Tuesday, 12 August 2014

ಕ್ಷಮೆ

ಕ್ಷಮೆ

 ಎಲ್ಲರಲೂ ಇಹುದು ಈ ಸುಪ್ತ ಕೋಣೆ. . . 

ಮನದ ಮೂಲೆಯಲ್ಲೊಂದು ಕತ್ತಲೆಯ ಕೋಣೆ,
ಏನೆಲ್ಲಾ ಅಡಗಿದೆಯೋ ನಾನಂತೂ ಕಾಣೆ . . .

ಕದವ ತೆರೆದೆ ನೀನು ,ಕುತೂಹಲದಿ ಇಣುಕಿದೆ  ನಾನು ... 
ಕಂಡೆ ಸುಂದರ ಸ್ವಪ್ನಗಳ ಬೃಂದಾವನ ,
ಸಾಧಿಸುವ ಸ್ಥೈರ್ಯ --ಅದೆಂತಹಾ ಕೆಂಪು ಕಿರಣ ,
 
ರಾಗ ,ದ್ವೇಷ ,ಮೋಹ ,ಪಾಶ ---ಕಳಚಿ ಎಲ್ಲ ಕೃತಕ ವೇಷ ,
ತೋರಿದೆ ನಿನ್ನ ಕೋಮಲ ನಿಜ ಸ್ವರೂಪ 

ಆ ಹಳೆಯ ನೆನಪುಗಳ ಮಂಥನ...
ಕಂಡೆ ಎಳೆಯ  ಕಂದಮ್ಮನ ಆಕ್ರಂದನ . . .


ಕುತೂಹಲ ಹೆಚ್ಚಿತು ನನಗೆ,
ಬಿರಿಯಿತು  ಸಂಯಮ-ಜ್ಞಾನದ ಪರದೆ. . . 
"ಇಷ್ಟಿರುವುದ " ಅಷ್ಟು ಮಾಡಿ . . . 
ಇರುವೆಯನ್ನೂ "ಆನೆ " ಮಾಡಿ . . .
ಮೀಟಿದೆ ನಾ ನಿನ್ನಲಿ "ಅಪಸ್ವರ"ದ ವೀಣೆ 

ಕ್ಷಣಗಳಲ್ಲೇ ಬದಲಾಯಿತು ಆ  ಸುಂದರ ಸಲ್ಲಾಪ ,
ಮಿಂಚಂತೆ ಸುಳಿಯಿತು ನಿನ್ನಲಿ ನೋವಿನ ಸೆಲೆ . . . 

ಆಡಿ ಹೋದ ಮಾತುಗಳು  ಹಿಂದಿರುಗಲಾರದು ,
ನಿನ್ನ ನೋವಿಗೆ ನನ್ನ ಮನವಿ ಮದ್ದಾಗಲಾರದು . . . 

ಆದರೂ  ಬೇಡುತಿರುವೆ ನಾ ನಿನ್ನಲಿ ಕ್ಷಮೆ ,
ದಯಮಾಡಿ ಮನ್ನಿಸು.... 
ಕರುಣಿಸು ಮತ್ತದೇ 
ಸ್ನೇಹ-ವಿಶ್ವಾಸದ ಸುಂದರ ಬೆಸುಗೆ . . . 
-ಪ್ರಜ್ಞಮಾಲಾ


  



0 comments:

Post a Comment