Saturday, 30 June 2012

ಕನಸು


ಕನಸು
ಒಲವ  ಕನಸು ನನಸಾಗಿದ್ದರೆ, ಎಷ್ಟು ಸುಂದರವಿತ್ತೋ   ಗೆಳೆಯ ...

ನಿನ್ನ ಪ್ರೀತಿಯಲಿ ಅರಳುತ್ತಿದ್ದೆ ,
ಮಾತುಗಳ ಇಂಪನು ಸವಿಯುತ್ತಿದ್ದೆ  , 
  ನಗುಮೊಗವ ಕಂಗಳಲೇ  ಇರಿಸುತ್ತಿದ್ದೆ  ,


 ಮಾತಿನ ಮೋಡಿಯಲಿ  ನಿನ್ನ ಸೆಳೆಯುತ್ತಿದ್ದೆ ,
ಸನಿಹತೆಯ ಸಮ್ಮುದಕೆ ಬೆರಗಾಗುತ್ತಿದ್ದೆ,
ನವಿರೇಳಿಸುವ ಸ್ಪರ್ಶಕೆ  ನಲಿಯುತ್ತಿದ್ದೆ, 
ಮನದುಂಬಿ ನಿನ್ನನೇ  ಆರಾಧಿಸುತ್ತಿದ್ದೆ...  

ಮನದ ಇಂಗಿತವು, 
ಪ್ರೇಮ ನಿವೇದನೆಯು 
ಕನಸಾಗಿಯೇ  ಉಳಿಯುತ್ತಲ್ಲೋ  ಗೆಳೆಯ ! ...




Monday, 25 June 2012

ಇಷ್ಟ


ನೀ ಇಷ್ಟವೋ ಎನಗೆ , 
                              ನಿನ್ನ ಮನಸು ಬಲು ಇಷ್ಟವೋ  ಓ ಹುಡುಗ ....
 

ನಡೆವಾಗ  ಹಾಗೆಯೇ  ಕೈ-ಹಿಡಿವ  ಪರಿ ಇಷ್ಟವೋ ಎನಗೆ ..
ನನಗಾಗೆ ಅರಸುವ ಆ ಕಣ್ಣುಗಳ  ಹೊಳಪು ಇಷ್ಟವೋ  ...

ಎದೆಯ ತಾಳ ತಪ್ಪಿಸುವ ..

                              ಆ  ಕಂಚಿನ ಕಂಠ ಇಷ್ಟವೋ ಎನಗೆ ...
ಬೇಸರವ ಮರೆಸುವ ನಿನ್ನ  ಅಪ್ಪುಗೆಯು  ಇಷ್ಟವೋ  ...
 

ಕೋಪವ ಕರಗಿಸುವ ಆ ಮೌನ  ಇಷ್ಟವೋ ಎನಗೆ  ...
                              ಪಿಸುಮಾತಲೇ  ನಗಿಸುವ ಆ ಪರಿಯು ಇಷ್ಟವೋ...

ನೀ ಇಷ್ಟವೋ ಎನಗೆ
ಓ ಹುಡುಗ
                              ನಿನ್ನ ಮನಸು ಬಲು ಇಷ್ಟವೋ ...
                                                          
                                 

Saturday, 23 June 2012

ಸ್ವಚ್ಛಂಧ


ತೃಪ್ತಿಯ ಅಲೆ ಮನದಲಿ ಮೂಡಿಹುದು ಇಂದು ,
ನವ್ಯ ರಾಗವ ಮನ ಗುನುಗುತಿಹುದು  ಇಂದು,
ಕರಿ-ಮೋಡ ಸರಿದು ... ತಾರೆಗಳು ಮಿನುಗುತಿಹವು  ಇಂದು,
ನೀಲಾಕಾಶದಲಿ  ಸ್ವಚ್ಛಂಧ ಹಕ್ಕಿಯಾಗಿ ,
ಹಾರಲು  ಬಯಸಿಹುದು ಮನವಿಂದು....


 

ತಳಮಳ




ಎದೆಯ ಗೂಡಿನಲ್ಲಿ ಬೆಚ್ಚನೆ ಬಚ್ಚಿಟ್ಟಿರುವೆ
ನಿನ್ನನು ಬಹು ದಿನಗಳಿಂದ . .

ಇಂದೇಕೋ  ಅನಿಸುತಿದೆ
  ಮುರಿಯುವುದು ನನ್ನೀ ಒಲವ ಆಶ್ರಯ,
 
ತುಂಬುವುದು ಕೇವಲ ಶೂನ್ಯ. . .

ಬಿಚ್ಚಿಡಲಿ ಹೇಗೆ ನಿನ್ನೆದುರು ನನ್ನ  ಅನುರಾಗವ?
ನೋಡಲಾಗದೇ  ನನ್ನ ಕಂಗಳಲ್ಲಿ  ತುಂಬಿರುವ ನಿನ್ನ ಛಾಯೆಯ ?
ಅಥವಾ...
ಕೇಳಿಬಿಡಲೇ   ಕಾಡುವ ಈ ಕಠಿಣ   ಪ್ರಶ್ನೆಯ . . .
"ದೂರವಾಗಿ ಮರೆಯುವೆಯಾ ,

ಅಥವಾ
ಮರೆಯಲೆಂದೇ  ದೂರವಾಗುವೆಯಾ ?"
ಹೇಳಿಹೋಗು ನಿನ್ನ ಉತ್ತರ . . .
                                                                                                         

Monday, 11 June 2012

ಸಖ

"ಸಖ" 

ದೀಪವ ಬೆಳಗುವ ಜ್ಯೋತಿ ನನ್ನವನು ...
ಮಾತಿನ ರಾಗಕೆ ಮೌನದ ಲಯ ನನ್ನವನು  ...
ಮನದ ದುಗುಡವ ಮರೆಸುವ ತಂಗಾಳಿ ನನ್ನವನು ...
ಮೌನದಲೇ ಮೆರೆದು ..ಕಂಗಳಲೇ ಸೆಳೆದು,
ಮನವನಾಳುವ ಒಡೆಯ  ನನ್ನವನು  ...

ಭಾವಗಳ ಸ್ಪೂರ್ತಿ ...ಪ್ರೇಮದರಸ ನನ್ನವನು 
ಸಂತಸದ ಅಲೆಯಲಿ, ದುಃಖದ ರಭಸದಲಿ,
ನನ್ನ ಶಕ್ತಿ ...ಅನುರಕ್ತಿ ನನ್ನವನು  . . .
                                                                       

 

Sunday, 10 June 2012

" ಕಡಲು "



ಸಾಗರದ ಲೀಲಾ-ಜಾಲದಲ್ಲಿ ಅಡಗಿಹುದು ಅರ್ಥಗಳು ಹಲವು...
ಬಿಡಿಸಿದಷ್ಟು ಒಗಟುಗಳ ಹೆಣೆಯುವುದು ಕಡಲು ...
ಸಮ್ಮುದ-ಉತ್ಸಾಹಗಳ ಒಡಲು ಒಂದೆಡೆಯಾದರೆ ,
ದುಗುಡಗಳ  ಆರ್ಭಟವು ಭರತ-ಇಳಿತದಲ್ಲಿಹುದು...

ಪ್ರಕೃತಿಯ ಸಹಜತೆಯಲಿ  ಅಡಗಿಹುದು 
ರಹಸ್ಯಗಳು ಹಲವು,
ಕಂಡಷ್ಟೂ ಅಗಮ್ಯ , ತಿಳಿದಷ್ಟೂ ಅನಂತ ,
ಈ  ವನಧಿ ಸದಾ ಅನನ್ಯವು  .... 

Monday, 4 June 2012


ದೂರ ಸರಿದ್ದಿದ್ದೆ ನೀನು ನನ್ನಿಂದ . . .
ದಿನವೂ ನರಳಿಸಿದ್ದೆ ನಿನ್ನ ನೆನಪುಗಳಿಂದ...
ಭಸ್ಮವಾಗಿಸಿದ್ದೆ ನನ್ನ ಕನಸುಗಳ ನಿನ್ನ ಹಠದಿಂದ...

 
ಕಳೆಯಿತು ಕಾಲ , ಚಿಗುರೊಡೆಯಿತು  ನವ -ಪರ್ವ
ಶಿಥಿಲ ಮನಸಿಗೆ  , ನೊಂದ ಜೀವಕೆ  ಮೂಡಿತು ನವ-ಆಶಯ
ಬಿಗಿದಪ್ಪಿತು ಏಕಾಂತದ ಸಮ್ಮುದ...




ಮತ್ತೇಕೆ ಬಂದೆ ನೀ ಬಿರುಗಾಳಿಯಾಗಿ ?
ಬಿರುಕುಗಳ ಸೀಳುವ ಅಂಕುಶವಾಗಿ ?
ನೂಕುತಿರುವೆ  ಮತ್ತದೇ  ನರಕಕೆ  ಜವನಾಗಿ ? . . .

Saturday, 2 June 2012

"ಅನುರಾಗ" : ನಾವು ಪ್ರೀತಿಸುವ ಹೃದಯ ನಮ್ಮನ್ನು ಅಷ್ಟೇ ತನ್ಮಯತೆಯಿಂದ ಪ್ರೀತಿಸಿದಾಗ .... ನಮ್ಮೆಲ್ಲ ಸೂಕ್ಷ್ಮಭಾವನೆಗಳ -ನಿಗೂಢತೆಯ ರಹಸ್ಯ ಅರಿತಾಗ ಮನಸಿನಲಿ ಮೂಡುವ ಅನುರಾಗ


ನನ್ನಯ ಕಣ್ಣಿನ ಮಿನುಗು ತಾರೆಯು ನೀನು ,
ಭಾವಗಳ ವ್ಯೂಹವ ಭೇದಿಸಿದೆ ನೀನು,
ಚಂಚಲ ಮನದ "ಅಚಲ"ತೆಯು ನೀನು ,

ಹುಸಿಗೋಪದಲಿ ಅಡಗಿರುವ ಮೋಹಕತೆಯು  ನೀನು ,
ಸ್ವಾರ್ಥದ ಮರೆಯಲಿರುವ ಪ್ರೇಮವು ನೀನು ....
ಅರಿತರೂ ಮುಗ್ಧನೂ.... ಬಲು ಜಾಣ ನೀನು

ಅನು"ರಾಗ"ದ ಮಾರ್ದನಿಯು ಇದು ... ಅದೆಷ್ಟು ಮಧುರ...

ರಾಧೆಯು ನಾನಾಗೆ , ಮಾಧವ ನೀನಲ್ಲವೇನು ?