Sunday, 10 July 2011

ಸ್ವಪ್ನ-ಸಖ


ಬಯಸಿಹೆನು ಗೆಳೆಯನ
ಆ ಒಂದು ಒಲುಮೆಗೆ,
ಅನನ್ಯ ಪ್ರೀತಿಗೆ,
ಅಗಮ್ಯ ವಿಶ್ವಾಸಕೆ,
ನಿಷ್ಕಲ್ಮಶ ಸ್ನೇಹಕೆ,
ನನಗಾಗಿಯೇ ಮಿಡಿಯುವ ಸಹೃದಯಕೆ

ಬಯಸಿಹೆನು ಗೆಳೆಯನ
ಎನ್ನ ಮನದಾಳದ ಭಾವನೆಗಳ ಸ್ಪಂದನೆಗೆ
ತಪ್ಪುಗಳ ತಿದ್ದುವ ಬಿರುನುಡಿಗಳಿಗೆ
ದುಃಖದಲಿ ಸಂತೈಸುವ ಸಂಯಮಿಗೆ
ಆತ್ಮವಿಶ್ವಾಸವ ಮೂಡಿಸುವ ಚೇತನದ ದೀವಿಗೆಗೆ
ಸಂತಸದಲಿ ಬಿಗಿದಪ್ಪುವ ನಿರುಪಮ ಅನುರಾಗಕೆ

ಬಯಸಿಹೆನು ಗೆಳೆಯನ
ಬಾಳ ನಿಕಷದಲಿ ಜೊತೆಯಾಗುವ ನೇತಾರನಿಗೆ
ಅಗೋಚರ ನಿಲುವುಗಳಲಿ ಸಾರಥಿಯಾಗುವ ಸುಧಾಂಶುವಿಗೆ
ಬಾಳ ಬೇಗುದಿಯಲಿ ,ತಂಗಾಳಿಯ ಬೀಸುವ ಶಿಶಿರನಿಗೆ
ಪಿಸುಮಾತಿನ ಅಲೆಗಳಲಿ ನಗಿಸಿ-ನಲಿಸುತಾ ಆನಂದಿಸುವ ಕಣ್ಮಣಿಗೆ

ಕಾದಿಹೆನು ನಾ ...
ಆ ಆಗಂತುಕನಿಗೆ ,
ನಲ್ಮೆಯ ಗೆಳೆಯನಿಗೆ ,
ಬಾಳ ಕರ್ತಾರನಿಗೆ ,
ಬಾಳ ನೌಕೆಯ ನಾವಿಕನಿಗೆ ...

                                                                  -ಪ್ರಜ್ಞಮಾಲಾ



0 comments:

Post a Comment