ಇಲ್ಲಿ ಮಧ್ಯರಾತ್ರಿಯು , ಗೊಂದಲಗೊಂಡ ("ಅತ್ತ ದರಿ, ಇತ್ತ ಪುಲಿ " ಯಂತಹ) ಸಂದಿಗ್ಧ ಪರಿಸ್ಥಿತಿಯಲ್ಲಿರುವ ನಮ್ಮ ಚಿತ್ತವನ್ನು ಹೋಲುವುದು ,
ಮಧುರವಾದ, ಮುಂದೆಂದೂ ಬರದ ಹಿಂದಿನ ನೆನಪುಗಳ"ಕಲ್ಪನಾಲೋಕದಲ್ಲಿ " ಲೀನವಾದರೆ ಮನಸಿಗೆ, ನಮ್ಮ ಅಸ್ತಿತ್ವಕ್ಕೆ ಆಗುವ ತೊಂದರೆಗಳು
ಹಾಗು
ಏಕಾಂಗಿಯಾಗಿ ಮುನ್ನಡೆದರೆ , ಮುಂಬರುವ ಅನಿಶ್ಚಿತ ಸಂದರ್ಭಗಳಿಗೆ ಹೆದರುವ ಪ್ರಜ್ಞೆಯನ್ನು ಚಿತ್ರಿಸುವುದು .
ಶಶಿಯು ಇರುಳ ಕತ್ತಲನ್ನು ತೊಡೆದು ಬೆಳದಿಂಗಳ ಸೊಬಗು ನೀಡುವಂತೆ , ಪ್ರೀತಿ ಬಾಳ ಸುಧಾಂಶು .....
ಪ್ರಿಯತಮನೇ "ನೀನು ನನ್ನನ್ನು ಮರೆತುಬಿಡು" ಎಂದು ದೂರವಾದಾಗ ದಿಗ್ಗೆಡಿಸುವ ನೋವು ......
"ನಿಶಿತ ಈ ನಿಶೀಥ "
"ಯಾರಿಂದಲೂ ಯಾರಿಲ್ಲ ,
ಜಗವೆಲ್ಲಾ ನೀನೇ ಅಲ್ಲ . . ."
ನಿನ್ನೀ ಮಾತು ಗುಂಯ್ ಗುಡುತ್ತಿದೆ
ನನ್ನ ಮೈ-ಮನದಲ್ಲಿ . . .
ಛಿದ್ರಗೊಳಿಸಿದೆ ಏಕೆ,
ನೀನೇ ನನ್ನೊಳಗೆ ಬೆಳೆಸಿದ್ದ ಒಲ್ಮೆಯ ಪರದೆಯನು?
ಸವೆಸಲಿ ಹೇಗೆ ನನ್ನೀ ವ್ಯಥೆಯ ಬದುಕನ್ನು ?
ಮೈಮರೆತರೆ, . . . ಸೆಳೆಯುವುದು
ಭ್ರಮೆಯ "ರೇ" ಪ್ರಪಂಚ . . .
ಸರ್ವನಾಶವೇ ಅದರ ಘೋರ ಅಂತ್ಯ
ಮುನ್ನಡೆದರೆ ... ಹೆದರುತಿದೆ ಜೀವ
ಎದುರುಗೊಳ್ಳಲಿ ಹೇಗೆ ನಾನೊಬ್ಬಳೆ ....
ನೀನಿಲ್ಲದ ಆ ನಿಬಿಡ ಲೋಕ ?
ಅಂತ್ಯವಿಲ್ಲವೇ
ನನ್ನ ಮೂಕವೇದನೆಗೆ . . .?
ಶಶಿಯೇ ಇಲ್ಲವೇ
ನನ್ನೀ ಬಾಳ ಶರ್ವರಿಗೆ . . .?
ಇದೇ ನಿನ್ನ ಕಾಣಿಕೆಯೇ ,
ಕಪಟವಿಲ್ಲದ ನನ್ನ ಭಕುತಿಗೆ . . .?
-ಪ್ರಜ್ಞಮಾಲಾ
0 comments:
Post a Comment