Monday 6 May, 2013

ಗ್ರಹಣ


ಗ್ರಹಣ

ಬಯಸಿದಾಗ  ಸಿಕ್ಕಿತು
ನಿನ್ನ  ಮುನಿಸು - ಮೌನಗಳ  ಬಹುಮಾನ
ಬೇಡಿದಾಗ ನೀಡಿದೆ 
ಅವಮಾನ- ಬಿಗುಮಾನಗಳ ಸನ್ಮಾನ 



                   ಪ್ರೀತಿಸಿದವ ಬದಲಾದ , ಪ್ರೀತಿ ನಿಂತ ನೀರಾಯ್ತು ...

               ಜಟಿಲವಾದ ಸಂಬಂಧಗಳು , ಒಲವ ಕುಸುಮವ ಕರಟಿಸಿತು ... .

ಒಡೆದ  ಕನಸುಗಳ ರಾಶಿಯಲ್ಲಿ ,
ಬಿಕ್ಕುತ್ತಿದ್ದೆ  ನಿನ್ನ ನೆನಪಲ್ಲಿ ಅನುದಿನವು ನಾನು ... 

ದೂರವಾದೆ ...  ಅದೆಲ್ಲಿ ಮಾಯವಾದೆ ,
ಅಂಟಿಸಿ ಹೋದೆ ನನಗೇಕೆ ಒಂಟಿತನ ಛಾಯೆ ಅಂದು ನೀನು ? ...
 

ಉರುಳಿತು ಕಾಲ , ಚಿಗುರಿತು ನವ ಋತುಮಾನ ... 


ಮತ್ತೆ  ಪ್ರವಹಿಸಿತು  ಒಲವ ನೂತನ ಝರಿ ,



                              ಮಿಂದು-ನಲಿದು ನಗುತ್ತಿದ್ದೆ , 



                              ಮಾಸಿಸುತ್ತಿತ್ತು ಮನದ  ಗಾಯಗಳು, 


                                   ನನ್ನೀ ಸುಧಾಂಶುವಿನ  ಮಡಿಲಿನಲಿ 

ಬೆಳದಿಂಗಳ ನಗೆಯ ಹರಿಸಿ , ಜೇನ  ಸವಿಯ ಸ್ಫುರಿಸಿ,
 ಪಲ್ಲವಿಸಿತು  ಮಗದೊಮ್ಮೆ ಅನುರಾಗದ  ಸಿರಿ ...
ಸುಪ್ತ ಆಸೆಗಳಿಗೆ  ಬೀಸಿತು  ವಾಸ್ತವದ ತಂಗಾಳಿ ...


ಝೇಂಕರಿಸಿತು ನಿರೀಕ್ಷೆಗಳ ನೂತನ ಖನಿ,
ಅವನೇ ನನ್ನ ಬಾಳ ಕಣ್ಮಣಿ  ...



ಗ್ರಹಣದಂತೆ  ಹಿಂದಿರುಗಿದೆ  ಏಕೆ?...
ಹಳೆಯ ಕಿಡಿಯ  ಹೊಗೆಯಾಡಿಸಲು,

 ಪ್ರತ್ಯಕ್ಷವಾದೆ  ಈಗೇಕೆ ?

ಸಲ್ಲದ-ಒಲ್ಲದ ಹಳೆಯ ನೆನಪುಗಳು
ಹುಗಿದುಹೋಗಿಹವು 
ನಳನಳಿಸುವ  ಹೂಬನದಲ್ಲಿ ಇಂದು ..

ಭಾವರಹಿತ ನೆರಳು ಮಾತ್ರವೇ ನಿನಗಾಗಿಗೆಯೇ ಚಾಚಿಹುದು ,
ನನ್ನ ಕಣಕಣಗಳಲ್ಲಿ  ಇಂದು...

ಉರುಳಲಾರೆ ಹಳೆಯ ಗಾಲಿಯ ಕಟ್ಟಿ
ನಿನ್ನ  ಜೇಡನ ಬಲೆಗೆ ಮತ್ತೆ ನಾನು....


"ಕಲ್ಮಷ " ಪ್ರೀತಿಯ ನಾಟಕವ ನಿಲ್ಲಿಸು,

ಆಡದಿರು ಚದುರಂಗದಾಟವ ನನ್ನ ಬಾಳಲಿ ಮತ್ತೆ  ನೀನು...

ದೂರವಾಗಲಾರೆ, ಮಾಯವಾಗಲಾರೆ. . . 

ಈಗೇಕೆ  ಅಂದಿನಂತೆ ಮತ್ತೆ ನೀನು?
ದೂರವಾಗಲಾರೆ ,ತೊರೆದು ಹೋಗಲಾರೆ  
ಈಗೇಕೆ  ಅಂದಿನಂತೆ ಮತ್ತೆ ನೀನು?...




-ಪ್ರಜ್ಞಮಾಲಾ

0 comments:

Post a Comment