"ಭೂತಾಯಿ "
ಕಾಂಚಾಣದ ಮಹಿಮೆ ಎಲ್ಲೆಡೆಯೂ ,ಎಲ್ಲರಲೂ ಬೇರೂರಿ ಕುಣಿಯುತಿಹುದು,
ಮಾನವನ ವಿಕೃತ -ವಿಕಟ ಆಟಗಳೆಲ್ಲವನು ,
ತನ್ನೆಲ್ಲಾ ಆಕ್ರಂದನವನು ಸಹಿಸುತ ಸ್ತಬ್ಧಳು ಅವಳು
ಉರುಳುತಿಹ ಗಾಲಿಗಳು ,
ಹೊಗೆಯುಗುಳುತಾ ಚೀರುತಿಹ ಯಂತ್ರಗಳು ,
ಕುಕ್ಕುವ ನೋಟಗಳು
ತನ್ನೊಡಲ ಬಗೆಯುತಿರೆ ,
ಭಾವರಹಿತ ನಗುವ ಕಂಗಳಲಿ ತುಂಬಿ,
ದಣಿದು- ಬಳಲಿದರೂ , ತನ್ನೆಲ್ಲಾ ಸತ್ವವ ಹೀರಿ ರಾರಾಜಿಸಿದರೂ
ಕ್ಷಮಿಸುತಿಹಳು ಪ್ರತಿ ಬಾರಿಯೂ . . .
ಸೆಟೆದು ನಿಂತರೆ ಆಕೆ ,
ಕೋಪದಲಿ ಕಂಪಿಸಿದರೆ ಒಮ್ಮೆ ,
ದಾಳ ಬೀಸಿದರೆ ಆಕೆ ,
ಧೂಳಿಪಟವು ಮಾನವನ ಆಟಗಳೆಲ್ಲವೂ . . .
ದೈನ್ಯನೋಟದಲಿ ಬೇಡುವ ಸರದಿ ಮಾನವನದು ಆಗ ,
ಬರಡು ಮನಕೆ ಕುರುಡು ಭಾವಗಳು ಎಂತು ಆಸರೆಯಾಗಬಲ್ಲವು ,
ಎಸಗಿದ ಪಾಪ-ಕರ್ಮಗಳೆಲ್ಲವೂ ರಕ್ಷಿಸದು ಅಂದು . . .
ಮುಕ್ತಳಾಗುವಳು ತಾಯಿ,
ನಿರ್ವಾಣ ಹಬ್ಬುವುದು ಎಲ್ಲೆಡೆಯೂ ,
ಚಿಗುರುವುದು ಹೊಸ ಚಿಗುರು ,
ಉದಯಿಸುವುದು ಹೊಸ ಪರ್ವವು . . .
ದುರಾಲೋಚನೆಯ ನಡುವೆ ದೂರಾಲೋಚನೆಯ ಸಮಯವಿದು ,
ಸಂರಕ್ಷಣೆಯ ಹಾದಿಯ ಈಗ ತುಳಿಯದಿರೆ ,
ಅಂತ್ಯ-ರಾಗದ ಜೋಗುಳವ ಹಾಡುತಾ , ನಿಪಾತಕೆ ತಳ್ಳುವಳು
ರಕ್ಷಕಿಯು , ಸಲಹಿ-ಪೋಷಿಸಿದ ಮಾತೆಯು,
ಚಂಡಿ -ಭಕ್ಷಕಿ ಆಗುವಳು ಆಗ . . .
-ಪ್ರಜ್ಞಮಾಲಾ
0 comments:
Post a Comment