Thursday, 27 September 2012

ಪ್ರೇಮಸುಧೆ




ಇಂದು ನನಗೇನಾಗಿದೆ,

ಮನಸು ನಿನ್ನೆಡೆಗೆ ಓಡುತಿದೆ ...


ಸ್ನಿಗ್ಧ , ಸುಂದರ ನಗುವ ಕಂಡು ,
ಹೃದಯ ಕಮಲ ಅರಳಿ ನಗುತಿದೆ 

ಕಣ್ಣೋಟದ ಮಿಂಚು ಸುಳಿದು    
ಕನಸೊಂದು  ಮುತ್ತಾಗಿ ಹೊಳೆದಿದೆ ...

ನಿನ್ನ ಮೋಹ ಮಾಯೆಗೆ 

ಮನ ಪತಂಗವಾಗಿ ನಲಿದಿದೆ ...


ಇನಿತು ಚಿಂತೆ ಇರದೇ  ,
ದುಂಬಿಯಾಗಿ  ಮನ ನಿನ್ನ ಸವಿಯ ಬಯಸಿದೆ...

ಚಿರನೂತನ  ಈ  ಅನುಭಾವಕೆ,
ಮನವು  ಹಗುರವಾಗಿದೆ, ಹರುಷಗೊಂಡಿದೆ  ...

ಅಂತರಂಗದಲ್ಲಿ ನಿನ್ನ ಭಾವ ಲೀನವಾಗಿದೆ...

ಪ್ರೇಮಸುಧೆಯ ಭಾವಗೀತೆ , 
 ರಮ್ಯಗಾನವ ನಿನಗೆಂದೇ  ಉಲಿಯುತಲಿದೆ ...

ಹಿಮ ಕರಗಿದ ಬಳಿಕ


ಹಿಮ ಕರಗಿದ ಬಳಿಕ

ಹಕ್ಕಿಯ ಇಂಚರದಲ್ಲಿ, 
ನೇಸರನ ಕೆಂಪಿನಲ್ಲಿ ,  
ಹಿಮದ ತಂಪಿನಲ್ಲಿ 
ನಿನ್ನ ನೆನಪುಗಳು ನನ್ನ ಅಪ್ಪಿಹುದು ಗೆಳೆಯ 
ಬಾಳಲಿ  ಪ್ರೀತಿಯ ಮಾಧುರ್ಯವ 
ತುಂಬಿದವ ನೀನೇ  ಇನಿಯ 

ಕನಸುಗಳ ಬಳ್ಳಿ ಮುರುಟಿತು ಹೇಗೋ   
ಕಳೆದು ಹೋದೆ ನೀನು ,ಮರೆಯಾದೆ ನೀನು... 



ಒಲವ  ಜ್ವಾಲೆಯ ನಿರಂತರ ಉರಿಸಿಹೆನು ನಾನು
ಮೇಣದಂತೆ  ಕರಗುತಿಹೆನು  ನಾನು
ಪ್ರೀತಿಯ ಅಮಿತ ಹಿತವ   
ನಿನಗಾಗೆ ಕಾಯ್ದಿರಿಸಿಹೆನು  ನಾನು  

ಮನಸು ಕರಗದೆ ನಿನಗೆ ?
ನೆನಪುಗಳು ಕಾಡದೆ ನಿನಗೆ ?
ಕಂಡರೂ ಕಾಣದಂತೆ ,
ನಿರ್ಜೀವ ಕೊರಡಾಗಿಹೆ ಏಕೋ ...
ನೀ ಹೀಗೇಕೋ ?....

ಹಿಮ ಕರಗಿದ ಬಳಿಕ ...
ಕತ್ತಲು ಕವಿದ ಬಳಿಕ ..
ಕಾಲ ನಿಂತ ಬಳಿಕ ...
ತೋರುವೆ ಯಾರಿಗೆ  ಆ ಪ್ರೀತಿಯ ಹೇಳು,
ಸಮಯ ನಶಿಸಿದ ಬಳಿಕ ...?



Saturday, 15 September 2012

" ನನ್ನವನು "

" ನನ್ನವನು " 


ಪ್ರೀತಿಯ ನಿರಾಸೆಯಲಿ ಬೇಯಲಾರೆ  ಇನ್ನು ....

ಕಾಯ್ದಿರಿಸುವೆನು ಭದ್ರದಲಿ ಹೃದಯದ ಚೂರುಗಳ ನಾನು ,

ಬಂದೇ  ಬರುವನು ಅವನು 

ಚೂರುಗಳ ಇರಿತಕೆ ಇಬ್ಬನಿಯಾಗುವವನು,

ಕಹಿ-ಕದಡಿದ ಮನಕೆ ಸಿಹಿ-ಜೇನ ಲೇಪಿಸುವವನು   


ಬರುವನು ಅವನು ,

ಬಾಡಿ ಹೋದ ಬಯಕೆಗಳ  ಚೇತನವಾಗುವವನು

ನೊಂದ ಮನಕೆ ನಂಬುಗೆಯ  ಶಾಕವಾಗುವವನು


ದಿಗ್ಗೆಡಿಸುವ ಕತ್ತಲಲಿ  ಬೆಳದಿಂಗಳಾಗುವವನು

ಬಾಳ ಪಟದಲಿ ನವ್ಯ ಕನಸುಗಳ ಬಿತ್ತುವವನು  


ಬರುವನು ಅವನು  

 ಭುಗಿಲೆದ್ದ  ಎಕಾಂತಕೆ ಅಂತ್ಯ  ಹಾಡುವನು

ಪ್ರೀತಿಯ  ಪಸರಿಸಿ , ಮನವ ಬೆಳಗುವ  ಪ್ರಭೆಯಾಗುವನು   

ಕಣ್ಣೀರ  ಮುತ್ತಾಗಿಸಿ , 

ಮನವ ಖಗವಾಗಿಸಿ 

ನವೋಲ್ಲಾಸಗಳ  ಸ್ಫುರಿಸುವನು 


ಬಂದೇ  ಬರುವನು 

ನನ್ನ ಪುರುಶೋತ್ತಮನು