Monday 6 May, 2013

ಕೋಪ

ಕೋಪ 



ಪ್ರೀತಿ ಅನಂತವಾಗಿದೆ ,

ಆಸೆಯ ಕನಸುಗಳು ಅಗಣಿತ ತಾರೆಯಾಗಿವೆ ,



ಪ್ರೀತಿ ಸಾಗರದಷ್ಟಿದ್ದರೂ ,

ಆಸೆಗಳು ಮುನಿಸಿನ ಪರದೆಯಲಿ ಮರೆಯಾಗಿವೆ . . .

ಕೋಪ ಮನಸಲಿ ನೆಲೆ ಮಾಡಿದೆ ,

ನಂಬಿಕೆಯ ಬುನಾದಿಗೇ  ಗೆದ್ದಲು ಹಿಡಿದಿದೆ 

ಮುನಿಸು ತರವಲ್ಲ ಮುಗ್ಧ ಮನಸಿಗೆ -ತಿಳಿದರೂ ಈ ಸತ್ಯ ,

ಕೇಳದು   ಮನಸು ... ಎಂದೂ ಇಲ್ಲದ ಹಠವ ಹಿಡಿದಿದೆ

ನಿನ್ನ ಮನದಲಿ ನಾನಿರುವೆನೇ ,

ನಿನ್ನ ಒಲವ ಹಕ್ಕು ನನಗೆ ಮೀಸಲೇ ,

ಈ ಪ್ರೀತಿಯು ನಿನಗೆ ನಿರ್ಜೀವ ಆಟಿಕೆಯೇ . . .

ಪ್ರಶ್ನೆಗಳು ಹಲವು ಮನವ  ಕಾಡುತಿದೆ ,

ನಿನ್ನ ಅಸಡ್ಡೆಯ ಮಾತುಗಳ ಮಾರ್ದನಿ

ಮನದಲಿ  ಬಿರುಗಾಳಿಯ ಎಬ್ಬಿಸಿರೆ ,

ನಿರ್ಲಕ್ಷ್ಯದ ಆ ನೋಟ ಅಂಕುಶವಾಗಿ ತಿವಿಯುತಿದೆ ,



ಗರ್ವದ ಹೊರೆ ಒಲವ ಸೇತುವೆಯ ಜಗ್ಗುತಿರೆ ,
ಸನಿಹವಿದ್ದರೂ ಮನಗಳು ದೂರ   -   ಬಹು ದೂರ ಸಾಗಿದಂತಿದೆ

ನಿರ್ಲಿಪ್ತ ನಿನ್ನ ಭಾವ ಮನವ  ಹಿಂಡುತಿದೆ



ಬಿಚ್ಚಿಡು ಒಮ್ಮೆ ನಿನ್ನ ಮನದ ಬುತ್ತಿಯ ,

ನಗುವಿನಲಿ ಜೊತೆಯಾದ ಮನಸಿಗೆ , ಅಳುವಿನಲಿ ಪಾಲು ಹಂಚಿನೋಡು

ಬಾಳು ಒಂದು ಸುಂದರ  ಕಗ್ಗಂಟು   . . .

ಏಕಾಂಗಿ ನೀನಲ್ಲ ,
ಜೊತೆಯಾಗಿ ಬಿಡಿಸೋಣ ಅದರ ಪ್ರತಿಯೊಂದು ಒಗಟು . . .



ಈ ಮೌನ , ಈ ನಿರಾಶೆ  , ಈ ಅಪನಂಬಿಕೆ . . .

ತಿಳಿಯೆಯಾ  ಇದರ ಪರಿಣಾಮ . . . ?

ಕವಲೊಡೆಯಬೇಕೇ  ನಮ್ಮ ದಾರಿ . . . ?

ಇಲ್ಲವೇ ,
ಮರಳಿಸುವೆಯಾ ನಮ್ಮ  ಪ್ರೀತಿ ಅಪರಂಜಿಯ  . . . ?

ಬಿಡುವೆನೆಂದರೂ ಬಿಡದ ಮಾಯೆ  ನಿನ್ನದು,

ಮರಳಿಸುವೆಯಾ ಆ ಮೋಹ ,
ನಮ್ಮ  ಪ್ರೀತಿ ಅಪರಂಜಿಯ  . . . ?

ಕಾಯುತಿರುವೆ ನಿನ್ನ ಉತ್ತರ . . .


ಕಾಯುತಿರುವೆ ನಿನ್ನ ಉತ್ತರ . . .

-ಪ್ರಜ್ಞಮಾಲಾ


0 comments:

Post a Comment