ಇಹುದು ಅಲ್ಲೊಂದು ಸುಂದರ ನಾಡು ,
ಪ್ರೀತಿ ,ಮುಗ್ಧತೆಯ ಬೀಡು . . .
ಕಣ್ತಣಿಸುವ ಹಸಿರ ಸಾಲು ,
ಹರಿವ ನದಿಯ ಇಂಪಾದ ಹಾಡು,
ಆ ತಂಪು ಗಾಳಿ ,
ಕುಣಿದು -ನಲಿಯುತಿಹ ವನ್ಯ ಜೀವಿ . . .
ಇಹುದು ದೂರ -ಬಹು ದೂರದಲ್ಲೊಂದು ಸುಖದ ಬೀಡು,
ಕಲ್ಮಶಗಳೇ ಅರಿಯದ ಸ್ವಚ್ಛಂದ ನಾಡು . . .
ಅಳದಿರು ನನ ಕಂದಾ . . .
ಮಲಗೋ ನನ ರನ್ನ . . .
ಇಹುದು ದೂರದಲ್ಲೊಂದು ವಿಸ್ಮಯಗಳ ನಾಡು . . .
ಕಾರಣವ ಅರಿಯದ ಹುಟ್ಟು ನಮದು,
ಏಕೆ , ಏನೆಂದು ಗುರಿ ಇಲ್ಲದೇ ಸಾಗುತಿಹೆವು ನಾವು . . .
ಹುಟ್ಟಿದ ಮಗುವಿನಲಿ ದೋಷವೆಲ್ಲುಂಟು . . . ?
ಹಸುಗೂಸು, ನಿನ್ನ ತೆಗಳಿದರೆ ಏನು ಬಂತು . . . ?
ಬೆಳೆದ ಬಿದಿರ ರಂಧ್ರಗಳೇ ,ಅದರ ಗಾನದ ಮೂಲ,
ಬೆಳೆಯುತಾ ಕಲಿತ ಪಾಠಗಳೇ ನಿನ್ನ ಬಾಳಿನ ಮೂಲ . . .
ಕರಿಮೋಡಗಳೇ ಆಸರೆ ವಸುಧೆಯ ಜೀವಕೆ,
ಬರಡು ಮರವೇ ನಾಂದಿ ನವ ಋತುಮಾನಕೆ . . .
ಅಳದಿರು ನನ ಕಂದಾ . . .
ಮಲಗೋ ನನ ರನ್ನ . . .
ಇಹುದು ಅಲ್ಲೊಂದು ಸುಂದರ ನಾಡು ,
ನೆಮ್ಮದಿಯ ಬೀಡು . . .
ಹುಟ್ಟು - ಸಾವಿನ ನಡುವಲ್ಲಿ ಇಹುದು ಸಣ್ಣ ವಿರಾಮ,
ಆ ವಿರಾಮದಲ್ಲೇ ಅಡಗಿಹುದು ಈ ಜೀವನ . . .
ಕಾರಣಗಳ ಒಗಟನ್ನು ಬಿಡಿಸೆ ,
ಅನುಭವಿಸುವೆ ನೀ ಸಾರ್ಥಕತೆಯನ್ನ ,
ಇದರ ಸಾರವನ್ನ . . .
ದೇವನ ಪ್ರತಿ ಸೃಷ್ಟಿಯೂ ರೋಚಕ,
ಅಡಗಿಹುದು ಪ್ರತಿಯೊಂದರಲೂ ಸೌಂದರ್ಯ . . .
ಈ ಕಣ್ಣುಗಳು ಸೋತಿಹುದು ಅರಿಯಲು
ಅವನ ಮರ್ಮವನ್ನ . . .
ಕಣ್ತೆರೆದ ಕಾರಣವೇನು . . . ?
ಈ ಇರುವಿಕೆಯ ಧ್ಯೇಯವೇನು . . . ?
ಪ್ರಶ್ನೆಗಳ ಸುಳಿವಲ್ಲೇ ಅಲೆಯುತಿಹೆವು ನಾವು
ಅಳದಿರು ನನ ಕಂದಾ . . .
ಮಲಗೋ ನನ ರನ್ನ . . .
ಇಹುದು ಅಲ್ಲೊಂದು ಸುಂದರ ನಾಡು,
ನಲ್ಮೆಯ ಬೀಡು . . .
ಕರುಣೆಯ ಕಡಲಿಹುದು ,
ಆದರ್ಶಗಳ ನೆಲೆ ಇಹುದು,
ಪ್ರೀತಿ - ವಿಶ್ವಾಸಗಳೇ ತುಂಬಿಹುದು,
ದೂರದಲ್ಲಿಹುದು ಆ ನೆಮ್ಮದಿಯ ಗೂಡು . . .
ಅಳದಿರು ನನ ರನ್ನ . . .
ಮಲಗೋ ನನ ಕಂದಾ . . .
ವಿಹರಿಸು, ಆನಂದಿಸು ವಿಸ್ಮಯದ ಸವಿ-ನಾಡಲ್ಲಿ ,
ಕನಸುಗಳ ಆ ಸುಂದರ ಬೀಡಲ್ಲಿ . . .
ಮಲಗೋ ನನ ಕಂದಾ ... ಓ ನನ ಚಿನ್ನಾ . . .
ಮಲಗೋ ನನ ಕಂದಾ ... ಓ ನನ ರನ್ನಾ . . .
-ಪ್ರಜ್ಞಮಾಲಾ
0 comments:
Post a Comment