Wednesday 6 July, 2011

"ನೆನಪಿನ ಆಳದಲಿ "

ಮೂಡಬಹುದೇ  ನನ್ನಲಿ ಮತ್ತದೇ ಒಲವು
'ನಿನ್ನ ' ನೆನಪುಗಳ ಕಳಚಿ ?

ಆ ಮೊದಲ ನೋಟ, ಆ ಮೊದಲ ನಗುವು
ಆ ಮೊದಲ ಮಾತು, ಆ ಮೊದಲ  ಮುನಿಸು
ಮೈನವಿರೇಳಿಸಿದ ನಿನ್ನ ಮೊದಲ ಸ್ಪರ್ಶ
ಮಧುರವೆನಿಸಿದ ನಿನ್ನ ಪ್ರತಿಯೊಂದು ಭಾವ
ನಿನ್ನೊಳಗೆ  ಲೀನಳಾಗಿ ಕಂಡ ನವ್ಯ ಭವಿಷ್ಯದ ಕನಸು

ಮರೆಯಲಿ ಹೀಗೆ ಹೇಳಿಬಿಡು . . .
ಪ್ರತಿಬಾರಿ ನಿನ್ನ ಕಂಡಾಗ ಆಗುತ್ತಿದ್ದ  ಪುಳಕ  ,
ಕಂಗಳಲೇ ನಡೆಯುತ್ತಿದ ಅದೆಷ್ಟೋ   ತುಂಟ ಸಲ್ಲಾಪ .
ಬೆರಗಾಗಿಸಿದ ಆ ಮೊದಲ  ಒಲವ ಕಾಣಿಕೆ ,
ಮೇಘ ಸಂದೇಶಗಳ  ಆ ಮಧುರ    ಒಡನಾಟ ,
ಕದ್ದುಮುಚ್ಚಿ ಆನಂದಿಸಿದ ಆ ಇರುಳ ಸುತ್ತಾಟ ,
ನನ್ನೆಲ್ಲಾ ಅಬೋಧ ನುಡಿಗಳ ನಗುಮೊಗದಿ ಆಲಿಸುತ್ತಿದ್ದ
ಆ ಭಾವುಕ ಕಂಗಳ ಸ್ಪಂದನ, ರೋಮಾಂಚನ . . . ?

ಕ್ಷಣಗಳಲಿ  ಒಡೆದೆ   ನನ್ನ ಸ್ವಪ್ನ  ಕೋಟೆ,
ಅಳುವಿನ ಮಡಿಲಲಿ ನನ್ನ ತೇಲಿಬಿಟ್ಟೆ ,
ಕೋಪ-ದುಮ್ಮಾನಗಳೇ ನನ್ನ ಸಂಗಾತಿ ಎಂದೇ
ಹುಡುಕಿದರೂ ಕಾಣದಂತೆ  ಎಲ್ಲಿ  ಮಾಯವಾದೆ?

ವರುಷಗಳೇ ಉರುಳಿಹುದು ನಿನ್ನ ನೆನಪಲ್ಲಿ,
ಮೂಡಿಹುದು ಬೆಳಕೊಂದು ಈಗ ಈ ಮಬ್ಬಿನಲ್ಲಿ
ತೋರುತಲಿಹುದು   ಹಾದಿಯ   ನವ್ಯ ರಥದಲ್ಲಿ  ,
ಜೊತೆಯಾಗುವೆ ಎನ್ನುತಲಿ  ನನ್ನ ಪ್ರತಿ ಕ್ಷಣಗಳಲ್ಲಿ
 

ಒಪ್ಪಲಿ ಹೇಗೆ ಈ ಅಗಂತುಕನನ್ನು?
ಅಳಿಸಲಿ ಹೇಗೆ ನನ್ನೀ  ಮನದಿಂದ ನಿನ್ನನ್ನು   ?
ಒಪ್ಪಿಸಲಿ ಹೇಗೆ ನನ್ನೀ ಒಡೆದ ಹೃದಯದ ಚೂರುಗಳನ್ನು  ?

ಏನ ನೀರೀಕ್ಷಿಸಲಿ ಈ ನವ್ಯ ಸುಧಾಂಶುವಿನಲಿ,
ಚಿಗುರಬಹುದೇ ಹಸಿರು ಈ ಬರಡು  ಭೂಮಿಯಲಿ ?...
                                                                     -ಪ್ರಜ್ಞಮಾಲಾ

0 comments:

Post a Comment