Sunday, 4 December 2011

ಮೌನರಾಗ : ಮಾತು ಇಲ್ಲದಿರಲು ಮೌನಕ್ಕೆ ಬೆಲೆ ಉಂಟೆ ... ಮನಸೇ ಕಲ್ಲಾಗಿರಲು ಪ್ರೀತಿಗಲ್ಲಿ ಸ್ಥಳವುಂಟೆ.........


ಮೌನರಾಗ 
 

ಮಾತುಗಳೂ ಸರಿ, ಮೌನವೂ ಸರಿ ...

ಆತನ ಗೊಂಬೆಗಳು ನಾವು,
ಇದೇ ಈ ಬದುಕಿನ ಪರಿ ...
ದ್ವಂದಗಳ ಮಬ್ಬಿನಲಿ
ಅತ್ತ ವಾಲುವ ಮನವು, ಇತ್ತವೂ ವಾಲುವುದು ...
ಒಮ್ಮೆ ಮಾತಿನಲಿ ಜಯಿಸಿದರೆ ,
ಮಗದೊಮ್ಮೆ ಮೌನದಲೇ ಸಾಧಿಸುವುದು ...

ಪ್ರೀತಿ  ಭಾವ- ಪ್ರಧಾನ
ಕಂಗಳೇ ಅದರ ಸಾಧನ . . .

ಮಾತುಗಳು ಟೊಳ್ಳಾಗಬಹುದು   ,

ಮೌನವೂ ಸುಳ್ಳಾಗಬಹುದು,
ಮನಸಿನ ಕನ್ನಡಿ ಸುಳ್ಳಾಗದು ಗೆಳೆಯ ,
ಸೂಕ್ಷ್ಮದಲಿ ನೋಡು ಸೋದರ,
ಆಕೆಯನು ಬಂಧಿಸಿದ ಸಂಕೋಲೆಯ,
  ಸುಲೋಚನೆಯ ಅಪರಿಮಿತ  ಒಲುಮೆಯ ..

ದೂರ ಸರಿದರೇನು . . .
ಮಾತು ಮರೆತರೇನು ...
ಕರೆದು ನೋಡು ನಿನ್ನೊಮ್ಮೆ ,
ಕರಗದಿರಲು ಆಕೆ ಕಲ್ಲೇನು ?
ಅವಳುಸಿರು ನೀನೇ , ಜೀವಾಳ ನೀನೇ...
ಕೇಳಿಬಿಡು ಮತ್ತೊಮ್ಮೆ
ಈ ಬಿಗುಮಾನಕೆ ಕಾರಣವೇನು ?. . .
                                                            -ಪ್ರಜ್ಞಮಾಲಾ

A wonderful quote:"REMEMBER WHERE U CAME FROM ...WHERE U R GOING & WHY U CREATED THE MESS U R IN " My attempt to depict the above lines in a poem :


ಬದುಕೊಂದು ಜಟಕಾಬಂಡಿ 
ಆರಕ್ಕೇರಿದರೆ,ಮೂರಕ್ಕಿಳಿಯಲೇ ಬೇಕು
ಇದೇ ಬಾಳಿನ ಮುನ್ನುಡಿ ...

ನೆನ್ನೆಯ ದಿನಗಳ ಅನುಭವ ನೆನೆಯುತಾ ,
ಇಂದಿನ ದಿನದ ಪಾಠವ ಸವಿಯುತಾ,
ಮುಂದಿನ ದಿನಗಳ ಆಶೆಯ ಕಾಯುತಾ,
ಜಯದ ಸಿಹಿಯ ಪ್ರಜ್ಞೆಯಲಿ ಮೆರೆಯುತಾ,
ಸೋಲಿನ ಕಹಿಯ ಸ್ಥೈರ್ಯದಿ ಅಳಿಸುತಾ . . .

ಮರೆಯದಿರೆಂದೆಂದೂ . . .
ನೀ ಮಾಡಿದ ಕರ್ಮವ ,
ನೆನಪಿಡು ಎಂದೆಂದೂ
ನಿನದಾದ ಕಾರ್ಯವ. . .

ಬಾಳು ಸಾಗುತಿರೆ ಹೀಗೆ,
ನೀನೇರುವೆ ಸಾಧನೆಯ ಶಿಖರದೆತ್ತರವ
ನಿನ್ನವರ ಹಾರೈಕೆಯಲಿ ಸದಾ :)
-ಪ್ರಜ್ಞಮಾಲಾ. .


 

Saturday, 17 September 2011

ಪ್ರೀತಿ : ಪ್ರೀತಿಯ ಅನುಭೂತಿ ಅನನ್ಯವೂ ಹೌದು, ವಿಸ್ಮಯವೂ ಹೌದು... ಪ್ರೀತಿಸಿದ ಮನಸು ಚೂರಾದರೆ , ನಗುವ ತಂದ ಕನಸುಗಳೇ ಈಗ ಅಕ್ಷಿಗಳಲಿ ಹನಿಗಳ ತಂದರೆ. . .


ಪ್ರೀತಿಯ ಈ ವೇದನೆ
ಮಧುರವೋ?....
ಶಾಪವೋ ?...
ಮರೆಯ ಬಯಸಿದಷ್ಟು,
ಸನಿಹ ತರುವುದು ನೆನಪುಗಳ ಸುರಿಮಳೆ ...
ಸನಿಹ ಬಯಸಿದಷ್ಟು,
ದೂರ ತಳ್ಳುವುದು ವಿಧಿಯ ಸಂಕೋಲೆ ..
ಹೇಳು ಗೆಳೆಯ ,
ಪ್ರೀತಿಯ ಈ ವೇದನೆ
ಮಧುರವೋ?....
ಶಾಪವೋ ...???
                                                                       -ಪ್ರಜ್ಞಮಾಲಾ

Monday, 29 August 2011

"ಇಂತೇಕೆ ?" : ಸ್ನೇಹ ದ್ವೇಷವಾದಾಗ ... ಪ್ರೀತಿಸಿದ ಮನಸು ಹಗೆಯ ಮಹಾಪೂರ ಹರಿಸಿದಾಗ ... ...


ಆಗುವುದು ಹೀಗೇಕೆ?
ಕಾಲ-ಕಾಲಕ್ಕೆ ಬದಲಾಗುವುದು ಸಂಬಂಧದ ಎಳೆ ಇಂತೇಕೆ  ?. . .

ಆತ್ಮೀಯ ಅಯನದಲಿ,
ನಲ್ಮೆಯ ಪಯಣದಲಿ,
ಮಾತುಗಳೇ ಮಧುವಾಗಿ
ಬಂಧಿಸುವುದು ಸ್ನೇಹದ ನಂಟಿನಲಿ. . .

ಋತುಚಕ್ರ ಉರುಳುತಲಿ,
ಕಾಲನ ಸೆಣೆಸಾಟದಲಿ
ಹುಟ್ಟುವುದು ಹೇಗೆ ಈ ಮುಯ್ಯಿ ? . . .

ಕುತಂತ್ರದ ಜಾಲದಲಿ,
ವೈಸಿಕತೆಯ ಕಾವಿನಲಿ,
ಮಾತುಗಳೇ ಅಸ್ತ್ರವಾಗಿ
ಬಂಧಿಸುವುದು ದ್ವೇಷದ ಕಗ್ಗಂಟಿನಲಿ. . .

 
"ಬಯಸಿ ಬರುವ ಮಿತೃತ್ವದ ಸೆಲೆ ,
ಕೊನೆಗಾಗುವುದು ಶಬರನ ಬಲೆ "
ನೀವಾದರೂ ಹೇಳಬಲ್ಲಿರಾ ಹೀಗೇಕೆ ?
ಕೆಲವರ ಪರಿ ಇಂತೇಕೆ . . .?
                                                              -ಪ್ರಜ್ಞಮಾಲಾ

Wednesday, 24 August 2011

" ಚಿತ್ತ-ಚೋರ "


ಎಲ್ಲಿಹನು ಅವನು, ಹೇಳೆ ಸಖಿ ...
ಕಾಡಿಸುತಿರುವೆ ಹೀಗೇಕೆ ಗೆಳೆತಿ?

 
 ನನ್ನ ಪ್ರೇಮಕಥೆಯ ನಾಯಕನು ,
ನನ್ನೊಲವಿನ ಸರದಾರನು ,
  ಅನು"ರಾಗ"ದ ಗಾಯಕನು , 

  ಪ್ರೇಮ-ಯಾನದ ನಾವಿಕನು,
  ನನ್ನಿರುಳ ಬೆಳಗಿಸುವ  ಸುಧಾಂಶುವು,
ನನ್ನೊಡೆಯ...ನನ್ನ ಜೀವನದ ಅಧಿಪತಿಯು ...

ಈ ಪ್ರೇಮದ ಪರಿಯ ಇನ್ನೆಂತು ಬಣ್ಣಿಸಲಿ !
ಅವನ ಕಾಣುವ ತವಕ  ಇನ್ನೆಂತು ವರ್ಣಿಸಲಿ !

 
ಕುತೂಹಲ ಆಕರ್ಷಣೆಯಾಗಿ,
ಆಕರ್ಷಣೆಯು ನಶೆಯಾಗಿ ,

ಅಕ್ಷಿಗಳು  ಅವನ ರೂಪ  ಬಚ್ಚಿಡಲು  ಬಯಸುತಿವೆ
ಕರ್ಣಗಳು  ಅವನ  ಮಾತುಗಳ ಸವಿಯಲು ಮಿಡಿಯುತಿವೆ

ಕನಸುಗಳು ನನಸಾಗಲು ಹಂಬಲಿಸುತಿವೆ


ಅವನ ಸಾಂಗತ್ಯ ಮರೀಚಿಕೆಯಾಗೆ ,

ಕನಸುಗಳು ಚೂರಾಗುವ  ತುಮುಳ ,

ಸಣ್ಣ ನೋವು ತರುತಿದೆ. . .


ಇನ್ನಾದರೂ ಕಾಡಿಸುವ ಮನಸು ಬದಲಾಯಿಸೇ ಓ ಪ್ರಿಯ ಸಖಿ 
ಹೇಳಿಬಿಡೇ ಯಾರು ಆ ಮನಸಿಜನು ? 
ಇರುವನೆಲ್ಲಿ ನನ್ನ ಚಿತ್ತ-ಚೋರನು?. . .
                                                                                       -ಪ್ರಜ್ಞಮಾಲಾ

Tuesday, 12 July 2011

"ಕಳವಳ " : ನಮ್ಮ ಬದುಕಿನ ಹಲವಾರು ಕನಸುಗಳು ಸಾಕಾರಗೊಳ್ಳಲು ಇಂದಿನ ನಮ್ಮ ನಿರ್ಧಾರಗಳೇ ಬುನಾದಿ... ನಮ್ಮ ಯೋಚನಾಲಹರಿ, ದೂರಾಲೋಚನೆ , ಅವಲೋಕನಾಶಕ್ತಿಗಳು ನಮ್ಮ ಪ್ರಜ್ಞೆಗೆ ಕಾರಣವಾದರೆ, "ಭಾಗ್ಯ" ನಮ್ಮ ಹಣೆಬರಹದ,ಮನ್ವಂತರದ ಕರ್ತಾರ , ಭಾಗ್ಯ ಹಾಗು ಶ್ರಮ ಜೊತೆಗೂಡಿದಾಗ , ಬಾಳಿನ ಸುಂದರ ಕ್ಷಣಗಳ ಅಥವಾ ಘೋರ ದುರಂತಗಳ ... ಒಟ್ಟಾರೆ "ವಾಸ್ತವ"ದ ರೂಪಾಂತರ ಸಾಧ್ಯ .

ಮನದಲಿ ಮೂಡುತಿಹುದು ಕನಸುಗಳು ನೂರಾರು-ಹಲವಾರು
ಚಿತ್ತದಲಿ ತುಂಬಿಹುದು ಗೊಂದಲ -ದ್ವಂದ್ವಗಳು ಸಾವಿರಾರು
ಮುಂಬರುವ ಕೆಲವು ಕ್ಷಣಗಳು
ನಿರ್ಧರಿಸುವವು ಬಾಳಿನ ಹಲವು ಕ್ಷಣಗಳನು

ದಾಸಿಯಾಗುವೆನೋ  ವ್ಯಾಮೋಹದ , ದಾಹ-ದುರಾಸೆಗಳ ಸಂಕೋಲೆಗೆ . . .?
ಅಥವಾ
ಅರಸಿಯಾಗುವೆನೋ  ಪರಿಶ್ರಮದ ಭದ್ರ ಬುನಾದಿಯ ಮಹಲಿಗೆ  . . . ?

"ಭಾಗ್ಯ"ವೇ ಕರ್ತಾರ ಕವಲೊಡೆಯಲು,
ಜೀವಾಳದ ಪ್ರಶ್ನೆಗಳ ಉತ್ತರ ಪಡೆಯಲು ,
ಅಂಧಕಾರದ ನಿಪಾತಕೆ ದೂಡಲು. . .
ಅಥವಾ
       ಬೆಳಕಿನ ಪಥದಲಿ ನಡೆಸಲು   . . .
                                                       -ಪ್ರಜ್ಞಮಾಲಾ

Monday, 11 July 2011

ಹಾಗೆ ಸುಮ್ಮನೆ

ಯಾವುದೀ ಖುಷಿಯು ?
ಏಕೀ ಖುಷಿಯು?
ತಿಳಿಯದಾದೆ , ಆದರೂ ನಲಿಯುತಲಿರುವೆ
ಬಣ್ಣಿಸಲಾರೆ, ಆದರೂ ಪ್ರಫುಲ್ಲಗೊಂಡಿರುವೆ

ಸುಂದರ  ಸ್ವಪ್ನಗಳ ನೇಯುತಲಿ ,
ಬಡಬಡಿಸುವೆ  ಕೂತಲಿ,
ನಗುತಲಿಹೆನು ಮೌನದಲಿ,
ಗುನುಗುತಲಿರುವೆ   ಅನು'ರಾಗ'ದಲಿ 

ಪ್ರತಿಯೊಂದು ನೋಟವು  ಛೇಡಿಸುವುದೀಗ,
ಕೇಳಬಯಸುವೆ ಅದೊಂದೇ  ಸ್ವರವ,
ಬಿಡಿಸುತಲಿರುವೆ ಮನದ ಪುಟದಲಿ
ಅವನದೇ ಚಿತ್ರವ ,

ಮಿನುಗುವ ತಾರೆಗಳು ತೋರುವುದೀಗ 
ಅವನ  ಮುಗುಳ್ನಗೆಯ




ಹೊಸದಾಗಿ ಕಾಣುತಿಹುದು
ಎಲ್ಲವೂ ನನಗೀಗ,
ಬಂಧನದಲ್ಲೂ ಅನುಭವಿಸುತಿಹೆನು
ಅನನ್ಯ ಸ್ವಾತಂತ್ರ್ಯವ . . .
ಎರಡಕ್ಷರದ ಈ  ಪದಕೆ
ದೇವ ಕೊಟ್ಟಿಹನೆಂತಹ  ಮಾಂತ್ರಿಕ ಶಕ್ತಿಯ  ?


ಕೇಳಲಾರೆಯಾ  ನನ್ನೀ ಮನದ ತುಡಿತ
ಬಯಸಿಹೆನು ನಿನ್ನನು  ನನಗಾಗಿಯೇ ಶಾಶ್ವತ

ಆದರೂ . . .
ಅಳುಕುತಲಿದೆ ಈ ಮನ 
ನೀರ  ಮೇಲಿನ ಗುಳ್ಳೆಯಾಗುವುದೇ

ನನ್ನೀ ಭಾವದ ಮಿಡಿತ ?

ಕಾಯುತಿಹೆನು  ನಿನ್ನ  "ಉತ್ತರ"  . . .
                                                       -ಪ್ರಜ್ಞಮಾಲಾ

"ಮೌನರಾಗ " : ಕಷ್ಟಗಳು ಅಸಹನೀಯವಾದಾಗ, ನಮ್ಮವರೇ ನಡುನೀರಿನಲ್ಲಿ ನಮ್ಮನ್ನು ಕೈಬಿಟ್ಟಾಗ , ಇಂದಿನ ಅಸಹಾಯಕತೆಯ ಕತ್ತಲು ನಾಳೆಗಳನ್ನು ಆವರಿಸಿದಾಗ .... ನಮ್ಮ ಆತ್ಮಸಾಕ್ಷಿಯೇ ನಮ್ಮ ಚೇತನವಾದರೆ ......ಮುನ್ನುಗ್ಗಿ , ಮುಂಬರುವ ಅವಕಾಶಗಳಿಗೆ ಕೈಚಾಚಲು ಪ್ರೇರಣೆಯಾದರೆ !!!




ಒಮ್ಮೊಮ್ಮೆ ಅನಿಸುವುದು ಜೀವನ
ದುಸ್ತರ, ದುಃಖಕರ, ನಿಷ್ಪ್ರಯೋಜಕ

ಸ್ವರಗಳೇ ಅಪಸ್ವರವಾಗಿ
ಡೋಲಾಯಮಾನವಾಗುವುದು ಚಿತ್ತ
ರಾರಾಜಿಸುವುದು ನೈಚ್ಯ

ಬಂಧಿಸುವುದು ನೆಮ್ಮದಿಯ
ಸಂಕೋಲೆಯಂತೆ ,
ದಹಿಸುವುದು ಯೋಚನಾಲಹರಿಯ
ಅಗ್ನಿಯ ಶಿಖೆಯಂತೆ

ಜೀವನ ಅರ್ಕ ಅಸ್ತಮಿಸಿ
ಮೌನರಾಗ ಹೊರಹೊಮ್ಮಿ
ಅಂತ್ಯವೇ ಕಾಣುವುದು ನೋಡಿದಲ್ಲೆಲ್ಲಾ

ಆಗಲೇ . . .
ಭಾವಗಳ ಸಂತೈಸುತಾ  ,
ಬೆಳದಿಂಗಳ ಪಸರಿಸುತಾ ,
ಇರುಳ ಮರೆಯಲ್ಲಿ  ಉದಯಿಸುವನು
ಬಾಳ "ಸುಧಾಂಶು" . . .
 
ಬಡಿದೆಬ್ಬಿಸುತಾ ಆತ್ಮಬಲವ,
ಅನುನಯಿಸುವನು ಚಿತ್ತವ

ನಾಳೆಯ ಅರ್ಕನು ತರುವ
ಅಗಮ್ಯ ಅವಕಾಶಗಳ ತೋರುತಾ. . .
ಮೂಡಿಸುವನು ನವೀನ ಆಶಾಕಿರಣ
                                                            -ಪ್ರಜ್ಞಮಾಲಾ

"ತಳಮಳ " : ಅವಳಲ್ಲೇನೋ ಸ್ನೇಹವು ಪ್ರೀತಿಯ ರೂಪ ಪಡೆದಿದೆ ..ಕಂಗಳಲ್ಲಿ ಅವನ ಬಿಂಬ ನೆಲೆಸಿದೆ, ಅವನಿಗಾಗಿ ಹೃದಯ ಮಿಡಿಯುತ್ತಿದೆ ... ಆದರೆ, ...ತನ್ನ ಪ್ರೀತಿಗೆ ಆತನ ಸ್ಪಂದನೆ ಸಿಗದೇ ಸ್ನೇಹವನ್ನು ಮುರಿದರೆ , ತನ್ನ ಪ್ರೀತಿಯ ನಿವೇದನೆ ಅವನಿಂದ ದೂರವಾಗುವ ಪ್ರಸಂಗ ತಂದರೆ ಎನ್ನುವ ಭಯ.."ತಳಮಳ "


"ತಳಮಳ "   
: ಅವಳಲ್ಲೇನೋ   ಸ್ನೇಹವು ಪ್ರೀತಿಯ ರೂಪ ಪಡೆದಿದೆ ..ಕಂಗಳಲ್ಲಿ ಅವನ ಬಿಂಬ ನೆಲೆಸಿದೆ, ಅವನಿಗಾಗಿ ಹೃದಯ ಮಿಡಿಯುತ್ತಿದೆ ... ಆದರೆ, ತನ್ನ ಪ್ರೀತಿಗೆ ಆತನ ಸ್ಪಂದನೆ ಸಿಗದೇ ಸ್ನೇಹವನ್ನು  ಮುರಿದರೆ , ತನ್ನ ಪ್ರೀತಿಯ ನಿವೇದನೆ ಅವನಿಂದ ದೂರವಾಗುವ ಪ್ರಸಂಗ ತಂದರೆ ಎನ್ನುವ ಭಯ.."ತಳಮಳ "

ಎದೆಯ ಗೂಡಿನಲ್ಲಿ ಬೆಚ್ಚನೆ ಬಚ್ಚಿಟ್ಟಿರುವೆ
ನಿನ್ನನು ಬಹು ದಿನಗಳಿಂದ . .

ಇಂದೇಕೋ  ಅನಿಸುತಿದೆ
ತುಂಬುವುದು ಕೇವಲ ಶೂನ್ಯ
ಒಡೆಯುತಾ ನನ್ನೀ ಒಲವ ಆಶ್ರಯ,
ಮುರಿಯುತಾ ನನ್ನ ಆಶಯ . . .

ದುಸ್ವಪ್ನವಾಗಿ ಕಾಡುತಿಹುದು ಪ್ರತಿಬಾರಿ ಅದೇ ಪ್ರಶ್ನೆಗಳ ಸುರಿಮಳೆ . . .

ಬಚ್ಚಿಟ್ಟ ಭಾವನೆ ಮುಳುವಾಗುವುದೇ ನನ್ನ ಒಲವ ಕುಸುಮಕೆ ?
"ತಿರಸ್ಕಾರ"ದ ಭಯ ಕಾಡುತಿದೆ ಹೀಗೇಕೆ ನನ್ನ ಪ್ರೇಮ ನಿವೇದನೆಗೆ ?
ಸ್ನೇಹದ ಸಲುಗೆ ಸಾಲದೇ ನಮ್ಮ ವಿಶ್ವಾಸದ ಅನುಬಂಧಕೆ... ನಿನ್ನ ಸಾಮಿಪ್ಯಕೆ?

ಬಿಚ್ಚಿಡಲಿ ಹೇಗೆ ನಿನ್ನೆದುರು ನನ್ನ  ಅನುರಾಗವ?
ನೋಡಲಾಗದೇ  ನನ್ನ ಕಂಗಳಲ್ಲಿ  ತುಂಬಿರುವ ನಿನ್ನ ಛಾಯೆಯ ?
ಅಥವಾ
ಕೇಳಿಬಿಡಲೇ   ಕಾಡುವ ಈ ಕಠಿಣ   ಪ್ರಶ್ನೆಯ . . .
"ದೂರವಾಗಿ ಮರೆಯುವೆಯಾ ,
ಅಥವಾ
ಮರೆಯಲೆಂದೇ  ದೂರವಾಗುವೆಯಾ ?"
ಹೇಳಿಹೋಗು ನಿನ್ನ ಉತ್ತರ . . .
                                                                                                           -ಪ್ರಜ್ಞಮಾಲಾ

Sunday, 10 July 2011

"ಸತ್ಯ-ಮಿಥ್ಯ" : ವ್ಯಾಮೋಹದ ಅಸತ್ಯ ಪಥದಲ್ಲಿ ತೊಡಕುಗಳು ಕಡಿಮೆ, ಆದರೆ ಅಂತ್ಯ ಘೋರ , ಕಾಠಿಣ್ಯದ ಸತ್ಯ ಪಥದ ನಿಲುವು ಎಂದೆಂದಿಗೂ ಮಧುರ



ಅರ್ಥ -ಅನರ್ಥಗಳ ಗೊಂದಲದಲ್ಲಿ ಸಾಗಿದೆ
ಈ ಸಮಾಜ ಎಂದಿನಿಂದ
ಲೋಕದ ನಿಗೂಢ ಮನಗಳ
ಸತ್ಯ ಶೋಧನೆಯ ಮಾಡುತಾ

ಒಮ್ಮೊಮ್ಮೆ ಸಾಧಿಸುವುದು ಜಯ,
ಇನ್ನೊಮ್ಮೆ ಅನುಭವಿಸುವುದು ಪರಾಜಯ

ಮೋಹದ ಪಥದಲಿ,
'ಮಿಥ್ಯ'ದ  ರಥದಲಿ ಸಾಗಲು, 
ಹೀಯಾಳಿಸಿ, ಚುಚ್ಚುತ ನೋಯಿಸಿ ಆಪ್ತರನು 
ತರಿಸುವುದು ಮನಗಳ ನಡುವೆ  ಬಿರುಕನು  ಸದಾ  . . .

ಶ್ರಮದ  ಪಥದಲಿ ,
'ಸತ್ಯ'ದ  ರಥದಲಿ  ಸಾಗಲು,
ಪ್ರೀತಿ -ವಿಶ್ವಾಸಗಳ  ಸಾರಿ
ಸಾಧಿಸುವುದು ಎಂದೆಂದಿಗೂ  ಮನಗಳ ಬೆಸುಗೆಯ  ಅಗಮ್ಯ  ಜಯ

ಇದುವೇ  ಕಾರಣ  ಸಮಾಜದ 
"ಉನ್ನತಿ -ಅವನತಿ " ಗೆ  ನಿತ್ಯ  ನಿರಂತರ . . .
                                                                                         -ಪ್ರಜ್ಞಮಾಲಾ

ಸ್ವಪ್ನ-ಸಖ


ಬಯಸಿಹೆನು ಗೆಳೆಯನ
ಆ ಒಂದು ಒಲುಮೆಗೆ,
ಅನನ್ಯ ಪ್ರೀತಿಗೆ,
ಅಗಮ್ಯ ವಿಶ್ವಾಸಕೆ,
ನಿಷ್ಕಲ್ಮಶ ಸ್ನೇಹಕೆ,
ನನಗಾಗಿಯೇ ಮಿಡಿಯುವ ಸಹೃದಯಕೆ

ಬಯಸಿಹೆನು ಗೆಳೆಯನ
ಎನ್ನ ಮನದಾಳದ ಭಾವನೆಗಳ ಸ್ಪಂದನೆಗೆ
ತಪ್ಪುಗಳ ತಿದ್ದುವ ಬಿರುನುಡಿಗಳಿಗೆ
ದುಃಖದಲಿ ಸಂತೈಸುವ ಸಂಯಮಿಗೆ
ಆತ್ಮವಿಶ್ವಾಸವ ಮೂಡಿಸುವ ಚೇತನದ ದೀವಿಗೆಗೆ
ಸಂತಸದಲಿ ಬಿಗಿದಪ್ಪುವ ನಿರುಪಮ ಅನುರಾಗಕೆ

ಬಯಸಿಹೆನು ಗೆಳೆಯನ
ಬಾಳ ನಿಕಷದಲಿ ಜೊತೆಯಾಗುವ ನೇತಾರನಿಗೆ
ಅಗೋಚರ ನಿಲುವುಗಳಲಿ ಸಾರಥಿಯಾಗುವ ಸುಧಾಂಶುವಿಗೆ
ಬಾಳ ಬೇಗುದಿಯಲಿ ,ತಂಗಾಳಿಯ ಬೀಸುವ ಶಿಶಿರನಿಗೆ
ಪಿಸುಮಾತಿನ ಅಲೆಗಳಲಿ ನಗಿಸಿ-ನಲಿಸುತಾ ಆನಂದಿಸುವ ಕಣ್ಮಣಿಗೆ

ಕಾದಿಹೆನು ನಾ ...
ಆ ಆಗಂತುಕನಿಗೆ ,
ನಲ್ಮೆಯ ಗೆಳೆಯನಿಗೆ ,
ಬಾಳ ಕರ್ತಾರನಿಗೆ ,
ಬಾಳ ನೌಕೆಯ ನಾವಿಕನಿಗೆ ...

                                                                  -ಪ್ರಜ್ಞಮಾಲಾ



"ನಿಶಿತ ಈ ನಿಶೀಥ " ( ನಿಶಿತ=ಹರಿತವಾದುದು, ನೋವನೀಯುವುದು ; ನಿಶೀಥ= ಮಧ್ಯರಾತ್ರಿ )

ಮಧ್ಯರಾತ್ರಿಯು ಹಿಂದೆ ಕಳೆದುಹೋದ ದಿನ ಹಾಗೂ ಮುಂಬರುವ ನವೀನ ದಿನ ಗಳ ನಡುವಿರುವ ಸೇತುವೆ ಇದ್ದಂತೆ .
ಇಲ್ಲಿ ಮಧ್ಯರಾತ್ರಿಯು , ಗೊಂದಲಗೊಂಡ ("ಅತ್ತ ದರಿ, ಇತ್ತ ಪುಲಿ " ಯಂತಹ) ಸಂದಿಗ್ಧ ಪರಿಸ್ಥಿತಿಯಲ್ಲಿರುವ ನಮ್ಮ ಚಿತ್ತವನ್ನು ಹೋಲುವುದು ,
ಮಧುರವಾದ, ಮುಂದೆಂದೂ ಬರದ  ಹಿಂದಿನ ನೆನಪುಗಳ"ಕಲ್ಪನಾಲೋಕದಲ್ಲಿ " ಲೀನವಾದರೆ  ಮನಸಿಗೆ, ನಮ್ಮ ಅಸ್ತಿತ್ವಕ್ಕೆ ಆಗುವ ತೊಂದರೆಗಳು
                                                 ಹಾಗು  
ಏಕಾಂಗಿಯಾಗಿ    ಮುನ್ನಡೆದರೆ , ಮುಂಬರುವ ಅನಿಶ್ಚಿತ ಸಂದರ್ಭಗಳಿಗೆ ಹೆದರುವ ಪ್ರಜ್ಞೆಯನ್ನು ಚಿತ್ರಿಸುವುದು .
ಶಶಿಯು ಇರುಳ ಕತ್ತಲನ್ನು ತೊಡೆದು ಬೆಳದಿಂಗಳ  ಸೊಬಗು ನೀಡುವಂತೆ , ಪ್ರೀತಿ ಬಾಳ ಸುಧಾಂಶು .....
ಪ್ರಿಯತಮನೇ "ನೀನು ನನ್ನನ್ನು  ಮರೆತುಬಿಡು" ಎಂದು ದೂರವಾದಾಗ  ದಿಗ್ಗೆಡಿಸುವ  ನೋವು ......

"ನಿಶಿತ ಈ ನಿಶೀಥ "

















"ಯಾರಿಂದಲೂ ಯಾರಿಲ್ಲ ,
ಜಗವೆಲ್ಲಾ ನೀನೇ ಅಲ್ಲ . . ."
ನಿನ್ನೀ ಮಾತು  ಗುಂಯ್ ಗುಡುತ್ತಿದೆ
ನನ್ನ ಮೈ-ಮನದಲ್ಲಿ   . . .

ಛಿದ್ರಗೊಳಿಸಿದೆ ಏಕೆ,
 ನೀನೇ ನನ್ನೊಳಗೆ ಬೆಳೆಸಿದ್ದ  ಒಲ್ಮೆಯ ಪರದೆಯನು?
ಸವೆಸಲಿ  ಹೇಗೆ ನನ್ನೀ  ವ್ಯಥೆಯ  ಬದುಕನ್ನು  ?

 ಮೈಮರೆತರೆ, . . .  ಸೆಳೆಯುವುದು 
ಭ್ರಮೆಯ "ರೇ" ಪ್ರಪಂಚ    . . .
ಸರ್ವನಾಶವೇ ಅದರ ಘೋರ ಅಂತ್ಯ 

ಮುನ್ನಡೆದರೆ  ... ಹೆದರುತಿದೆ ಜೀವ
ಎದುರುಗೊಳ್ಳಲಿ ಹೇಗೆ ನಾನೊಬ್ಬಳೆ ....
ನೀನಿಲ್ಲದ  ಆ ನಿಬಿಡ ಲೋಕ ?


ಅಂತ್ಯವಿಲ್ಲವೇ
ನನ್ನ ಮೂಕವೇದನೆಗೆ . . .?
ಶಶಿಯೇ  ಇಲ್ಲವೇ
ನನ್ನೀ ಬಾಳ ಶರ್ವರಿಗೆ . . .?
ಇದೇ ನಿನ್ನ ಕಾಣಿಕೆಯೇ ,
ಕಪಟವಿಲ್ಲದ ನನ್ನ ಭಕುತಿಗೆ  . . .?
      -ಪ್ರಜ್ಞಮಾಲಾ

Thursday, 7 July 2011

"ನಾನು -ನೀನು"


ನಿನ್ನ ಕಂಡ ಕ್ಷಣ
ಮೈಮರೆತೆನು  ನಾನು
ಬಾಳಲಿ ನವ-ಚೇತನ
ಪ್ರವಹಿಸಿದೆ ನೀನು
ಅರುಣ-ರಾಗವ ಎದೆಯಲಿ  
ಝೇಂಕರಿಸಿದೆ   ನೀನು
ಅಕ್ಷಿಗಳಲಿ  ಅನುರಾಗದ
ಛಾಯೆಯೇ  ನೀನು
ವಸುಧೆಯು  ನಾನಾಗೆ ,
ಮಳೆ  ಹನಿಯು  ನೀನು
ನಿನ್ನೊಳಗೆ  ನಾನಾಗಿ 
ಭಾವಗಳು  ಒಂದಾಗಿ 
ಒಲ್ಮೆಯಲಿ  ಸಾಗುತಿರೆ 
ಆಹಾ ! ... ಜೀವನವೇ  ಸೊಗಸು 
                                                      -ಪ್ರಜ್ಞಮಾಲಾ

ಪ್ರೇಮಗೀತೆ


ಮೂಡಿಸಿದೆ  ನೀನು ಒಲವೆಂಬ ಕವಿತೆಯ
ತುಂಬಿದೆ ಅದರಲಿ ಪ್ರೀತಿಯ ಪದಗಳ
ವಿಶ್ವಾಸವಾಯಿತು ನವಿರಾದ ರಾಗ
ಮನಸ್ತಾಪಗಳಾದವು ಗೀತೆಯ ಆಲಾಪ
ಕೂಡಿ ಹಾಡುವ ಬಾರಾ
ನಮ್ಮ ಪ್ರೇಮಗೀತೆಯ ಚಿನ್ನ . . .
                                          
  -ಪ್ರಜ್ಞಮಾಲಾ

"ಅಹಂಕೃತಿ" : ಆತ್ಮಾಭಿಮಾನ, ಸ್ವಾವಲಂಬನೆ, ಸ್ವಪ್ರೇರಣೆಗಳು ಅವಶ್ಯ, ಆದರೆ ಅದೇ ಸ್ವಪ್ರತಿಷ್ಠೆ ,ಸ್ವಾರ್ಥಗಳಾಗಿ ಪರಿವರ್ತಿತವಾದರೆ. . . ??? "ನಾನು, ನನ್ನದು " ಎಂಬುದು "ನಾವು,ನಮ್ಮದು " ಎಂಬ ಪ್ರಜ್ಞೆಯನ್ನು ಒಳಗೊಂಡಿದ್ದರೆ ಅಹಂ ಭಾವ ವರವಾಗುವುದಂತು ನಿಜ . ಆದರೆ ,ಎಲ್ಲೆಗಳು ಮೀರಿ.. ಕೇವಲ "ನಾನೇ , ನನ್ನದೇ " ಎಂಬ ದುರಹಂಕಾರ ಭಾವಗಳು ಹೆಚ್ಚಾದಂತೆ ,ಮನುಷ್ಯ ಸಮಾಜದಲ್ಲಿ ಮೆರೆದರೂ, ತನ್ನವರ ಬಾಂಧವ್ಯದಿಂದ ದೂರವಾಗುತ್ತಾನೆ, ವಿನಾಶದ ಕಡೆಗೆ ಸಾಗುತ್ತಾನೆ ..ಅಲ್ಲವೇ?

ಮನದ ತುಂಬಾ ಅಹಂಕಾರ
ಅಹಂಕಾರದೊಳಗೆ  ಮತ್ಸರ 
ಮತ್ಸರದಿಂದ ಕಳವಳ
ಕಳವಳದಿಂದ ವೈಸಿಕ
ಒಟ್ಟಾಗಿ ಸೇರಿದೊಡೆ
ಆಗುವುದು ವಿನಾಶಕ

ಸೌಮ್ಯತೆಯ ಬಿರಿದು,
ಕ್ರೌರ್ಯತೆಯು ಹರಿದು
ತಾಂಡವವಾಡುತಾ ಕ್ಷಯಿಸುವುದು  ಅರಿವಿನ ಶರ
ಹರಿಸುವುದು ಹಗೆಯ ಮಹಾಪೂರ

ಮಸ್ತಕದ ಕೋಟೆಯು ಕುಸಿದು  , 
ಅಸತ್ಯ, ಅಪಾರ್ಥಗಳು ಬಿರಿದು
ಹೊರಹೊಮ್ಮುವುದು ಅಟ್ಟಹಾಸದ  ಜ್ವಾಲಾಗ್ನಿ

ಮನಗಳ ಒಡೆಯುತಾ, ಬಾಂಧವ್ಯಗಳ ಮುರಿಯುತಾ,
ನೂಕುವುದು ವ್ಯಸನಿಯನು,
ಜವನ  ಜಾಲಕೆ  , ಮೃತ್ಯುವಿನ ಕೂಪಕೆ . . .
                                                                  -ಪ್ರಜ್ಞಮಾಲಾ 

Wednesday, 6 July 2011

"ಏಕಾಂಗಿ " : ಬಯಸದೆ ಬಂದ "ಒಂಟಿತನ"ವು ಸಮಯದ ಆರೈಕೆಯಲಿ, ಆಪ್ತರ ಪ್ರೀತಿಯಲಿ ಬಯಸಿ ತರುವ ಏಕಾಂತವಾಗಬಹುದಲ್ಲವೆ?

ಆ ಕಾಲವೊಂದಿತ್ತು ಗೆಳೆಯ
ನೀನಿಲ್ಲದ ಬದುಕು ಬರಡೆನಿಸುತ್ತಿತ್ತು
ನಿಶ್ಚೇತನವೆನಿಸುತ್ತಿತ್ತು 
"ಒಂಟಿ"ತನ ಕಾಡುತ್ತಿತ್ತು
ಬಾಳೇ ವ್ಯರ್ಥವೆನಿಸಿತ್ತು. . .

ಕಾಲ ಜಾರಿತು ಹೇಗೋ
ಚಿಗುರಿದೆ ಬರಡಾದ ಈ ಒಡೆದ ಹೃದಯದಲಿ
        ನವೋಲ್ಲಾಸ
ಎಚ್ಚೆತ್ತಿದೆ ಕರ್ತವ್ಯಭಾವ, ಆತ್ಮಸ್ಥೈರ್ಯ

ಈಗಲೂ ನೀನಿಲ್ಲದೆ "ಏಕಾಂಗಿ" ನಾನು
ಆದರೂ ಸಾಗುತಿದೆ ಬದುಕು ಹೀಗೆ...
ನವಚೇತನದಲಿ , ನನ್ನವರ ಪ್ರೀತಿಯಲಿ ...
ಕಾಲದ ಶೀತಲ ಆರೈಕೆಯಲಿ                                                 
                                                          -ಪ್ರಜ್ಞಮಾಲಾ

"ಬಾಳ ವೈಣಿಕ "


ಸ್ನೇಹದ ಶ್ರುತಿ-ಸ್ವರ ನೀಯುತೆ ನೀನು
ಮೀಟಿದೆ ನನ್ನೆದೆ ವೀಣೆಯನು
ಸಪ್ತ-ಸ್ವರಗಳ ಲಹರಿ-ತರಂಗವ
ಒಲವಲಿ ನುಡಿಸುತೆ
ಆಗುವೆಯಾ ಈ ಬಾಳ ವೈಣಿಕನು ?
                                           -ಪ್ರಜ್ಞಮಾಲಾ  

ನಿರೀಕ್ಷೆ : (ವಿರಹದಲ್ಲಿಯೂ ಮೂಡುವುದೇಕೆ ಈ " ನಿರೀಕ್ಷೆ " ? )

ವಿರಹದಲ್ಲಿ ಇರುವ ಸಂತಸವಾವುದು ?

ಬೇಕು ಎಂದು ಮಿಂಚಿನಂತೆ ಸನಿಹವಾದೆ
ಬೇಡವಾಗಿ ಕ್ಷಣದಲ್ಲಿ ದೂರವಾದೆ
ಏಕೆ , ಏನು ಹೇಳದಾದೆ ...
ಮೌನವೆಂಬ ಗೋಡೆಯಲ್ಲಿ ಬಿಗುಮಾನವನ್ನೇ ಮೆರೆದೆ ಏಕೆ ?

ಈಗಲೂ ಸಾಗುತಿರುವೆ ನಾ ಅದೇ ಹಳೆಯ ನೌಕೆಯಲ್ಲಿ ,
ಸವಿ-ನೆನಪುಗಳ ಸ್ಮರಣೆಯಲ್ಲಿ ,
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ,
ನಾವಿಕನ ಹುಡುಕಾಟದಲ್ಲಿ ...
                                                                          -ಪ್ರಜ್ಞಮಾಲಾ   

ಮುಖವಾಡ

ಮುಖವಾಡ


ಸ್ವಾರ್ಥ-ಸ್ಪರ್ಧಾ ಪ್ರಪಂಚದವಿದುವೆ ... 
 ವ್ಯಸನದಲಿ ಗೆಲ್ಲುವವನಿಗಿಹುದು ಜಯಕಾರ 

ಅಪಾರ್ಥಗಳ ಸಾರ್ಥಕವಾಗಿಸಿ,
ಅರ್ಥಗಳ ವ್ಯರ್ಥವಾಗಿಸುವವನೇ ಮಹಾಶೂರ 

ಭಾವಗಳ, ಮೌಲ್ಯಗಳ ಧಿಕ್ಕರಿಸಿ 
ಕತ್ತಲ ಒಡಲೊಳಗೆ ವಂಚಿಸಿಸುವವನೇ  ಸರದಾರ 

ಹಿತವರಾರು ಎಂದು ಹುಡುಕ - ಹೊರಟರೆ ಜೋಕೆ,
ಕಾಣದೆ ಇರಬಹುದು ನಮ್ಮದೇ  ಪ್ರತಿರೂಪ ಕೂಡ!

ದೇವನೇ ಬಲ್ಲ ಈ ಮುಖವಾಡದ  ಚಮತ್ಕಾರ!  
                                                                                   -ಪ್ರಜ್ಞಮಾಲಾ

"ಬಯಕೆ"


ಬಯಸಿದೆ ನಿನ್ನ ಒಂದಿಷ್ಟು ಸಮಯವ
ನನ್ನ ಮಾತುಗಳಿಗೆ ಕಿವಿಗೊಡುತ್ತಾ ,
ತನ್ನ ಭಾವನೆಗಳ ಹಂಚಿಕೊಳ್ಳುವ ಸಹೃದಯವ

ಸಂತಸದಲಿ ವಾಸ್ತವ ತೋರುತ ಜೊತೆಯಾಗುವ ಗೆಳೆಯನಿಗೆ
ದುಃಖದಲಿ ದೀವಿಗೆಯಾಗಿ ಸಂತೈಸುವ ಆಪ್ತ ನುಡಿಗಳಿಗೆ
"ನಿನ್ನ ಜೊತೆಗಿರುವೆ" ಎಂಬ ವಿಶ್ವಾಸದ ಮುಗುಳ್ನಗೆಗೆ

ಅತಿಯಾಯಿತೇ ನನ್ನ ಈ ಬಯಕೆ ?
ಅನರ್ಹಳಾದೆನೇ ನಿನ್ನ ಸಾಂಗತ್ಯಕೆ ?
ಮೌಲ್ಯವಿಲ್ಲವಾಯಿತೇ ನಿನಗಾಗಿ ಮಿಡಿಯುವ ನನ್ನೀ ಹೃದಯಕೆ?

ಭಾವನೆಗಳ ಧಿಕ್ಕರಿಸಿ ದೂರಾದೆ ಹೀಗೇಕೆ?
ನಿರ್ಲಿಪ್ತ-ಮೌನದಲಿ ಕೊಲ್ಲುತಿರುವೆ ನೀನೇಕೆ?
                                                                        -ಪ್ರಜ್ಞಮಾಲಾ

"ಪ್ಲವ " :ಸ್ನೇಹ ನಿರುಪಮ ಬಂಧನ ಬಾಳ ಪಯಣ ದಡ ತಲುಪಲು ಸ್ನೇಹದ ಪ್ಲವ(ಹರಿಗೋಲು - BOAT ) ಕೂಡ ಪ್ರಮುಖ , ಪ್ರೀತಿ-ವಿಶ್ವಾಸ -ಉತ್ಸಾಹ ತುಂಬುವ , ಆಸ್ಥೆಯಲಿ ನನ್ನೆಲ್ಲಾ ತಪ್ಪುಗಳ ತಿದ್ದಿ , ಕ್ಷಮಿಸಿ ಜೊತೆಯಾಗುವ ಸ್ನೇಹಿತ/ಸ್ನೇಹಿತೆಯರಿಗೆ , "ಸ್ನೇಹ"ಕ್ಕೆ ಸದಾ ನಾನು ಚಿರಋಣಿ :)

ಅಪರಿಚಿತ ಅಲೆಯಾಗಿ ಬಂದೆ
ಸ್ನೇಹದ ಚಿಲುಮೆಯನು ತಂದೆ
ಕಷ್ಟಗಳಲಿ ಜೊತೆಯಾಗಿ, 
ಸಂತಸದಲಿ ಒಂದಾಗಿ . . .

ಪ್ರೀತಿ-ವಿಶ್ವಾಸಗಳ ಸ್ಫುರಿಸಿ,
ಸಮ್ಮುದ-ಉಲ್ಲಾಸಗಳ ಪಸರಿಸಿ ,
ಗೆಳೆತನದ ಅಗಮ್ಯ ಬಾಂಧವ್ಯವನ್ನು ಬೆಸೆದೆ ,
ಬಾಳ ಅನನ್ಯ ಕೊಡುಗೆಯಾದೆ .

ನಿಗೂಢ ಲೋಕದಲಿ, 
ದಿಗ್ಗೆಡಿಸುವ ಧ್ವಾಂತದಲಿ
ಕೈಹಿಡಿದು ರಕ್ಷಿಸುವ ಅನುಪಮ ಪ್ಲವದಂತೆ,
ದಾರಿ ಕಾಯ್ವ ಧ್ರುವತಾರೆಯಂತೆ ,
ಬಾಳ ಆಗಸದಲಿ ಸದಾ ಮಿನುಗುತಿರುವೆ . . .
                                                     -ಪ್ರಜ್ಞಮಾಲಾ    

"ಲಕ್ಷ್ಯ "


ನವ್ಯ ತರಂಗ ಲಹರಿಸಲಿ ಎದೆಯಲಿ
ಸುಲೋಚನೆ ಮಿಂಚಲಿ ಶರದಲಿ
ಹೊಸಬಾಳ ದಿಗಂತದಲಿ
ಹೊಂಗಿರಣದ ಅಂಶುವಿನಲಿ
ಭವ್ಯ ಕನಸುಗಳು ಹೊಮ್ಮಲಿ ಮನದಲಿ

ಧೃತಿಗೆಡದಿರು ಸೋಲಲಿ
ದಿಗ್ಗೆಡದಿರು ಜಯದಲಿ

ಶ್ರದ್ಧೆ ಎಂಬ ದೈವವಿರಲಿ
ಶ್ರಮವೆಂಬ ಸೈನ್ಯವಿರಲಿ
ಸಾಧನೆಯೊಂದೇ ಗುರಿಯಾಗಿರಲಿ
ಸದಾ ಅರಳುತಿರು ನೀ ಸುಮದಂದದಲಿ
                                                    -ಪ್ರಜ್ಞಮಾಲಾ

ತನು-ಮನ

ತನುವೆಂಬ ದ್ವೀಪವು  , ಮನವೆಂಬ ಕಡಲಲ್ಲಿ 
ದಿನನಿತ್ಯ ನಿರೀಕ್ಷಿಸುವುದು
ನವಿರಾದ ಹಾಸ್ಯ 
ಹಾಸ್ಯ-ಲಾಸ್ಯಗಳ ನಡುವಲ್ಲಿ  ಇಹುದು
ಭೋರ್ಗರೆವ ವೇದನೆಯ ಒಂದು ಮೌನದ ಕ್ಷಣ

ತನುವೆಂಬ ದ್ವೀಪವು  , ಮನವೆಂಬ ಕಡಲಲ್ಲಿ 
ದಿನನಿತ್ಯ ನಿರೀಕ್ಷಿಸುವುದು
ಪುಟಿದೆಬ್ಬಿಸುವ ರೋಮಾಂಚನ 
ಸಾಹಸ-ಧೈರ್ಯಗಳ ನಡುವಲ್ಲಿ ಇಹುದು 
ಅಳುಕಿನ ಒಂದು ಮೌನದ ಕ್ಷಣ 

ತನುವೆಂಬ ದ್ವೀಪವು  , ಮನವೆಂಬ ಕಡಲಲ್ಲಿ 
ದಿನನಿತ್ಯ ನಿರೀಕ್ಷಿಸುವುದು
ಪ್ರೀತಿ-ಬಾಂಧವ್ಯಗಳ ಅಯನ 
ಸ್ನೇಹ-ವಿಶ್ವಾಸಗಳ ನಡುವಲ್ಲಿ  ಇಹುದು
ಕೋಪ-ತಾಪಗಳ ಅಬ್ಬರದ ಕ್ಷಣ, 
ಸ್ವಾರ್ಥ-ವೈಮನಸ್ಸಿನ ಒಂದು ಮೌನದ ಕ್ಷಣ

ಬಾಳ ಪಯಣದಲಿ ಸಾಗಲು ಅವಶ್ಯ
ಈ ಭಾವನೆಗಳ ಸಮ್ಮಿಲನ
                                                                   -ಪ್ರಜ್ಞಮಾಲಾ 

" ವಿಯೋಗ " : ಶರಧಿಯು(ಸಮುದ್ರ) ಕೂಡ ಚಂದಿರನ ವಿರಹ-ವೇದನೆ ಅನುಭವಿಸುವಳೇ. . . ?

ಶರಧಿಯ ಸಮ್ಮುದದ ಮಡಿಲು
ಪ್ರೀತಿ ಉಕ್ಕಿಸುವುದ ಕಂಡಿದ್ದೆ ನಾನಂದು

ಸುಧಾಂಶುವಿನ ಜೊತೆಗೂಡಿ ಮಾಯದ ಮೋಹಜಾಲದಲ್ಲಿ
ಬೀಳಿಸುವುದ ಕಂಡಿದ್ದೆ ನಾನಂದು
ಇಂದು ಗೋಚರವಾಯಿತು ನೀರಧಿಯ
"ವಿರಹ"ದ ವಿಭಿನ್ನ ರೂಪ
ಆಕೆಯಲಿ ಕಂಡೆ ಮೀರಾ-ರಾಧೆಯರ ಪ್ರತಿರೂಪ
ಶಶಿಯ ಸಾಮಿಪ್ಯ ಸಿಗದೇ ,
ಸಾನಿಧ್ಯದಲ್ಲೇ ತೃಪ್ತಳಾಗಿ
ನಿತ್ಯ ನೋವನುಂಗುವ ಲಹರಿಯ ಲೀನ ರೂಪ,
ಹುಣ್ಣಿಮೆಗಳಲಿ ಮನದುಂಬಿ ಹರ್ಷಿಸುವ
ಸಲಿಲೆಯ ಅನುರಕ್ತಿಯ ಅನನ್ಯ ಪ್ರತಿರೂಪ
ತನ್ನ ಒಡಲ ಕಂದಮ್ಮಗಳ ಸಂತೈಸುವ ಆಕೆಯ ಮಾತೃ ರೂಪ
                                                                                          -ಪ್ರಜ್ಞಮಾಲಾ

" ಬದುಕಿನ ರೂಢಿ " : ಸಮಾಜ ನಮ್ಮ ತಪ್ಪನ್ನು ಮೂದಲಿಸಿ ತಿದ್ದುವುದಾದರೂ ಹಲವಾರು ಬಾರಿ ನಮ್ಮ ಏಳ್ಗೆ ಸಹಿಸಲಾರದೆ ಕೊಂಕು ನುಡಿಯುವುದು ,ಒಮ್ಮೊಮ್ಮೆ ಹೀನಾಯ ಸ್ಥಿತಿಗೆ ದೂಡಿ ಹಿಂಸಿಸಿ ಕಾಡುವುದು. ಲೋಕದ ನೀತಿ-ರೀತಿ ಹೀಗೇಕೆ?

ಮೇಲೇಳಬಯಸಿದರೆ,
ಕಾಲೆಳೆಯುವವರೆಷ್ಟೋ. . .
ಬಿರುನುಡಿಯುವವರೆಷ್ಟೋ . . .
ಮೂಗು ಮುರಿಯುವವರೆಷ್ಟೋ . . .
ಮನಬಿಚ್ಚಿ ಹೊಗಳುವವರೆಷ್ಟೋ . . .

ಅದೇ ಕೆಳಗುರುಳಿದರೆ,
ತುಳಿಯುವವರೆಷ್ಟೋ. . .
ತೆಗಳುವವರೆಷ್ಟೋ . . .
ಹೀಯಾಳಿಸುವವರೆಷ್ಟೋ. . .
ನಿರ್ಲಕ್ಷಿಸುವವರೆಷ್ಟೋ . . .

ಬದಲೇ ಆಗದ ಸಮಾಜದ
ನಿಲುವು "ಹೀಗೇಕೆ" ?
ಲೋಕದ ಪರಿ ಇಂತೇಕೆ ? 
                                       -ಪ್ರಜ್ಞಮಾಲಾ

"ಬದುಕು"

ಮೂಡಿರಲು  ಮನದಲಿ ಗುರಿ ಮುಟ್ಟುವ ಧ್ಯೇಯ 
ಜೊತೆಯಾಗಿ ನಿನಗಿರಲಿ ಶ್ರಮವೆಂಬ ಸೈನ್ಯ 

ಬೀಸುವ ಬಿರುಗಾಳಿಯ ಧೈರ್ಯದಲಿ ಸೆಟೆದು,
ಕಡಲ ಅಬ್ಬರದ ಅಲೆಗಳ ಸ್ಥೈರ್ಯದಲಿ  ದಾಟಿ  ,  
ಮುಳ್ಳಿನ ಕಗ್ಗತ್ತಲೆಯ ಹಾದಿಗಳ ಕ್ರಮಿಸಿ 
ಏರುವೆ ನೀ ಸಾಧನೆಯ ಶಿಖರದೆತ್ತರವ

"ಜಯ"ವೆಂಬ ಫಲವ , ನವಚೈತನ್ಯವ   ಸವಿಯಲು
ಮರೆಯದಿರೆಂದಿಗೂ ಕತ್ತಲೆಯ ಕ್ಷಣಗಳನು ,
     ಇರುಳ ತಂಪನು ,
ಸುಧಾಂಶುವಿನ ಆರೈಕೆಯನು ...

ಬಾಳಿನ  ಸಾರವು ಇದುವೇ ಸದಾ . . .
                                          -ಪ್ರಜ್ಞಮಾಲಾ 




"ಆಸೆ "


ಬಯಸಿದಷ್ಟೂ  ದೂರ ಹೋಗುವುದೀ "ಆಸೆ" ಎಂಬ ಗಾಳಿಪಟ
ಕೈಗೆಟುಕೆ ಸಿಹಿಯು , ಇರದಿರೆ ಕಹಿಯು

ಕೆಲವೊಮ್ಮೆ ಬಿಗಿದಪ್ಪಿ ನೀಡುವುದು  ಸಂತಸ 
ಒಮ್ಮೊಮ್ಮೆ ಕಾಡಿಸಿ-ಪೀಡಿಸಿ ನೀಡುವುದು ದುಃಖ 


ಆದರೂ ಕೇಳದು ಈ ಹುಚ್ಚು ಮನಸು
ಕಾಯುತಾ ಕೂತಿಹುದು,
ಸೋಜಿಗದಿ  ನಿಲುಕುವ  
ಆಸೆಯೆಂಬ 'ಮರೀಚಿಕೆಯ' ನಿರೀಕ್ಷೆಯಲ್ಲಿ ನಿರಂತರ . . . 
                                                                     - ಪ್ರಜ್ಞಮಾಲಾ
 



"ನೆನಪಿನ ಆಳದಲಿ "

ಮೂಡಬಹುದೇ  ನನ್ನಲಿ ಮತ್ತದೇ ಒಲವು
'ನಿನ್ನ ' ನೆನಪುಗಳ ಕಳಚಿ ?

ಆ ಮೊದಲ ನೋಟ, ಆ ಮೊದಲ ನಗುವು
ಆ ಮೊದಲ ಮಾತು, ಆ ಮೊದಲ  ಮುನಿಸು
ಮೈನವಿರೇಳಿಸಿದ ನಿನ್ನ ಮೊದಲ ಸ್ಪರ್ಶ
ಮಧುರವೆನಿಸಿದ ನಿನ್ನ ಪ್ರತಿಯೊಂದು ಭಾವ
ನಿನ್ನೊಳಗೆ  ಲೀನಳಾಗಿ ಕಂಡ ನವ್ಯ ಭವಿಷ್ಯದ ಕನಸು

ಮರೆಯಲಿ ಹೀಗೆ ಹೇಳಿಬಿಡು . . .
ಪ್ರತಿಬಾರಿ ನಿನ್ನ ಕಂಡಾಗ ಆಗುತ್ತಿದ್ದ  ಪುಳಕ  ,
ಕಂಗಳಲೇ ನಡೆಯುತ್ತಿದ ಅದೆಷ್ಟೋ   ತುಂಟ ಸಲ್ಲಾಪ .
ಬೆರಗಾಗಿಸಿದ ಆ ಮೊದಲ  ಒಲವ ಕಾಣಿಕೆ ,
ಮೇಘ ಸಂದೇಶಗಳ  ಆ ಮಧುರ    ಒಡನಾಟ ,
ಕದ್ದುಮುಚ್ಚಿ ಆನಂದಿಸಿದ ಆ ಇರುಳ ಸುತ್ತಾಟ ,
ನನ್ನೆಲ್ಲಾ ಅಬೋಧ ನುಡಿಗಳ ನಗುಮೊಗದಿ ಆಲಿಸುತ್ತಿದ್ದ
ಆ ಭಾವುಕ ಕಂಗಳ ಸ್ಪಂದನ, ರೋಮಾಂಚನ . . . ?

ಕ್ಷಣಗಳಲಿ  ಒಡೆದೆ   ನನ್ನ ಸ್ವಪ್ನ  ಕೋಟೆ,
ಅಳುವಿನ ಮಡಿಲಲಿ ನನ್ನ ತೇಲಿಬಿಟ್ಟೆ ,
ಕೋಪ-ದುಮ್ಮಾನಗಳೇ ನನ್ನ ಸಂಗಾತಿ ಎಂದೇ
ಹುಡುಕಿದರೂ ಕಾಣದಂತೆ  ಎಲ್ಲಿ  ಮಾಯವಾದೆ?

ವರುಷಗಳೇ ಉರುಳಿಹುದು ನಿನ್ನ ನೆನಪಲ್ಲಿ,
ಮೂಡಿಹುದು ಬೆಳಕೊಂದು ಈಗ ಈ ಮಬ್ಬಿನಲ್ಲಿ
ತೋರುತಲಿಹುದು   ಹಾದಿಯ   ನವ್ಯ ರಥದಲ್ಲಿ  ,
ಜೊತೆಯಾಗುವೆ ಎನ್ನುತಲಿ  ನನ್ನ ಪ್ರತಿ ಕ್ಷಣಗಳಲ್ಲಿ
 

ಒಪ್ಪಲಿ ಹೇಗೆ ಈ ಅಗಂತುಕನನ್ನು?
ಅಳಿಸಲಿ ಹೇಗೆ ನನ್ನೀ  ಮನದಿಂದ ನಿನ್ನನ್ನು   ?
ಒಪ್ಪಿಸಲಿ ಹೇಗೆ ನನ್ನೀ ಒಡೆದ ಹೃದಯದ ಚೂರುಗಳನ್ನು  ?

ಏನ ನೀರೀಕ್ಷಿಸಲಿ ಈ ನವ್ಯ ಸುಧಾಂಶುವಿನಲಿ,
ಚಿಗುರಬಹುದೇ ಹಸಿರು ಈ ಬರಡು  ಭೂಮಿಯಲಿ ?...
                                                                     -ಪ್ರಜ್ಞಮಾಲಾ

"ಅರಿವಿನ ಹೊತ್ತಿಗೆಗಳೇ"

ಬಣ್ಣಿಸಲಿ ಹೇಗೆ ನಿಮ್ಮನು ಓ ಪುಸ್ತಕಗಳೇ ?!?

ಇರುವಿರಿ  ಜೊತೆಯಲಿ  ಜ್ಞಾನವ ತುಂಬುತಾ
ರಕ್ಷೆಯ  ಮಸ್ತಕಕೆ ನೀಡುವಿರಿ
ಜ್ಞಾನದ ಬೆಳಕನು ತುಂಬುತಾ ನೀವು
ಅಜ್ಞಾನದ ಕೊಳಕನು ಅಳಿಸುವಿರಿ

ಪುಟಗಳ ತುಂಬ ಮಾಹಿತಿ ನೀಡಿ
ಮನಸಿನ ದಾಹವ ತಣಿಸುವಿರಿ
ಪೋಷಿಸಿ ಮನವನು, ಸಲಹುತಾ ಸದ್ಗುಣಗಳನು
ಸುಸಂಸ್ಕೃತಿಯ ಅಲೆಯನು ಹರಿಸುವಿರಿ

ದುಃಖದಿ ಬಲವನ್ನು, ಸುಖದಲಿ ಪ್ರಜ್ಞೆಯ
      ನೀಡುತಾ ನೀವು
ಆತ್ಮಕೆ ಬಲವನ್ನು ನೀಡುವಿರಿ

ಮೇಧಾವಿಯ ತತ್ವವ  ಹೊರುತಲಿ ನೀವು
ಅರಿವಿನ ಸೌರಭ  ಹರಿಸುವಿರಿ
ನೀತಿಯ ನುಡಿಗಳ , ಲೋಕದ ಸತ್ಯವ
ಎಲ್ಲರ ಮುಂದೆ ಬಿಚ್ಚುವಿರಿ

ವಿದ್ಯಾದಾನವ ಮಾಡುತಾ ನೀವು
ನಿರಂತರ ಮನದಲಿ ನೆಲೆಸುವಿರಿ
ಚಿರಂತನ ಬೆಳಕನು ಮೂಡಿಸಿ  ನೀವು
ಅನುಭವಗಳ ವಿಸ್ತರಿಸುವಿರಿ

ಯಾರೂ ಕದಿಯದ ಸಂಪತ್ತಾಗಿ
ಭಾಷೆಯ ಕಂಪನು ಸೂಸುವಿರಿ
                                                 -ಪ್ರಜ್ಞಮಾಲಾ