Saturday 17 August, 2013

ಹಣತೆ


ಹಣತೆ 

ಬೆಳಗಿಸಿರುವೆ ಒಲವ ಹಣತೆ ಎಂದಿನಿಂದ ,
ಕಾಯುತಿರುವೆ ಶ್ರದ್ಧೆಯಲಿ ಬಹು ನಿರೀಕ್ಷೆಯಿಂದ  . . . 
ಕನಸುಗಳ ಶುಭಾರಂಭವು ನಿನ್ನಿಂದ  ,
ವಿಶ್ವಾಸದ ಮುಗುಳ್ನಗೆಯು ನಿನ್ನಿಂದ ,

ಈ ಮಿಡಿತ-ತುಡಿತಗಳೂ ನಿನ್ನಿಂದ . . .
ಒಲವ ಈ ಸುಂದರ ಅನುಭಾವ,
ನಿನ್ನಿಂದ . . . 


 ಒಲವ ನನ್ನ ಪ್ರಪಂಚ ಪರಿಪೂರ್ಣ ನಿನ್ನಿಂದ ,
ನೀನೇ ಆಗಸ , ನೀನೇ ಸಾಗರ. . .
ಇದರ  ಆದಿ , ಅಂತ್ಯಗಳು ನಿನ್ನಿಂದ  . . . 
ಕೇವಲ ನಿನ್ನಿಂದ . . . 

 

ನನ್ನೆಲ್ಲಾ ಕೋಪವ ಸಹನೆಯಲಿ ಬಂಧಿಸುವ,
ಕ್ಷಣದಲೇ ನಗುವ - ಉಕ್ಕಿಸುವ 
ಮಾಯಗಾರನು ನೀನೇ  
ನನ್ನ ಅಳುವಿನ ಕಡಲ ಕಂಡವನೂ ನೀನೇ ,
ಭಾವಗಳ ಆಳ ಅರಿತವನೂ ನೀನೇ . . .  

ಬಾಳ ಪ್ರತಿ ಹಂತದಲಿ  ಸ್ಫೂರ್ತಿಯೂದವನು  ನೀನೇ ,
ಕ್ಷಣವೂ  ಸವಾಲಾಗಿ ಕಾಡುವವನೂ ನೀನೇ . . . 

ಮನಸಿನ ರಾಜ್ಯವ  ಆಳುವ ಅರಸನೂ ನೀನೇ ,
ಅರಿತಷ್ಟೂ ಆಗಂತುಕನಾಗಿ ದೂರ ಸರಿಯುವವನು ನೀನೇ  . . . 
ಒಂಟಿತನದ ಹತಾಶೆಯು,
ನಿರ್ಲಕ್ಷ್ಯದ ಕಂಪನವು , ವಿರಹದ ದುಸ್ಸ್ವಪ್ನವೂ ನೀನೇ  . . . 

ಓ ನನ್ನ ಒಲವೇ , 
 ಪ್ರೀತಿಯ ಪ್ರತಿ ಹಾಳೆಯ ಕಗ್ಗಂಟು - ನಿಘಂಟು ಎಲ್ಲವೂ ನೀನೇ . . .  

ಕುಳಿತಿಹೆನು  ನಿನ್ನ ಒಲವ ದ್ವಾರದಲಿ ನಾನು ,
ಕಂಗಳಲೇ ಹೊಸೆದಿರುವೆ ನಿನಗಾಗೆ ನನ್ನೆಲ್ಲಾ ಒಲವನು  ,

ಈ ಕಾಯುವಿಕೆಯು ನನ್ನ ಪರೀಕ್ಷೆಯೇನು ?
ಅಥವಾ 

 ಒಲವ ನಿನ್ನ ದಾರಿಯಲಿ  ನಾನು ನಿಶಿದ್ಧಳೇನು  ?
ಅಸ್ಪಷ್ಟ ನಿನ್ನ  ಭಾವದಲಿ - ನನ್ನ ಒಲವ ದಿಕ್ಕೆಡಿಸದಿರು ,

ಮೃದುವು ಈ ಮನಸು , 
ಕೋಪದಲಿ , ಮೌನದಲೇ ಚುಚ್ಚದಿರು . . . 

ಈ ವೇದನೆ ನನಗಿನ್ನೂ ಸಹ್ಯವಲ್ಲ . . . . 

ನನ್ನೀ ಒಲವು ಅಚಲ,
ಆಟಿಕೆಯೆಂದು ತಿಳಿಯದಿರು. . . 
  
ಕೊನೆಯ ನಿವೇದನೆಯು ನಿನಗೆ ,
ತೆರೆದಿಡು ಒಮ್ಮೆ ನಿನ್ನ ಮನಸನು ,
ತೋರಿಬಿಡು ನಿನ್ನ ಮನದಲಿ ನನ್ನ ಸ್ಥಾನವನು. . . 

ಅಳಿಸಿಬಿಡು ನನ್ನೆಲ್ಲಾ ಆತಂಕಗಳನು . . . 
ಮರೆಯಾಗಿಸು ನನ್ನೆಲ್ಲಾ  ಪ್ರಶ್ನೆಗಳನು 

ನಿವೇದನೆಯು ನಿನಗೆ , ಹೇಳಿಬಿಡು  ಉತ್ತರ . . .
ಮನದ ಕದವ ತೆರೆದು ,ಬೆಳದಿಂಗಳ ಪಸರಿಸುವೆಯಾ ,
ಆಸೆಯ-ಗರಿಗಳುದುರಿಸುವ  ಬಿರುಗಾಳಿಯಾಗುವೆಯಾ  . . . 
ಕಾಯುತಿರುವೆ ನಿನ್ನ ಉತ್ತರ . . . 

ಜೊತೆಯಾದರೆ ಉಸಿರಿನಲಿ ಉಸಿರಾಗುವೆ ಅನುಕ್ಷಣ ,
ಇಲ್ಲದಿರೇ 
ಗೆಳತಿಯಾಗಲಾರೆ , ಬಾಳ  ಮುಳ್ಳಾಗಲಾರೆ 
ಎಂದೂ ಇರದಂತೆ  ಅದೃಶ್ಯವಾಗುವೆ ಇದೇ ಕ್ಷಣ . . . 

ನಿವೇದನೆಯು ನಿನಗೆ , ಹೇಳಿಬಿಡು ನಿನ್ನ  ಉತ್ತರ . . . 

-ಪ್ರಜ್ಞಮಾಲಾ 

0 comments:

Post a Comment