನನ್ನ ಬಾಳ ಕಣ್ಮಣಿ  ...



ಗ್ರಹಣದಂತೆ  ಹಿಂದಿರುಗಿದೆ  ಏಕೆ?...
ಹಳೆಯ ಕಿಡಿಯ  ಹೊಗೆಯಾಡಿಸಲು,

 ಪ್ರತ್ಯಕ್ಷವಾದೆ  ಈಗೇಕೆ ?

ಸಲ್ಲದ-ಒಲ್ಲದ ಹಳೆಯ ನೆನಪುಗಳು
ಹುಗಿದುಹೋಗಿಹವು 
ನಳನಳಿಸುವ  ಹೂಬನದಲ್ಲಿ ಇಂದು ..

ಭಾವರಹಿತ ನೆರಳು ಮಾತ್ರವೇ ನಿನಗಾಗಿಗೆಯೇ ಚಾಚಿಹುದು ,
ನನ್ನ ಕಣಕಣಗಳಲ್ಲಿ  ಇಂದು...

ಉರುಳಲಾರೆ ಹಳೆಯ ಗಾಲಿಯ ಕಟ್ಟಿ
ನಿನ್ನ  ಜೇಡನ ಬಲೆಗೆ ಮತ್ತೆ ನಾನು....


"ಕಲ್ಮಷ " ಪ್ರೀತಿಯ ನಾಟಕವ ನಿಲ್ಲಿಸು,

ಆಡದಿರು ಚದುರಂಗದಾಟವ ನನ್ನ ಬಾಳಲಿ ಮತ್ತೆ  ನೀನು...

ದೂರವಾಗಲಾರೆ, ಮಾಯವಾಗಲಾರೆ. . . 

ಈಗೇಕೆ  ಅಂದಿನಂತೆ ಮತ್ತೆ ನೀನು?
ದೂರವಾಗಲಾರೆ ,ತೊರೆದು ಹೋಗಲಾರೆ  
ಈಗೇಕೆ  ಅಂದಿನಂತೆ ಮತ್ತೆ ನೀನು?...




-ಪ್ರಜ್ಞಮಾಲಾ

ಕೋಪ

ಕೋಪ 



ಪ್ರೀತಿ ಅನಂತವಾಗಿದೆ ,

ಆಸೆಯ ಕನಸುಗಳು ಅಗಣಿತ ತಾರೆಯಾಗಿವೆ ,



ಪ್ರೀತಿ ಸಾಗರದಷ್ಟಿದ್ದರೂ ,

ಆಸೆಗಳು ಮುನಿಸಿನ ಪರದೆಯಲಿ ಮರೆಯಾಗಿವೆ . . .

ಕೋಪ ಮನಸಲಿ ನೆಲೆ ಮಾಡಿದೆ ,

ನಂಬಿಕೆಯ ಬುನಾದಿಗೇ  ಗೆದ್ದಲು ಹಿಡಿದಿದೆ 

ಮುನಿಸು ತರವಲ್ಲ ಮುಗ್ಧ ಮನಸಿಗೆ -ತಿಳಿದರೂ ಈ ಸತ್ಯ ,

ಕೇಳದು   ಮನಸು ... ಎಂದೂ ಇಲ್ಲದ ಹಠವ ಹಿಡಿದಿದೆ

ನಿನ್ನ ಮನದಲಿ ನಾನಿರುವೆನೇ ,

ನಿನ್ನ ಒಲವ ಹಕ್ಕು ನನಗೆ ಮೀಸಲೇ ,

ಈ ಪ್ರೀತಿಯು ನಿನಗೆ ನಿರ್ಜೀವ ಆಟಿಕೆಯೇ . . .

ಪ್ರಶ್ನೆಗಳು ಹಲವು ಮನವ  ಕಾಡುತಿದೆ ,

ನಿನ್ನ ಅಸಡ್ಡೆಯ ಮಾತುಗಳ ಮಾರ್ದನಿ

ಮನದಲಿ  ಬಿರುಗಾಳಿಯ ಎಬ್ಬಿಸಿರೆ ,

ನಿರ್ಲಕ್ಷ್ಯದ ಆ ನೋಟ ಅಂಕುಶವಾಗಿ ತಿವಿಯುತಿದೆ ,



ಗರ್ವದ ಹೊರೆ ಒಲವ ಸೇತುವೆಯ ಜಗ್ಗುತಿರೆ ,
ಸನಿಹವಿದ್ದರೂ ಮನಗಳು ದೂರ   -   ಬಹು ದೂರ ಸಾಗಿದಂತಿದೆ

ನಿರ್ಲಿಪ್ತ ನಿನ್ನ ಭಾವ ಮನವ  ಹಿಂಡುತಿದೆ



ಬಿಚ್ಚಿಡು ಒಮ್ಮೆ ನಿನ್ನ ಮನದ ಬುತ್ತಿಯ ,

ನಗುವಿನಲಿ ಜೊತೆಯಾದ ಮನಸಿಗೆ , ಅಳುವಿನಲಿ ಪಾಲು ಹಂಚಿನೋಡು

ಬಾಳು ಒಂದು ಸುಂದರ  ಕಗ್ಗಂಟು   . . .

ಏಕಾಂಗಿ ನೀನಲ್ಲ ,
ಜೊತೆಯಾಗಿ ಬಿಡಿಸೋಣ ಅದರ ಪ್ರತಿಯೊಂದು ಒಗಟು . . .



ಈ ಮೌನ , ಈ ನಿರಾಶೆ  , ಈ ಅಪನಂಬಿಕೆ . . .

ತಿಳಿಯೆಯಾ  ಇದರ ಪರಿಣಾಮ . . . ?

ಕವಲೊಡೆಯಬೇಕೇ  ನಮ್ಮ ದಾರಿ . . . ?

ಇಲ್ಲವೇ ,
ಮರಳಿಸುವೆಯಾ ನಮ್ಮ  ಪ್ರೀತಿ ಅಪರಂಜಿಯ  . . . ?

ಬಿಡುವೆನೆಂದರೂ ಬಿಡದ ಮಾಯೆ  ನಿನ್ನದು,

ಮರಳಿಸುವೆಯಾ ಆ ಮೋಹ ,
ನಮ್ಮ  ಪ್ರೀತಿ ಅಪರಂಜಿಯ  . . . ?

ಕಾಯುತಿರುವೆ ನಿನ್ನ ಉತ್ತರ . . .


ಕಾಯುತಿರುವೆ ನಿನ್ನ ಉತ್ತರ . . .

-ಪ್ರಜ್ಞಮಾಲಾ